✍️ ಪ್ರಜ್ವಲಾ ಶೆಣೈ,ಕಾರ್ಕಳ
ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶೇಷ ಆದ್ಯತೆಯನ್ನು ನೀಡಲಾಗುತ್ತದೆ. ಅದರಲ್ಲೂ ಗಣಪತಿ ಹಬ್ಬ ಎಂದರೆ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇಷ್ಟ. ಗಣೇಶ, ವಿಘ್ನೇಶ, ವಿನಾಯಕ, ಏಕದಂತ, ಲಂಬೋದರ, ಬಾಲಚಂದ್ರ ಗಜಾನನ , ಗಜವದನ ,ವಿದ್ಯಾಪತಿ, ಇತ್ಯಾದಿ ಹೆಸರುಗಳಿಂದ ಪ್ರಸಿದ್ಧಿಯಾದ ಗಣಪತಿಗೆ ಯಾವುದೇ ಶುಭ ಕಾರ್ಯಗಳಲ್ಲಿ ಅಗ್ರಸ್ಥಾನ. ಮೊದಲು ಗಣಪತಿಯನ್ನು ಪೂಜಿಸಿ ಆ ಕಾರ್ಯ ಆರಂಭ ಮಾಡಿದರೆ ಸಕಲವೂ ಶುಭ ಎನ್ನುವ ನಂಬಿಕೆ ಇದೆ. ಪ್ರತಿ ದೇವರಿಗೆ ಅವರಿಗೆ ಪ್ರಿಯವಾದ ವಸ್ತುವನ್ನು ಅರ್ಪಿಸುವುದು ವಾಡಿಕೆ. ಕೃಷ್ಣನಿಗೆ ತುಳಸಿ, ಶಿವನಿಗೆ ಬಿಲ್ವಪತ್ರೆ ಅರ್ಪಿಸುವಂತೆ ಗಣಪತಿ ಎಂದಾಗ ಮೊದಲು ನೆನಪಾಗುವುದು ಗರಿಕೆ ಹುಲ್ಲು.ಗಣೇಶನಿಗೆ ಅತ್ಯಂತ ಪ್ರಿಯವಾದ ಗರಿಕೆ ಹುಲ್ಲನ್ನು ಅದರಲ್ಲೂ 21 ಗರಿಕೆಯನ್ನು ಗಣೇಶನಿಗೆ ಅರ್ಪಿಸಲಾಗುತ್ತದೆ. ಗಣೇಶನನ್ನು ಗರಿಕೆ ಹುಲ್ಲಿನ ಹಾರದಿಂದ ಶೃಂಗರಿಸಿರುವ ಸೊಬಗನ್ನು ನೋಡಲು ಎರಡು ಕಣ್ಣು ಸಾಲದು. ಬಣ್ಣ ಬಣ್ಣದ ,ವಿಧ ವಿಧವಾದ ಹೂಗಳಿದ್ದರೂ ಚಿಕ್ಕದಾದ ಗರಿಕೆ ಹುಲ್ಲು ಹೇಗೆ ಗಣಪತಿಯ ಮನ ಗೆದ್ದಿತು ಎನ್ನುವುದಕ್ಕೆ ಇಲ್ಲೊಂದು ಪೌರಾಣಿಕ ಹಿನ್ನೆಲೆ ಇದೆ. ಹಿಂದೆ ಅನಲಾಸುರನೆಂಬ ರಾಕ್ಷಸನು ಸ್ವರ್ಗಕ್ಕೆ ಬಂದು ದೇವತೆಗಳಿಗೆಲ್ಲ ತೊಂದರೆ ಕೊಡುತ್ತಿದ್ದನು. ಅನಲಾಸುರ ರಾಕ್ಷಸನು ತನ್ನ ಕಣ್ಣಿನಿಂದ ಬೆಂಕಿಯ ಉಂಡೆಗಳನ್ನು ಹೊರ ಹಾಕುವ ಒಂದು ವಿಶಿಷ್ಟವಾದ ಶಕ್ತಿಯನ್ನು ಹೊಂದಿದ್ದನು. ದೇವತೆಗಳೆಲ್ಲ ರಾಕ್ಷಸನ ಉಪಟಳದಿಂದ ಭಯಭೀತಗೊಂಡು ಗಣಪತಿಯ ಮೊರೆ ಹೋದರು. ಗಣಪತಿ ಮತ್ತು ಅನಲಾಸುರ ರಾಕ್ಷಸನ ಮಧ್ಯೆ ಭೀಕರ ಯುದ್ಧ ನಡೆಯಿತು. ರಾಕ್ಷಸನೂ ತನ್ನ ಕಣ್ಣಿನಿಂದ ಬೆಂಕಿ ಉಂಡೆಗಳನ್ನು ಎಸೆದಾಗ ಗಣಪತಿಯು ಕುಪಿತಗೊಂಡು ಅಸುರನನ್ನು ಸಂಹರಿಸಲು ವಿರಾಟ ರೂಪ ತಾಳಿ ಅನಲಾಸುರನನ್ನು ನುಂಗಿಬಿಡುವನು. ಇದರಿಂದ ಗಣಪತಿಯ ದೇಹದಲ್ಲಿ ಉಷ್ಣಾಂಶ ಅಧಿಕವಾಗಿ ಹೊಟ್ಟೆ ಊದಿಕೊಳ್ಳುತ್ತದೆ. ಚಂದ್ರನು ಗಣೇಶನ ಸಹಾಯಕ್ಕೆ ಬಂದು ಆತನು ಶಾಂತವಾಗಲೆಂದು ತಲೆಯ ಮೇಲೆ ಕುಳಿತನು. ವಿಷ್ಣು ಕಮಲವನ್ನು ನೀಡಿ ಗಣಪತಿಯ ನೋವನ್ನು ಶಮನ ಮಾಡಲು ನೋಡಿದನು. ಶಿವನು ಹಾವನ್ನು ಗಣಪತಿಯ ಹೊಟ್ಟೆಗೆ ಸುತ್ತಿದನು. ದೇವತೆಗಳೆಲ್ಲ ಹರಸಾಹಸ ಮಾಡಿದರು ಗಣಪತಿಯ ನೋವು ಕಡಿಮೆಯಾಗಲಿಲ್ಲ. ಕೊನೆಗೆ ಋಷಿಮುನಿಗಳು 21 ಗರಿಕೆ ಹುಲ್ಲನ್ನು ಗಣಪತಿಯ ತಲೆಯ ಮೇಲೆ ಇಟ್ಟಾಗ ಗಣಪತಿಯ ದೇಹದ ಉಷ್ಣಾಂಶ ಕಡಿಮೆಯಾಗಿ ನೋವು ಕಡಿಮೆ ಯಾಗಿ ಗುಣಮುಖನಾದನು. ಅಂದಿನಿಂದ ಗಣಪತಿ ಯಾರು ತನಗೆ ಗರಿಕೆ ಅರ್ಪಿಸುತ್ತಾರೋ ಅವರ ಮೇಲೆ ಸದಾ ನನ್ನ ಆಶೀರ್ವಾದ ಇರುವುದು ಎಂದು ಹೇಳಿದನು. ಪೌರಾಣಿಕ ಹಿನ್ನೆಲೆಯಲ್ಲದೆ ವೈಜ್ಞಾನಿಕವಾಗಿಯೂ ಗರಿಕೆಗೆ ದೇಹದ ಉಷ್ಣತೆಯನ್ನು ಶಮನಗೊಳಿಸುವ ಗುಣವಿದೆ. ಸಂಖ್ಯಾಶಾಸ್ತ್ರದ ಪ್ರಕಾರ 21 ಅಂದರೆ 2+1=3 ಅಂದರೆ ಗರಿಕೆಯು 3 ಚೂಪಾದ ಎಳೆಗಳ ಆಕಾರವನ್ನು ಹೊಂದಿದ್ದು ಮೂರು ದೇವ ತತ್ವಗಳಾದ ಶಿವ, ಶಕ್ತಿ ಹಾಗೂ ಗಣಪತಿಯನ್ನು ಪ್ರತಿನಿಧಿಸುತ್ತದೆ. ಗಣಪತಿಗೆ ಎಳೆಯ ಗರಿಕೆಯನ್ನು ಅರ್ಪಿಸಲಾಗುತ್ತದೆ. ಎಳೆ ಗರಿಕೆಗೆ ಬಾಲತ್ರಣಂ ಎನ್ನುತ್ತಾರೆ. ಗರಿಕೆ ಅರ್ಪಿಸದಿದ್ದರೆ ಗಣೇಶ ಮತ್ಯಾವ ನೈವೇದ್ಯ ಸ್ವೀಕರಿಸುವುದಿಲ್ಲ ಗಣೇಶ ಗರಿಕೆಯನ್ನೇ ಆಹಾರವನ್ನಾಗಿ ಸೇವಿಸುತ್ತಾನೆ ಎಂಬ ನಂಬಿಕೆ ಇದೆ.
ಗಣಪತಿಗೆ ತುಳಸಿ ವರ್ಜ್ಯ ಏಕೆ?
ಹಿಂದೂ ಸಂಸ್ಕೃತಿಯ ಪೂಜಾ ವಿಧಿ ವಿಧಾನಗಳಲ್ಲಿ ತುಳಸಿಗೆ ಮೊದಲ ಸ್ಥಾನ ಅದರ ನಂತರದ ಸ್ಥಾನ ಗರಿಕೆಗೆ .ಆದರೆ ಗಣೇಶನ ಪೂಜೆಯಲ್ಲಿ ತುಳಸಿ ವರ್ಜ್ಯ. ತುಲಸೀ ವರಜಯಿತ್ವಾ ಸರ್ವಾನ್ಯಪಿ ಗಣಪತಿ ಪ್ರಿಯಾಣಿ ಪುಷ್ಪಾಣಿ ಅಂದರೆ ತುಳಸಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಹೂಗಳು ಹಾಗೂ ಹಣ್ಣುಗಳನ್ನು ಗಣಪತಿಗೆ ಅರ್ಪಿಸಬಹುದು. ಗಣಪತಿಗೆ ತುಳಸಿ ಅರ್ಪಿಸುವುದನ್ನು ಶಾಸ್ತ್ರದಲ್ಲಿ ಸ್ಪಷ್ಟವಾಗಿ ನಿಷೇಧಿಸಲಾಗಿದೆ.ಗಣಪತಿ ಹಾಗೂ ತುಳಸಿಯ ಪರಸ್ಪರ ಶಾಪದ ಕತೆಗಳು ಪುರಾಣಗಳಲ್ಲಿ ಉಲ್ಲೇಖವಾಗಿದೆ.ವಿಷ್ಣುವಿನ ಪರಮ ಭಕ್ತೆಯಾದ ತುಳಸಿ ವಿಷ್ಣುವಿನ ಮಹಾ ಭಕ್ತೆಯಾಗಿದ್ದು ಭಗವಂತನನ್ನು ಹುಡುಕುತ್ತಾ ಹೋಗುವಾಗ ಗಂಗೆಯ ತಟದಲ್ಲಿ ಕುಳಿತಿದ್ದ ಸುರದ್ರೂಪಿ ಗಣಪತಿಯನ್ನು ಕಂಡು ಮೋಹಪರವಶಳಾದಳು.ತನ್ನನ್ನು ವಿವಾಹ ವಾಗುವೆಯಾ ಎಂದು ತುಳಸಿ ಕೇಳಿದಾಗ ಗಣಪತಿ ತಾನು ಬ್ರಹ್ಮಾಚಾರಿ. ತಾನು ಯಾರನ್ನೂ ಮದುವೆಯಾಗಲಾರೆ ಎಂದು ಪ್ರತಿಜ್ಞೆ ಮಾಡಿರುವುದಾಗಿ ತಿಳಿಸಿ ತುಳಸಿಯನ್ನು ತಿರಸ್ಕರಿಸಿದನು.ಸುರಸುಂದರಿ ತುಳಸಿ ತಿರಸ್ಕಾರದಿಂದ ಅಪಮಾನಿತಳಾಗಿ ಗಣಪತಿಯ ಪ್ರತಿಜ್ಞೆ ಮುರಿದು ಎರಡು ಬಾರಿ ಮದುವೆಯಾಗುವಂತೆ ಆಗಲಿ ಎಂದು ಶಪಿಸಿದಳು. ಮುಂದೆ ಈ ಶಾಪದಂತೆ ಗಣಪತಿ ಸಿದ್ಧಿ ಬುದ್ಧಿಯರನ್ನು ವರಿಸಿ ಶುಭ ಲಾಭ ಎಂಬ ಮಕ್ಕಳನ್ನು ಪಡೆದನು.ತುಳಸಿಯ ಶಾಪದ ಪ್ರತಿಯಾಗಿ ಕುಪಿತಗೊಂಡ ಗಣಪತಿ ತುಳಸಿ ಅಸುರನನ್ನು ಮದುವೆಯಾಗುವಂತೆ ಆಗಲಿ ಎಂದು ಶಪಿಸಿದನು. ತನ್ನ ತಪ್ಪಿನ ಅರಿವಾಗಿ ತುಳಸಿ ಗಣಪತಿಯಲ್ಲಿ ಕ್ಷಮೆ ಕೋರಿದಾಗ ಗಣಪತಿ ಮರುಗಿ ಕೊಟ್ಟ ಶಾಪವನ್ನು ಮರಳಿ ಪಡೆಯಲಾಗದು.ಆದರೆ ಪುನರ್ಜನ್ಮದ ನಂತರ ದೇವತೆಗಳ ಅನುಗ್ರಹದಿಂದ ಭೂಲೋಕದಲ್ಲಿ ನೀನು ಪವಿತ್ರ ಗಿಡವಾಗಿ ಜನಿಸು. ಸಸ್ಯಗಳ ನಡುವೆ ನಿನಗೇ ಮೊದಲ ಪ್ರಾಶಸ್ತ್ಯ ದೊರಕುವುದು.ನೀನು ಸಸ್ಯಗಳಲ್ಲಿ ವಿಶಿಷ್ಟವಾಗಿ ಗುರುತಿಸಿಕೊಳ್ಳುವೆ. ನಿನ್ನ ಎಲೆಗಳಿಂದ ಎಲ್ಲರೂ ಪರಿಶುದ್ಧರಾಗುವರು ಎಂದು ಹರಸಿದನು.ಆದರೆ ತನ್ನ ಬ್ರಹ್ಮಚರ್ಯದ ಪ್ರತಿಜ್ಞೆ ಮುರಿಯುವಂತೆ ಮಾಡಿರುವುದರಿಂದ ತುಳಸಿ ಎಲೆಗಳನ್ನು ನನಗೆ ಅರ್ಪಿಸುವಂತೆ ಇಲ್ಲ . ಗಣಪತಿಯ ಶಾಪದಂತೆ ತುಳಸಿಯು ಮರುಜನ್ಮದಲ್ಲಿ ವೃಂದಾ ಆಗಿ ಜನಿಸಿ ಜಲಂಧರ ಎನ್ನುವ ಅಸುರನನ್ನು ವಿವಾಹವಾಗಬೇಕಾಯಿತು. ವೃಂದಾಗೆ ವಿಷ್ಣುವಿನ ಮೇಲೆ ಅಪಾರ ಭಕ್ತಿ.ಆದರೆ ಜಲಂಧರನಿಗೆ ಇದು ಇಷ್ಟವಿರಲಿಲ್ಲ . ಮಹಾ ಪತಿವೃತೆಯಾದ ವೃಂದಾಳಿಂದ ಜಲಂಧರನ ಶಕ್ತಿ ಇಮ್ಮಡಿಯಾಯಿತು.ಆತ ದೇವತೆಗಳಿಗೆ ತೊಂದರೆ ಮಾಡತೊಡಗಿದ.ಇದರಿಂದ ದಿಕ್ಕು ತೋಚದೆ ಶಿವ ವಿಷ್ಣುವಿನ ಮೊರೆ ಹೋದನು.ವಿಷ್ಣು ಜಲಂಧರನ ರೂಪ ಧರಿಸಿ ವೃಂದಾಳ ಪಾತಿವ್ರತ್ಯಕ್ಕೆ ಧಕ್ಕೆ ತಂದನು.ಇತ್ತ ಶಿವ ಜಲಂಧರನನ್ನು ವಧಿಸಿದನು. ಇದರಿಂದ ಕುಪಿತಗೊಂಡ ವೃಂದಾ ತನ್ನ ಚಾರಿತ್ರ್ಯಕ್ಕೆ ಧಕ್ಕೆ ತಂದ ವಿಷ್ಣುವಿಗೆ ಪತ್ನಿ ವಿಯೋಗ ಉಂಟಾಗಲಿ ಎಂದು ಶಪಿಸಿ ಪತಿಯ ಚಿತೆಗೆ ಹಾರಿ ಪ್ರಾಣ ಕಳೆದು ಕೊಂಡಳು.ಮುಂದೆ ವಿಷ್ಣುವಿನ ರಾಮಾವತಾರದಲ್ಲಿ ಸೀತೆಯಿಂದ ದೂರವಾಗುವಂತೆ ಆಯಿತು.ವಿಷ್ಣು ಆಕೆಯ ಆತ್ಮವನ್ನು ತುಳಸಿ ಗಿಡವಾಗಿ ಪರಿವರ್ತಿಸಿ ತನ್ನ ತಪ್ಪಿಗೆ ಪ್ರಾಯಶ್ಚಿತ್ತವಾಗಿ ತುಳಸಿಯನ್ನು ಪತ್ನಿಯಾಗಿ ಸ್ವೀಕರಿಸಿದನು. ಹೀಗಾಗಿ ತುಳಸಿ ವಿಷ್ಣುವಿಗೆ ಸೇರಿದವಳು.ವಿಷ್ಣು ಹಾಗೂ ವಿಷ್ಣುವಿನ ಅವತಾರದ ದೇವತೆಗಳಿಗೆ ಮಾತ್ರ ತುಳಸಿ ಎಲೆ ಸಮರ್ಪಿಸಬೇಕು ಎನ್ನುವ ಪದ್ಧತಿ ರೂಢಿಗೆ ಬಂತು.ಎಲ್ಲರಿಗೂ ಗಣೇಶ ಚತುರ್ಥಿ ಶುಭಲಾಭವನ್ನು ಉಂಟು ಮಾಡಲಿ.ಸರ್ವೇ ಜನಾಃ ಸುಖಿನೋ ಭವಂತು.