ಕಾರ್ಕಳ: ಕಾರ್ಕಳ ತಾಲೂಕು ಭಂಡಾರಿ ಮಹಿಳಾ ಸಂಘದ ವತಿಯಿಂದ ಮಹಿಳಾ ದಿನಾಚರಣೆಯು ಕಾಬೆಟ್ಟು ಸುಜಾತ ಯೋಗಿಶ್ ಭಂಡಾರಿ ಯವರ ನಿವಾಸದಲ್ಲಿ ಜರುಗಿತು.
ಕಾರ್ಕಳ ವೆಂಕಟರಮಣ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆಯವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಹಿಂದಿನ ಕಾಲದಲ್ಲಿ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಸ್ಥಿತಿ ಗತಿ ಹೇಗಿತ್ತು, ಯಾವೆಲ್ಲಾ ಕಟ್ಟು ಪಾಡುಗಳು ,ಬವಣೆಗಳನ್ನು ಅನುಭವಿಸುತ್ತಿದ್ದಳು ಎಂಬುದನ್ನು ಉದಾಹರಣೆಯ ಮುಖಾಂತರ ವಿವರಿಸಿದರು.ಇಂದು ಶಿಕ್ಷಣ ಪಡೆಯುವ ಮೂಲಕ ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸ್ವಾವಲಂಬಿಯಾಗಿ ಬದುಕುವಷ್ಟರ ಮಟ್ಟಿಗೆ ಬದಲಾಗಿದ್ದಾಳೆ. ಆದರೆ ಇಂದು ಮಹಿಳೆಗೆ ಸಿಕ್ಕಿರುವ ಸ್ವಾತಂತ್ರ್ಯ ಸ್ವಚ್ಚಂದವಾಗಬಾರದು ಎಂದು ತಿಳಿ ಹೇಳಿದರು.ಈ ಸಂದರ್ಭದಲ್ಲಿ 16 ವರ್ಷಗಳ ಕಾಲ ಅಂಗನವಾಡಿ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿರುವ ವಸಂತಿ ಭಂಡಾರಿ ನಕ್ರೆ ಹಾಗೂ ಅಂಗವೈಕಲ್ಯವನ್ನು ಮೆಟ್ಟಿ ನಿಂತ ಮಾಲಿನಿ ಭಂಡಾರಿ ಇವರನ್ನು ಸನ್ಮಾನಿಸಲಾಯಿತು.ಸನ್ಮಾನಿತರು ಸಂಘದ ಕಾರ್ಯಕ್ರಮಗಳಿಗೆ ಶುಭಹಾರೈಸಿದರು.
ಮಹಿಳಾ ಸಂಘದ ಅಧ್ಯಕ್ಷೆ ವೀಣಾ ರಾಜೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದಲ್ಲಿ ಇನ್ನಷ್ಟು ಕಾರ್ಯಕ್ರಮ ನಡೆಯಲಿದೆ ನಿಮ್ಮೆಲ್ಲರ ಪ್ರೋತ್ಸಾಹ ,ಸಹಕಾರ ,ಸಂಘದ ಮೇಲೆ ಅಭಿಮಾನ ಹೀಗೆ ಇರಲಿ ಎಂದರು.
ವೇದಿಕೆಯಲ್ಲಿ ಗೌರವಾಧ್ಯಕ್ಷೆ ವಸಂತಿ ನಕ್ರೆ ಉಪಸ್ಥಿತರಿದ್ದರು. ಕುಮಾರಿ ರಿಯಾ ಪ್ರಾರ್ಥನೆ ಮಾಡಿದರು.ಲತಾಹರೀಶ್ ಕಾರ್ಯಕ್ರಮ ನಿರೂಪಿಸಿದರು. ರೇಷ್ಮಾ ಭಂಡಾರಿ ಸ್ವಾಗತಿಸಿದರು. ಸುಮನಾ ಕೃಷ್ಣ ಭಂಡಾರಿ ವಂದಿಸಿದರು.ಸುಜಾತ ಯೋಗಿಶ್ ಭಂಡಾರಿ ಸಹಕರಿಸಿದರು