Share this news

ಕಾರ್ಕಳ:ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್, ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು ಜನತೆಗೆ ಎಸಗಿದ ದ್ರೋಹವನ್ನು ಉಲ್ಲೇಖಿಸಿದ್ದರು, ಮತ್ತು ಈ ವಿಚಾರವಾಗಿ ಕಾಂಗ್ರೆಸ್ ಪಕ್ಷ ಸಮರ್ಥವಾಗಿ ಹೋರಾಟ ನಡೆಸಬೇಕು ಎಂದು ಬಹಿರಂಗ ಸಭೆಯಲ್ಲಿ ಕರೆ ನೀಡಿದ್ದರು. ಡಿ.ಕೆ. ಶಿವಕುಮಾರ್ ಅವರ ಮಾತಿನಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಯಾಗಿದ್ದು ನಕಲಿ ಪರಶುರಾಮ ಪ್ರತಿಮೆ ಹಗರಣದ ವಿಚಾರದಲ್ಲಿ ತೀವ್ರ ಹೋರಾಟವನ್ನು ನಡೆಸುತ್ತಾ ಬಂದಿದ್ದು,ಈ ವಿಚಾರದಲ್ಲಿ ಉಡುಪಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಜಗೋಳಿ ಕೃಷ್ಣ ಶೆಟ್ಟಿಯವರು ಡಿಕೆ ಶಿವಕುಮಾರ್ ಹೇಳಿಕೆ ಕುರಿತು ಸ್ಪಷ್ಟನೆ ನೀಡಬೇಕು ಎಂದಿರುವುದು ಖಂಡನೀಯ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯೊಗೀಶ್ ಆಚಾರ್ಯ ಇನ್ನಾ ಹೇಳಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾತಿನಿಂದ ಕಂಗಾಲಾಗಿದ್ದ ಕಾರ್ಕಳ ಶಾಸಕ ಸುನೀಲ್ ಕುಮಾರ್ ಮತ್ತವರ ಹಿಂಬಾಲಕರು ಡಿ.ಕೆ.ಶಿವಕುಮಾರ್ ಭಾಷಣದ ವಿರುದ್ದ ಮುಗಿಬಿದ್ದು ಟೀಕೆ ಮಾಡಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಟೀಕೆಗಳಿಗೆ ಕಾರ್ಕಳ ಕಾಂಗ್ರೆಸ್ ನಾಯಕರು ಸಮರ್ಥವಾಗಿ ಪ್ರತ್ಯುತ್ತರ ನೀಡಿ ತಮ್ಮ ನಾಯಕನ ಮಾತನ್ನು ಸಮರ್ಥನೆ ಮಾಡಿದ್ದರು. ಆದರೆ ಯುವ ಕಾಂಗ್ರೆಸ್ ಉಡುಪಿ ಜಿಲ್ಲಾದ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ ಅವರು ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಸ್ಥಳೀಯ ನಾಯಕರು ಸ್ಪಷ್ಟನೆ ನೀಡಬೇಕು ಎಂದು ಡಿ.ಕೆ. ಶಿವಕುಮಾರ್ ಹೇಳಿಕೆ ವಿರುದ್ದವೇ ಈಗ ಬಹಿರಂಗ ಹೇಳಿಕೆ ನೀಡಿರುವುದು ಪಕ್ಷದ ಶಿಸ್ತನ್ನು ಉಲ್ಲಂಘಿಸಿದಂತಾಗಿದೆ. ಕೃಷ್ಣ ಶೆಟ್ಟಿ ಬಜಗೋಳಿ ಅವರ ಹೇಳಿಕೆಗೂ ಕಾರ್ಕಳದ ಬಿಜೆಪಿ ನಾಯಕರ ಹೇಳಿಕೆಗೂ ಯಾವುದೇ ವ್ಯತ್ಯಾಸ ಇಲ್ಲದಂತಾಗಿದೆ.

ಸಣ್ಣ ವಯಸ್ಸಿನಲ್ಲಿಯೇ ಯುವ ಕಾಂಗ್ರೆಸ್ ಸಂಘಟನೆಯಲ್ಲಿ ಕಾರ್ಯನಿರ್ವಹಿಸಿ, ರಾಜ್ಯದ ಪ್ರಭಾವಿ ಸಚಿವರಾಗಿ, ಪ್ರಸ್ತುತ ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯದ ಉಪಮುಖ್ಯಮಂತ್ರಿ ಹುದ್ದೆಗೇರಿದ ದೇಶದ ಪ್ರಭಾವಿ ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾಗಿರುವ ಡಿ.ಕೆ. ಶಿವಕುಮಾರ್ ಅವರ ಜೀವನವು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನಿಗೆ ಪ್ರೇರಣೆಯಾಗಿರುತ್ತದೆ. ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಲು ಇಂದಿಗೂ ಶ್ರಮಿಸುತ್ತಿರುವ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಉದಯ ಶೆಟ್ಟಿಯವರು ಸ್ಪಷ್ಟನೆ ನೀಡಬೇಕೆಂಬ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೆ ಸಾರ್ವಜನಿಕವಾಗಿ ಮುಜುಗರ ಅನುಭವಿಸುವಂತಾಗಿದೆ, ಮತ್ತು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಪಕ್ಷ ನಿಷ್ಠೆಯು ಅನುಮಾನ ಮೂಡಿಸುವಂತಿದೆ. ಡಿ.ಕೆ. ಶಿವಕುಮಾರ್ ಅವರ ಭಾಷಣವನ್ನು ಉದಯ ಶೆಟ್ಟಿ ಮುನಿಯಾಲು ಮಾತ್ರವಲ್ಲ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನು ಸಮರ್ಥನೆ ಮಾಡುತ್ತಾನೆ ಮತ್ತು ಸ್ಪಷ್ಟನೆಯನ್ನು ನೀಡಲು ಈಗಲೂ ಸಿದ್ದವಾಗಿದ್ದಾನೆ ಎನ್ನುವುದನ್ನು ಕೃಷ್ಣ ಶೆಟ್ಟಿ ಬಜಗೋಳಿಯವರು ಅರ್ಥ ಮಾಡಿಕೊಳ್ಳಬೇಕು.

ಅದ್ದರಿಂದ ಕೆಪಿಸಿಸಿ ಅಧ್ಯಕ್ಷರ ವಿರುದ್ದ ಹೇಳಿಕೆ ನೀಡಿ ಪಕ್ಷದಲ್ಲಿ ಅಶಿಸ್ತಿಗೆ ಕಾರಣವಾದ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷನ ವಿರುದ್ದ ಪಕ್ಷದ ನಾಯಕರು ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯೋಗೀಶ್ ಆಚಾರ್ಯ ಇನ್ನಾ ಒತ್ತಾಯಿಸಿದ್ದಾರೆ.

 

 

 

 

 

 

  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *