ಕಾರ್ಕಳ, ಜು 30: ಭಾರತೀಯ ಸೇನೆಗೆ ಸೇರುವುದೇ ಅತ್ಯಂತ ಹೆಮ್ಮೆಯ ಹಾಗೂ ಪುಣ್ಯದ ಕೆಲಸ. ಈ ನಿಟ್ಟಿನಲ್ಲಿ ಯುವ ಜನತೆ ದೇಶ ಸೇವೆಯ ಸುವರ್ಣಾವಕಾಶವನ್ನು ಎಂದಿಗೂ ಕಳೆದುಕೊಳ್ಳದೇ ದೇಶಸೇವೆಗೆ ಸಿದ್ದರಾಗಿರಬೇಕೆಂದು ಕಾರ್ಗಿಲ್ ಯೋಧ ಹಾಗೂ ಮಾಜಿ ಸೈನಿಕ ಶ್ರೀ ರಂಗಪ್ಪ ಹುಲಿಯಪ್ಪ ಆಲೂರು ಹೇಳಿದರು.
ಅವರು ಜು.28 ರಂದು ಕಾರ್ಕಳ ಎಸ್ ವಿ ಟಿ ಶಿಕ್ಷಣ ಸಂಸ್ಥೆಗಳು ಹಾಗೂ ರೋಟರಿ ಕ್ಲಬ್ ಕಾರ್ಕಳ ಮತ್ತು ಇಂಟರಾಕ್ಟ್ ಕ್ಲಬ್ ಇವರ ಸಹಯೋಗದಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮುಂದಿನ ಜನ್ಮದಲ್ಲೂ ನಾನು ಭಾರತೀಯ ಸೈನಿಕನಾಗಿ ಸೇವೆ ಮಾಡಲು ಸಿದ್ಧ ಎಂದ ಅವರು, ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಸಂದರ್ಭದಲ್ಲಿನ ಚಿತ್ರಣವನ್ನು ವಿದ್ಯಾರ್ಥಿಗಳ ಮುಂದಿಟ್ಟರು.
ಭೂಸೇನೆಯ ಮಾಜಿ ಯೋಧ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಗಿಲ್ ಹಿಮಾಚಾದಿತ ಪ್ರದೇಶ ಆರು ತಿಂಗಳ ಕಾಲ ಹಿಮದಿಂದ ಕೂಡಿರುವ ಪ್ರದೇಶದ ಮೇಲೆ ಪಾಕಿಸ್ತಾನದ ಸೈನ್ಯ ವಶಪಡಿಸಿಕೊಂಡಾಗ ಭಾರತೀಯ ಸೈನಿಕರು ಸುಮಾರು 60 ದಿನಗಳ ಕಾಲ ನಿರಂತರವಾಗಿ ಹೋರಾಟ ನಡೆಸಿ ಕಾರ್ಗಿಲ್ನಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಭಾರತದ ಸೈನ್ಯ ಶಕ್ತಿಯನ್ನು ಜಗತ್ತಿಗೆ ತೋರಿಸಿದ ದಿನ. ಕಾರ್ಗಿಲ್ ಯುದ್ಧದಲ್ಲಿ ತ್ಯಾಗ ಬಲಿದಾನಗೈದ ವೀರ ಸೈನಿಕರಿಗೆ ಗೌರವ ನಮನ ಸಲ್ಲಿಸುವುದು ಹಾಗೂ ಅವರ ಕುಟುಂಬ ವರ್ಗದವರಿಗೆ ಕೋಟ್ಯಾಂತರ ಭಾರತೀಯರ ಆತ್ಮಶಕ್ತಿ ಸದಾಕಾಲ ಇರುತ್ತದೆ ಎಂಬ ದಿವ್ಯ ಸಂದೇಶವನ್ನು ಕಳೆದ 26 ವರ್ಷಗಳಿಂದಲೂ ನಿರಂತರವಾಗಿ ಭಾರತೀಯರು, ವೀರ ಸೈನಿಕರಿಗೆ ಅರ್ಪಿಸುತ್ತಿದ್ದಾರೆ. ಭಾರತದ ಜನಸಂಖ್ಯೆಯ ಶೇಕಡಾ ಐವತ್ತಕ್ಕೂ ಹೆಚ್ಚು ಯುವಶಕ್ತಿ ಇರುವುದು ನಮ್ಮ ದೇಶದಲ್ಲಿ ಮಾತ್ರ, ಪ್ರಪಂಚದ ಹಲವಾರು ದಾಳಿಗಳನ್ನು ಎದುರಿಸಿರುವ ಭಾರತ ತನ್ನ ಸಂಸ್ಕೃತಿ, ಪರಂಪರೆ ಹಾಗೂ ಮೌಲ್ಯಗಳನ್ನು ಎಂದಿಗೂ ಬಿಟ್ಟು ಕೊಟ್ಟಿಲ್ಲ. ತನ್ನ ಶ್ರೇಷ್ಠ ನಾಗರೀಕತೆಯ ಮೂಲಕ ಪ್ರಪಂಚದಲ್ಲಿ ಅಗ್ರಸ್ಥಾನ ಪಡೆದಿದೆ. ಆರ್ಥಿಕವಾಗಿ ಮತ್ತು ವೈಜ್ಞಾನಿಕವಾಗಿ ತುಂಬಾ ಪ್ರಬಲವಾಗಿದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಕಾರ್ಗಿಲ್ ಯುದ್ದ ಸನ್ನಿವೇಶದ ವಿಡಿಯೋ ತುಣುಕುಗಳನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕಾರ್ಗಿಲ್ ಯೋಧ ಹಾಗೂ ಮಾಜಿ ಸೈನಿಕ ರಂಗಪ್ಪ ಹುಲಿಯಪ್ಪ ಆಲೂರು ಇವರಿಗೆ ಸನ್ಮಾನಿಸಲಾಯಿತು. ಎಸ್. ವಿ. ಟಿ. ವಿದ್ಯಾಸಂಸ್ಥೆಗಳ ಎಲ್ಲಾ ವಿದ್ಯಾರ್ಥಿಗಳು, ಉಪನ್ಯಾಸಕರು,ಶಿಕ್ಷಕರು, ಶಿಕ್ಷಕೇತರ ವೃಂದ, ಹಾಗೂ ರೋಟರಿ ಕ್ಲಬ್ ವತಿಯಿಂದ ಸಂಗ್ರಹಿಸಿದ ನಿಧಿಯನ್ನು ಈ ಸಂದರ್ಭದಲ್ಲಿ ಹಸ್ತಂತರಿಸಲಾಯಿತು.ಜೊತೆಗೆ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಹಾಗೂ ಯೋಧ ಮರಿಯಪ್ಪ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮರಿಯಪ್ಪ ಅವರು ಉಪಸ್ಥಿತರಿದ್ದು, ತನ್ನ ಸೇನಾ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಕಾರ್ಯದರ್ಶಿ ಚೇತನ್ ನಾಯಕ್, ಇಂಟರ್ ಆಕ್ಟ್ ಕ್ಲಬ್ ಅಧ್ಯಕ್ಷೆ | ಕು | ವೀಶ್ವರಿ, ಎಸ್ ವಿ ಟಿ ವಿದ್ಯಾ ಸಂಸ್ಥೆಗಳ ಎಲ್ಲಾ ವಿಭಾಗದ ಮುಖ್ಯಸ್ಥರುಗಳಾದ ನೇಮಿರಾಜ್ ಶೆಟ್ಟಿ, ಯೋಗೇಂದ್ರ ನಾಯಕ್, ಗೀತಾ.ಜಿ. ಮಾಲಿನಿ.ಕೆ, ಹನುಮಂತ ಗುರುವಪ್ಪ ಬಂಡಿವಡ್ಡರ್ ಉಪಸ್ಥಿತರಿದ್ದರು.
ಎಸ್. ವಿ.ಟಿ. ಪ್ರೌಢಶಾಲೆ ವಿಭಾಗದ ಕನ್ನಡ ಅಧ್ಯಾಪಕ ದೇವದಾಸ್ ಕೆರೆಮನೆ ನಿರೂಪಿಸಿ, ಪದವಿ ಪೂರ್ವ ವಿಭಾಗದ ಕನ್ನಡ ಭಾಷಾ ಉಪನ್ಯಾಸಕರಾದ ಪದ್ಮಪ್ರಭ ಇಂದ್ರ ಸ್ವಾಗತಿಸಿ, ಹಿಂದಿ ಭಾಷಾ ಶಿಕ್ಷಕಿ ಪ್ರಭಾ ಭೋವಿ ವಂದಿಸಿದರು.