ಮೂಡಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆ ಕ್ರೀಡೆಗೆ ಒಳ್ಳೆಯ ಬೆಂಬಲ ಮತ್ತು ಸ್ಪೂರ್ತಿ ನೀಡುತ್ತಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಕ್ರೀಡಾಪಟುಗಳು ಈ ಸಂಸ್ಥೆಯಲ್ಲಿದ್ದಾರೆ. ಇಲ್ಲಿನ ಶಿಸ್ತು, ಪ್ರಯತ್ನ ಅಭ್ಯಾಸ ಹಾಗೂ ದೈಹಿಕ ಶಿಕ್ಷಕರ ಶ್ರಮಕ್ಕೆ ವಿಶೇಷ ಮನ್ನಣೆ ದೊರೆಯುತ್ತಿದೆ ಇಂತಹ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾ ಮಟ್ಟದ ಟೇಬಲ್ ಟೆನ್ನೀಸ್ ಪಂದ್ಯಾಟದಲ್ಲಿ ಪಾಲ್ಗೊಂಡಿರುವುದು ನನಗೆ ಸಂತಸ ನೀಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ಲಿಲ್ಲಿ ಪಾಯಸ್ ಹೇಳಿದರು.
ಅವರು ಉಪನಿರ್ದೇಶಕರ ಕಛೇರಿ ಶಾಲಾ ಶಿಕ್ಷಣ ಇಲಾಖೆ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಮೂಡುಬಿದಿರೆ ಹಾಗೂ ಎಕ್ಸಲೆಂಟ್ ಮೂಡುಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಟೇಬಲ್ ಟೆನ್ನೀಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ಆರ್ ಪುತ್ರನ್ ಮಾತಾನಾಡಿ, ಸೋಲು ಗೆಲುವು ಮುಖ್ಯವಲ್ಲ ಸ್ಪರ್ಧಾ ಮನೋಭಾವದಿಂದ ಆಟವಾಡಿ ಎಂದು ಕ್ರೀಡಾಳುಗಳಿಗೆ ಹುರಿದುಂಬಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಸೌಮ್ಯ ಮಾತನಾಡಿ, ಪಠ್ಯದ ಜೊತೆಗೆ ಆಟಗಳಿಗೂ ಪ್ರಾಮುಖ್ಯತೆ ನೀಡಿ ಸಾಧನೆ ಮಾಡಿ ಎಂದರು.
ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕೋಶಾಧಿಕಾರಿ ಶಿವಾನಂದ ಕಾಯ್ಕಿಣಿ ಸ್ವಚ್ಛತೆ ಹಾಗೂ ಶಿಸ್ತಿಗೆ ಎಕ್ಸಲೆಂಟ್ ವಿದ್ಯಾಸಂಸ್ಥೆ ಹೆಸರಾಗಿದೆ. ಇಂತಹ ಸ್ಥಳದಲ್ಲಿ ಸ್ಪರ್ಧಾ ಮನೋಭಾವದಿಂದ ಆಟವಾಡಿ ಸಾಧಕರಾಗಿ ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ, ನಮ್ಮ ಚಟುವಟಿಕೆಗಳಲ್ಲಿ ಧನಾತ್ಮಕ ಬದಲಾವಣೆಯಾದರೆ ಜೀವನವೇ ಬದಲಾಗುತ್ತದೆ. ಅಂತಹ ಜೀವನದಲ್ಲಿ ಆತ್ಮಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಹುಟ್ಟು -ಸಾವಿನ ಮಧ್ಯಮ ಈ ಜೀವನ ಚಿಕ್ಕದು. ಅಷ್ಟರಲ್ಲಿ ಸಾಧನೆ ಮಾಡಿದರೆ ಜೀವನ ಸಾರ್ಥಕ. ಆ ರೀತಿಯ ಸಾಧನೆಯ ಪಥದಲ್ಲಿ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಸಾಧಕರು ನೀವಾಗಿ ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ 28 ತಂಡಗಳು ಭಾಗಿಯಾಗಿದ್ದವು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷರು ಟೇಬಲ್ ಟೆನ್ನಿಸ್ ಆಟವನ್ನು ಆಡುವುದರ ಮೂಲಕ ಪಂದ್ಯಾಟಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಭುವನೇಶ್ ಪ್ರಾಸ್ತವಿಕ ಮಾತುಗಳಾನ್ನಾಡಿದರು, ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ಸ್ವಾಗತಿಸಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ವಂದಿಸಿದರು. ಅಧ್ಯಾಪಕ ರೇಣುಕಾಚಾರ್ಯ ಕಾರ್ಯಕ್ರಮ ನಿರೂಪಿಸಿದರು