Share this news

ಕಾರ್ಕಳ: ಕಾಂಗ್ರೆಸ್ ಅಭಿವೃದ್ಧಿ ವಿಚಾರದಲ್ಲಿ ಚರ್ಚೆಗೆ ಸಿದ್ದವಿಲ್ಲ, ಚುನಾವಣೆಗಳು‌ ಬಂದಾಗ ಅಪಪ್ರಚಾರ ಮಾಡಿ ಅಭಿವೃದ್ಧಿಯನ್ನು ವ್ಯಂಗ್ಯ ಮಾಡುವ ವಿರೋಧಿಗಳ ಮಾನಸಿಕತೆಯನ್ನು ಜನರು ಅರ್ಥ ಮಾಡಿಕೊಳ್ಳಬೇಕಿದೆ.ಈ ಬಾರಿಯ ಚುನಾವಣೆಯಲ್ಲಿ ವಿರೋಧಿಗಳ ಅಪಪ್ರಚಾರ,ಜಾತಿ ರಾಜಕೀಯ ಗೆಲ್ಲಬಾರದು ಬದಲಾಗಿ ಹಿಂದುತ್ವ ಹಾಗೂ ಅಭಿವೃದ್ಧಿ ಗೆಲ್ಲಬೇಕಿದೆ ಎಂದು ಸುನಿಲ್ ಕುಮಾರ್ ಹೇಳಿದರು.


ಅವರು ಶುಕ್ರವಾರ ಅಜೆಕಾರಿನಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿ,ನಿವೇಶನ ಹಂಚಿಕೆಗೆ ತೊಡಕಾಗಿದ್ದ ಡೀಮ್ಡ್ ಅರಣ್ಯ ಸಮಸ್ಯೆ ನಿವಾರಿಸಿ ಕೇವಲ 4 ತಿಂಗಳಲ್ಲಿ ಸುಮಾರು 4 ಸಾವಿರ ಹಕ್ಕುಪತ್ರಗಳನ್ನು ವಿತರಿಸುವ ಮೂಲಕ ಬಡವರ ಸೂರು ಕಟ್ಟುವ ಕನಸು ನನಸಾಗಿದೆ ಎಂದರು.ಜನಪ್ರತಿನಿಧಿಯಾದವನು ತನ್ನ ಅವಧಿಯಲ್ಲಿ ಮಾಡಿದ ಸಾಧನೆ ಆಧಾರದಲ್ಲಿ ಮತಯಾಚನೆ ಮಾಡಬೇಕು. ಆದರೆ ಕಾಂಗ್ರೆಸ್ ಅಭಿವೃದ್ಧಿ ವಿಚಾರದಲ್ಲಿ ಚರ್ಚೆಗೆ ಸಿದ್ದವಿಲ್ಲ,ಬದಲಾಗಿ ಅಭಿವೃದ್ಧಿಯನ್ನು ವ್ಯಂಗ್ಯ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಜತೆಗೆ ಕೆಲವರು ಕಾರ್ಕಳದಲ್ಲಿ ಅಪಪ್ರಚಾರದ ಮೂಲಕ ಜನರ ಬಳಿ ಮತ ಕೇಳಲು ಹೊರಟಿದ್ದಾರೆ‌.ಕಾರ್ಕಳವನ್ನು ಎಲ್ಲಾ ಆಯಾಮಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಅಭಿವೃದ್ಧಿಯ ಜತೆಗೆ ಜನರಿಗೆ ಜೀವನೋತ್ಸಾಹ ನೀಡಲು ಕಾರ್ಕಳ ಉತ್ಸವ, ಪರಶುರಾಮ ಥೀಮ್ ಪಾರ್ಕ್ ಉತ್ಸವ ಮಾಡಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದರೆ ಅದನ್ನು ಟೀಕಿಸುವ ಕಾಂಗ್ರೆಸ್ ಮನಸ್ಥಿತಿಯನ್ನು ಜನ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.


ಮುಟ್ಲುಪಾಡಿ ಸತೀಶ್ ಶೆಟ್ಟಿ ಮಾತನಾಡಿ,ಕಾಂಗ್ರೆಸ್ ಗೆ ಸೋಲಿನ ಭಯ ಕಾಡುತ್ತಿದೆ,ಹಾಗಾಗಿ ಜಾತಿಯ ಹೆಸರಿನಲ್ಲಿ ಮತಯಾಚನೆಗೆ ವಿಫಲ ಪ್ರಯತ್ನ ನಡೆಸುತ್ತಿದ್ದಾರೆ.ಕ್ಷೇತ್ರದಲ್ಲಿ ಏನೂ ಸಾಧನೆ ಮಾಡದೇ ಮತಯಾಚನೆ ಮಾಡುವ ಕಾಂಗ್ರೆಸ್ ಪಕ್ಷವನ್ನು ಮತದಾರರು ತಿರಸ್ಕರಿಸಲಿದ್ದಾರೆ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕಾರ್ಕಳದ ಹಳ್ಳಿಹಳ್ಳಿಗಳ ರಸ್ತೆಗಳ ಅಭಿವೃದ್ಧಿ,ನಿವೇಶನರಹಿತರಿಗೆ ನಿವೇಶನ ಹಂಚಿಕೆ, ವಸತಿ ಯೋಜನೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.


ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಕೆ.ಪಿ ಶೆಣೈ, ಎಂ.ಕೆ ವಿಜಯ ಕುಮಾರ್, ವಿಜಯ ಶೆಟ್ಟಿ, ಮಹೇಶ್ ಶೆಣೈ,ದೇವಿಪ್ರಸಾದ್ ಶೆಟ್ಟಿ, ಸತೀಶ್ ಶೆಟ್ಟಿ ಮುಟ್ಲುಪಾಡಿ,ದಯಾನಂದ ಹೆಗ್ಡೆ, ಪ್ರಚಾರ ಸಮಿತಿ ಅಧ್ಯಕ್ಷ ಮಹೇಶ್ ಶೆಟ್ಟಿ ಕುಡುಪುಲಾಜೆ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *