ಕಾರ್ಕಳ: ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಆರೋಗ್ಯ ಇಲಾಖೆಗೆ ಸವಾಲಿನ ಕೆಲಸವಾಗಿದ್ದರೂ ಖಾಸಗಿ ಸಹಭಾಗಿತ್ವದಲ್ಲಿ ಬಡವರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗಿದೆ ಎಂದು ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಹೇಳಿದರು.
ಅವರು ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಹಾಗೂ ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಜೆಕಾರು ಪದ್ಯಗೋಪಾಲ ಎಜ್ಯುಕೇಶನ್ ಟ್ರಸ್ಟ್ (ರಿ)
ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು, ಗಣಿತನಗರ, ಕಾರ್ಕಳ ಇದರ ವತಿಯಿಂದ ಕೊಡುಗೆಯಾಗಿ ನೀಡಿದ ಸುಮಾರು11 ಲಕ್ಷ ಮೌಲ್ಯದ ನೂತನ ಬೊಲೆರೊ ವಾಹನದ ಹಸ್ತಾಂತರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋವಿಡ್ ಸಂದಿಗ್ಧ ಕಾಲಘಟ್ಟದಲ್ಲಿ ಅಜೆಕಾರು ಪದ್ಮಗೋಪಾಲ್ ಟ್ರಸ್ಟ್ ಆರೋಗ್ಯ ಇಲಾಖೆಯ ಹೆಗಲು ಕೊಟ್ಟು ಸಾಂಕ್ರಾಮಿಕ ಪಿಡುಗನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಸಂಪೂರ್ಣ ಸಹಕಾರ ನೀಡಿತ್ತು. ಟ್ರಸ್ಟ್ ಅಧ್ಯಕ್ಷ ಸುಧಾಕರ ಶೆಟ್ಟಿ ಸಿಬ್ಬಂದಿಗಳಿಗೆ ಮಾನಸಿಕ ಧೈರ್ಯ ತುಂಬಿ ಎಲ್ಲಾ ರೀತಿಯ ನೆರವು ನೀಡಿರುವುದನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ತುರ್ತು ಸಂದರ್ಭಗಳಲ್ಲಿ ರೋಗಿಗಳ ಚಿಕಿತ್ಸೆಗೆ ತೆರಳಲು ಸೂಕ್ತ ವಾಹನವಿಲ್ಲದೇ ತುಂಬಾ ತೊಂದರೆಯಾಗುತ್ತಿತ್ತು, ಇಂತಹ ಪರಿಸ್ಥಿತಿಯನ್ನು ಮನಗಂಡು ಸುಧಾಕರ ಶೆಟ್ಟಿಯವರು ಸ್ವಇಚ್ಛೆಯಿಂದ ವಾಹನ ಕೊಡುಗೆಯಾಗಿ ನೀಡಿರುವುದಕ್ಕೆ ಸರ್ಕಾರದ ಪರವಾಗಿ ಧನ್ಯವಾದ ಸಲ್ಲಿಸಿದರು.ಇದಲ್ಲದೇ ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ವಿಚಾರದಲ್ಲಿ ಸುಧಾಕರ ಶೆಟ್ಟಿಯವರ ನಿಲುವಿಗೆ ಆರೋಗ್ಯ ಇಲಾಖೆ ಸಹಕಾರ ನೀಡಲಿದೆ ಎಂದರು.
ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಸುಧಾಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ,ತಾನು ಹುಟ್ಟಿ ಬೆಳೆದ ಅಜೆಕಾರಿಗೆ ನನ್ನ ತಂದೆತಾಯಿ ಹೆಸರಿನಲ್ಲಿ ಊರಿಗೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ಯೋಚನೆಯಿಂದ ಆಸ್ಪತ್ರೆಗೆ ತುರ್ತು ಅಗತ್ಯಗಳಲ್ಲಿ ಒಂದಾಗಿದ್ದ ವಾಹನವನ್ನು ನೀಡಿದ್ದೇವೆ. ಪ್ರಚಾರಕ್ಕಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿಲ್ಲ ಬದಲಾಗಿ ಈ ಕಾರ್ಯವು ಇತರರಿಗೂ ಪ್ರೇರಣೆಯಾಗಲಿ ಎನ್ನುವುದೇ ನಮ್ಮ ಉದ್ದೇಶವಾಗಿದೆ ಎಂದರು.
ಎರಡು ಎಕರೆ ವಿಶಾಲವಾದ ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರವು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಬೇಕೆನ್ನುವುದು ಮಹದಾಸೆಯಾಗಿದೆ, ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕಿದೆ,ಇದರಿಂದ ಅಜೆಕಾರು ಸುತ್ತಮುತ್ತಲಿನ ಬಡವರಿಗೆ ಉತ್ತಮ ಆರೋಗ್ಯ ಸೇವೆ ಸಿಗಲು ಸಾಧ್ಯವಾಗುತ್ತದೆ ಎಂದು ಸುಧಾಕರ ಶೆಟ್ಟಿ ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಅಜೆಕಾರಿನ ಖ್ಯಾತ ವೈದ್ಯರಾದ ಡಾ. ಸಂತೋಷ ಕುಮಾರ್ ಶೆಟ್ಟಿ ಯವರ ಸೇವೆಯನ್ನು ನೆನಪಿಸಿಕೊಂಡರು.
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಸ್ಯ ಶಿವರಾಮ ಶೆಟ್ಟಿ ನೂತನ ಬೊಲೆರೊ ವಾಹನವನ್ನು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅನುಷಾ ಶೆಟ್ಟಿ, ಹಾಗೂ ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಡಾ. ಕಾರ್ತಿಕೇಶ್,ಡಾ ಸೌಮ್ಯ, ಡಾ.ಜಯಕರ ಶೆಟ್ಟಿ,ಡಾ.ರಾಮಚಂದ್ರ ಜೋಷಿ , ಡಾ ಪ್ರಸನ್ನ ಹೆಗ್ಡೆ , ಡಾ.ಚಂದ್ರಿಕಾ ಕಿಣಿ , ಡಾ. ವೀಣಾ, ಡಾ. ಅನಿತಾ ಪ್ರಭು. ಡಾ. ಸಂದೀಪ್ ಕುಡ್ವ , ಡಾ. ಪ್ರಸನ್ನ ಹೆಗ್ಡೆ , ಡಾ.ಸುನೀಲ್ ಕಿಣಿ , ಡಾ. ಪ್ರಮೋದ್ ಹೆಗ್ಡೆ ಕಡ್ತಲ ,ಡಾ . ಶ್ರೇಯಸ್ ನಾಯಕ್, ಡಾ. ನಿಖಿಲ್,ಡಾ.ರಕ್ಷಿತಾ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅನುಷಾ ಶೆಟ್ಟಿ ಸ್ವಾಗತಿಸಿದರು.ಮುನಿಯಾಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸೌಮ್ಯ ವಂದಿಸಿದರು.ಸಂಗೀತ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

