Share this news

ಬೆಂಗಳೂರು: ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಶನಿವಾರ ಸಂಭವಿಸಿದ ಭೀಕರ ಅಗ್ನಿ ಅನಾಹುತದ ಘಟನೆಯ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ, ಮೃತರ ಕುಟುಂಬಕ್ಕೆ ಸರ್ಕಾರದ ವತಿಯಿಂದ ತಲಾ 5 ಲಕ್ಷ ರೂ.ಗಳನ್ನು ನೀಡಲಾಗುವುದು.ಹಾಗೂ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಅತ್ತಿಬೆಲೆಯಲ್ಲಿ ನಡೆದ ಅಗ್ನಿದುರಂತದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ‌ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಶನಿವಾರ ಮಧ್ಯಾಹ್ನ 3.15 ರಿಂದ 3.30ರೊಳಗೆ ಅಗ್ನಿ ಅನಾಹುತ ಸಂಭವಿಸಿದೆ. ಇದು ಅತ್ಯಂತ ದುರದೃಷ್ಟಕರ ಘಟನೆ. ರಾಮುಸ್ವಾಮಿರೆಡ್ಡಿ ಎಂಬುವರು ಪರವಾನಗಿ ಪಡೆದು ಪಟಾಕಿ ಮಾರಾಟದ ವ್ಯವಹಾರ ಮಾಡುತ್ತಿದ್ದರು. ನಿನ್ನೆ 3.00 ಗಂಟೆ ಸಮಯದಲ್ಲಿ ತಮಿಳುನಾಡಿನಿಂದ ಟ್ರಕ್ ಗಳಲ್ಲಿ ಪಟಾಕಿಗಳು ಬಂದಿದ್ದು, ಬೆಂಕಿ ಹೇಗೆ ಪಟಾಕಿಗಳ ಮೇಲೆ ಬಿತ್ತು ಎನ್ನುವಿ ನಿಖರ ಕಾರಣ ತಿಳಿದುಬಂದಿಲ್ಲ. ಅಧಿಕಾರಿಗಳು ಇಲ್ಲಿ ಪರಿಶೀಲಿಸಿದ ಮೇಲೆ, ಸ್ಪೋಟಕಗಳ ಮಾರಾಟ ಮಾಡುವ ಗೋದಾಮಿನಲ್ಲಿ ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ ಎಂದು ಕಂಡುಬಂದಿದೆ ಎಂದರು.

ಜಯಮ್ಮ, ಕೋಂ ದಿ. ಸಿದ್ದಾರೆಡ್ಡಿ, ಅನಿಲ್ ರೆಡ್ಡಿ ಬಿನ್ ಸಿದ್ದಾರೆಡ್ಡಿ ಎಂಬುವವರು ಈ ಸ್ಥಳದ ಮಾಲೀಕರಾಗಿದ್ದು, ಗೋದಾಮಿನ ಸ್ಥಳ ಬಹಳ ಕಿರಿದಾಗಿದ್ದು, ಇದರಲ್ಲಿ 14 ಜನರು ಮೃತಪಟ್ಟಿದ್ದಾರೆ. ಎಲ್ಲರೂ ತಮಿಳುನಾಡಿನ ಕೃಷ್ಣಗಿರಿ, ಧರ್ಮಪುರಿಯವರು. ಅವರಲ್ಲಿ ಬಹುತೇಕರು ವಿದ್ಯಾರ್ಥಿಗಳು. ರಜಾ ಸಮಯದಲ್ಲಿ ಓದಿಗಾಗಿ ಹಣ ಸಂಪಾದನೆಗಾಗಿ ಬಂದವರು. ಒಬ್ಬ ಮ್ಯಾನೇಜರ್ ನ್ನು ಹೊರತುಪಡಿಸಿ ಯಾರೂ ಖಾಯಂ ನೌಕರರಿಲ್ಲ. ಸ್ಫೋಟಕಗಳಿಗೆ ಅಗತ್ಯವಾದ ಯಾವುದೇ ಸುರಕ್ಷಾ ಕ್ರಮಗಳನ್ನು ಕೈಗೊಂಡಿಲ್ಲ. ಗೋದಾಮು ಅಧಿಕೃತವೇ ಎನ್ನುವುದನ್ನು ಪರಿಶೀಲಿಸಬೇಕು. ಹಿಂಭಾಗದಲ್ಲಿ 200 ಅಡಿಗಳವರೆಗೂ ಗೋದಾಮು ಇದೆ. ಎಲ್ಲೂ ಕೂಡ ಅಗ್ನಿ ಶಾಮಕಗಳ ವ್ಯವಸ್ಥೆಯನ್ನು ಅಳವಡಿಸಿಲ್ಲ.

ಒಟ್ಟಾರೆ ಮೇಲ್ನೋಟಕ್ಕೆ ಪರವಾನಗಿ ಹೊಂದಿದವರ ನಿರ್ಲಕ್ಷ್ಯ ಎದ್ದುಕಾಣುತ್ತಿದೆ ಎಂದರು.ಘಟನೆಯ ತನಿಖೆ ಕೈಗೊಂಡು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇವೆ. 14 ಜನ ಮೃತಪಟ್ಟಿರುವುದು ದೊಡ್ಡ ದುರಂತ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರೆಲ್ಲರ ಕುಟುಂಬ ದವರಿಗೆ ನೋವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.ರಾಮುಸ್ವಾಮಿರೆಡ್ಡಿ , ನವೀನ್, ಅನಿಲ್ ರೆಡ್ಡಿ ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಿ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

 

 

 

 

 

 

 

 

 

Leave a Reply

Your email address will not be published. Required fields are marked *