ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆಯೊಡ್ಡಿದ್ದ ಘಟನೆ ಮಾಸುವ ಮುನ್ನವೇ ಅನಾಮಧೇಯ ವ್ಯಕ್ತಿಯೊಬ್ಬ ಪೊಲೀಸರಿಗೆ ಕರೆ ಮಾಡಿ ಬೆಂಗಳೂರಿನ ರಾಜಭವನಕ್ಕೆ ಬಾಂಬ್ ಇಡಲಾಗಿದೆ ಎಂಬ ಸುದ್ದಿಯಿಂದ ಪೊಲೀಸರು ಸಹಿತ ಇಡೀ ರಾಜ್ಯವೇ ಬೆಚ್ಚಿಬಿದ್ದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಸೋಮವಾರ ರಾತ್ರಿ(ಡಿ.11) 11.30ರ ಸುಮಾರಿಗೆ ಎನ್‌ಐಎ ಅಧಿಕಾರಗಳಿಗೆ ಕರೆ ಮಾಡಿರುವ ಅಪರಿಚಿತ, ರಾಜಭವನದಲ್ಲಿ ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದ, ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ತಕ್ಷಣವೇ ಎನ್‌ಐಎ ಅಧಿಕಾರಿಗಳು ರಾಜ್ಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಕೂಡಲೇ ಅಲರ್ಟ್ ಆದ ಪೊಲೀಸರು ಬಾಂಬ್ ಸ್ಕ್ವಾಡ್, ಡಾಗ್ ಸ್ಕ್ವಾಡ್ ನಿಂದ ರಾಜಭವನಕ್ಕೆ ಹೋಗಿ ಸುತ್ತಮುತ್ತ ಪರಿಶೀಲನೆ ನಡೆಸಿದರು.ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ತಪಾಸಣೆ ನಡೆಸಿದ ಪೊಲೀಸರಿಗೆ ಇದು ಹುಸಿ ಬಾಂಬ್ ಬೆದರಿಕೆ ಎಂದು ಮನದಟ್ಟಾಗಿದೆ.ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಕರೆ ಮಾಡಿರುವ ನಂಬರ್ ಟ್ರ್ಯಾಕ್ ಮಾಡುತ್ತಿದ್ದಾರೆ. ಅಲ್ಲದೇ ರಾಜಭವನ ಒಳ, ಹೊರಗೆ ತೀವ್ರ ತಪಾಸಣೆ ನಡೆಸಿದ್ದು ಪೊಲೀಸರು ರಾಜ ಭವನದ ಸುತ್ತಮುತ್ತ ಭಾರೀ ಕಟ್ಟೆಚ್ಚರ ವಹಿಸಿದ್ದಾರೆ. ರಾಜಭವನ ವಿಶಾಲ ಮೈದಾನದಂತಿದ್ದು, ಯಾವ ಜಾಗದಲ್ಲಿ ಇಡಲಾಗಿದೆ ಎಂಬುದು ಕರೆ ಮಾಡಿರುವ ದುಷ್ಕರ್ಮಿ ಸ್ಪಷ್ಟಪಡಿಸಿಲ್ಲ.
ಒಟ್ಟಿನಲ್ಲಿ ರಾಜ್ಯದ ರಾಜಧಾನಿಗೆ ಪದೇಪದೇ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಜನತೆ ಆತಂಕದಲ್ಲಿ ಜೀವನ ನಡೆಸುವಂತಾಗಿದೆ.