Share this news

ಕಾರ್ಕಳ: ವಿಶ್ವವೇ ಕಾರ್ಕಳದ ಕಡೆ ಕಣ್ತೆರೆದು ನೋಡುವ ರೀತಿಯಲ್ಲಿ ಅಭಿವೃದ್ಧಿ ಹಾಗೂ ಕೀರ್ತಿ ತರುವ ಕೆಲಸಗಳು ಕಾರ್ಕಳ ಕ್ಷೇತ್ರದಲ್ಲಿ ನಡೆದಿದೆ. ಕಾರ್ಕಳದ ಅಭಿವೃದ್ಧಿ ಮತ್ತು ಕೀರ್ತಿ ಸಹಿಸದ ಕೆಲ ಸ್ಥಾಪಿತ ಹಿತಾಸಕ್ತಿಗಳು ನಿರಂತರ ದೂಷಣೆಯನ್ನೇ ನಿತ್ಯದ ಕಾಯಕವನ್ನಾಗಿಸಿಕೊಂಡು, ಸರಣಿ ಅಪಪ್ರಚಾರ, ಟೀಕೆಗಳ ಮೂಲಕ ಕಾರ್ಕಳಕ್ಕೆ ಕಳಂಕ, ಅಗೌರವ, ಅಭಿವೃದ್ಧಿಗೆ ಚ್ಯುತಿ ತರುವ ಕೆಲಸ ಮಾಡುತ್ತಿದ್ದಾರೆ ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ತೀವೃ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಕಳದ ಬಗ್ಗೆ ಕೆಲವರು ಮಾಡುವ ಟೀಕೆ-ಟಿಪ್ಪಣಿಗಳು ದುರುದ್ದೇಶಪೂರ್ವಕವಾಗಿವೆ. ಅಪಪ್ರಚಾರವನ್ನೇ ಬಂಡವಾಳವನ್ನಾಗಿಸಿಕೊAಡ ಕೆಲವರು ಒಂದು ಸುಳ್ಳನ್ನು ನೂರಾರು ಬಾರಿ ಪುನರುಚ್ಛರಿಸುತ್ತ ಸತ್ಯವನ್ನಾಗಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಬರುವಂತೆ ಮಾಡಿ ಅಪಪ್ರಚಾರ ಮಾಡುವುದನ್ನೆ ನಿತ್ಯದ ರೂಢಿಯನ್ನಾಗಿಸಿಕೊಂಡಿದ್ದಾರೆ. ಕಾರ್ಕಳದ ಸಮಗ್ರ ಅಭಿವೃದ್ಧಿ ಸಹಿಸದೆ ಕಾರ್ಕಳಕ್ಕೆ ಅಗೌರವ ಅಪಪ್ರಚಾರ ಮತ್ತು ಅಪಚಾರ ಮಾಡುತ್ತಿರುವವರು ಇವರ್ಯಾರು ಕೂಡ ಸಾಮಾಜಿಕ, ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಲ್ಲ. ಇವರೆಲ್ಲ ಟೀಕೆಯಲ್ಲೆ ದಿನದೂಡುವ ಚಿಲ್ಲರೆ ಗಿರಾಕಿಗಳಾಗಿದ್ದಾರೆ ಎಂದು ದೂರಿದ್ದಾರೆ.

ಎಣ್ಣೆಹೊಳೆ ನೀರಾವರಿ ಯೋಜನೆ, ತಾಲೂಕು ಸರಕಾರಿ ಆಸ್ಪತ್ರೆ ಆಧುನೀಕರಣ, ಪರಶುರಾಮ ಥೀಂ ಪಾರ್ಕ್ ನಿರ್ಮಾಣ, ಶ್ರೀ ಮಾರಿಯಮ್ಮ ದೇಗುಲ, ಕೈಗಾರಿಕೆ ಮೂಲಕ ಉದ್ಯೋಗ ಸೃಷ್ಟಿ, ಕಾರ್ಕಳ ಉತ್ಸವ ಹೀಗೆ ಅನೇಕ ದೂರದೃಷ್ಟಿಯ ಸಾರ್ವಜನಿಕ ಕಾರ್ಯಕ್ರಮಗಳು ಜನಪರವಾಗಿಯೇ ಆಗಿರುವಂತದ್ದು. ಜನರ ಬದುಕು ಕಟ್ಟುವ ಆರ್ಥಿಕ ಸ್ವಾವಲಂಬನೆಗೆ ಪೂರಕವಾದ ಅಂಶಗಳಿವು. ಇವುಗಳ ಅಗತ್ಯತೆ ಬಗ್ಗೆ ಪ್ರಶ್ನಿಸುತ್ತ ಸಾರ್ವಜನಿಕ ವಲಯದಲ್ಲಿ ತಪ್ಪು ಕಲ್ಪನೆ ಬಿತ್ತುವ ಪಿತೂರಿಯ ಹಿಂದೆ ಕಾರ್ಕಳಕ್ಕೆ ಕಳಂಕ ತರುವ ಚಿಂತನೆಗಳಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಶಾಸಕ, ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅವರು ದಣಿವರಿಯದ ಅಭಿವೃದ್ಧಿಯ ಕಾಯಕಯೋಗಿ. ಕಾರ್ಕಳ ಕ್ಷೇತ್ರದ ಬಗ್ಗೆ ಸಮಗ್ರ ಕಲ್ಯಾಣಕ್ಕಾಗಿ ಹತ್ತಾರು ಯೋಜನೆಗಳನ್ನು ತಂದು ಶ್ರಮಿಸಿದ್ದಾರೆ. ದೂರದೃಷ್ಟಿಯ ಯೋಜನೆಯನ್ನು ಅವರು ಕಾರ್ಯಗತಗೊಳಿಸಿದ್ದಾರೆ. ಅದನ್ನು ಸಹಿಸದೆ ಉದ್ದೇಶ ಪೂರ್ವಕವಾಗಿ ಈ ರೀತಿ ಅಪಪ್ರಚಾರಕ್ಕೆ ಮೊರೆ ಹೋಗುತ್ತಿರುವುದರ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದ್ದಾರೆ.

ಈ ಎಲ್ಲದರ ಪರಿಣಾಮ ಕಾರ್ಕಳದ ಕೀರ್ತಿ ಮತ್ತು ಅಭಿವೃದ್ದಿಗೆ ಹಿನ್ನಡೆ ತರುವುದಾಗಿದೆ. ಈ ರೀತಿ ಕ್ಷೇತ್ರಕ್ಕೆ ಕುಂದು ತರುವ ಕೆಲಸವನ್ನು ಮಾಡುವುದು ಸರಿಯಲ್ಲ. ಸತ್ಯಾಸತ್ಯತೆ ಅರಿತು ನಡೆದುಕೊಳ್ಳದ ವಿಕೃತ ಮನಸ್ಸುಗಳ ವರ್ತನೆ ಮತ್ತು ಅವರ ಹೇಳಿಕೆಗಳ ಕುರಿತು ಸಾರ್ವಜನಿಕರು ಸಾಕಷ್ಟು ಎಚ್ಚರಿಕೆ ವಹಿಸಬೇಕು. ಒಬ್ಬ ಉತ್ತಮ ಕೆಲಸಗಾರನನ್ನು ದೂಷಿಸುತ್ತ, ಸೋಲಿಸಲಾಗದೆ, ವೇಗವನ್ನು ತಡೆಯಲಾಗದೆ ಹತಾಶೆಗೆ ಒಳಗಾಗಿ ಇಂತಹ ಚಟುವಟಿಕೆಗಳನ್ನು ಮಾಡುತ್ತಿರುವವರು ಇನ್ನಾದರೂ ಇಂತಹ ಕುಕೃತ್ಯಗಳನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಮಹಾವೀರ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *