Share this news

ಬೆಂಗಳೂರು: ರಾಜ್ಯ ಸರ್ಕಾರದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 2023-24ನೇ ಸಾಲಿನ ವರ್ಗಾವಣೆಗೆ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದ್ದು, ಅದರಂತೆ 2023-24ನೇ ಸಾಲಿನ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ವರ್ಗಾವಣೆಗೆ ಜೂನ್.12ರಿಂದ ಅರ್ಜಿ ಸಲ್ಲಿಕೆ ಆರಂಭಗೊಳ್ಳಲಿದೆ.

ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ 2023-24ನೇ ಸಾಲಿನ ವರ್ಗಾವಣೆ ಪ್ರಕ್ರಿಯೆಯನ್ನು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ( ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ನಿಯಮಗಳು 2011, 2013 ಮತ್ತು 2017ರಂತೆ ಕಾಲಕಾಲಕ್ಕೆ ಆದ ತಿದ್ದುಪಡಿಗಳ ಅನ್ವಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಅಧಿಕಾರಿ, ಸಿಬ್ಬಂದಿಗಳ ವರ್ಗಾವಣೆ ಪ್ರಕ್ರಿಯೆಯನ್ನು ಏಪ್ರಿಲ್, ಮೇ ತಿಂಗಳಿನಲ್ಲಿ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಲು ಅಗತ್ಯ ಕ್ರಮ ವಹಿಸಬೇಕಾಗಿದೆ ಎಂದಿದ್ದಾರೆ.

ರಾಜ್ಯ ಸರ್ಕಾರ 2023-24ನೇ ಸಾಲಿನ ವರ್ಗಾವಣೆಯನ್ನು ನಿಯಮಾನುಸಾರ ಅಗತ್ಯ ವರ್ಗಾವಣಾ ಮಾಹಿತಿಯನ್ನು ಕ್ರೂಢೀಕರಿಸಲು ಹಾಗೂ ಪರಿಶೀಲನಾ ಕಾರ್ಯ ಕೈಗೊಳ್ಳಲು, ಅಧಿಕಾರಿ ಮತ್ತು ನೌಕರರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅನುಮತಿಯನ್ನು ನೀಡಲಾಗಿರುತ್ತದೆ. 2023-24ನೇ ಸಾಲಿನ ಗ್ರೂಪ್ ಎ, ಗ್ರೂಪ್ ಬಿ, ಗ್ರೂಪ್ ಸಿ ಮತ್ತು ಗ್ರೂಪ್ ಡಿ ವರ್ಗದ ಅಧಿಕಾರಿ, ನೌಕರರಿಗೆ ಅನ್ವಯವಾಗುವಂತೆ ಒಂದು ಜೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ.6ರಷ್ಟು ಮೀರದಂತೆ ದಿನಾಂಕ 01-06-2023ರಿಂದ 15-06-2023ರವರೆಗೆ ಸಾರ್ವತ್ರಿಕ ವರ್ಗಾವಣೆಯನ್ನು ಕೈಗೊಳ್ಳಲು ಆಯಾ ಇಲಾಖೆಯ ಸಚಿವರಿಗೆ ಅಧಿಕಾರವನ್ನು ಪ್ರತ್ಯಾಯೋಜಿಸಲಾಗಿರುತ್ತದೆ ಎಂದು ಹೇಳಿದ್ದಾರೆ.

ಈ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯ ವರ್ಗಾವಣೆಗೆ ಅಧಿಸೂಚನೆಯನ್ನು ದಿನಾಂಕ 09-06-2023ರಂದು ಹೊರಡಿಸಲಾಗುತ್ತದೆ. ಎಲ್ಲಾ ಅಧಿಕಾರಿ, ನೌಕರರಿಂದ ವರ್ಗಾವಣೆಗೆ ಅರ್ಜಿಗಳನ್ನು ದಿನಾಂಕ 12-06-2023ರಿಂದ 26-06-2023ರವರೆಗೆ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಅಧಿಕಾರಿ, ನೌಕರರಿಂದ ವರ್ಗಾವಣೆ ಅರ್ಜಿಗಳನ್ನು ಸ್ವೀಕರಿಸಲು ದಿನಾಂಕ 26-06-2023 ಕೊನೆಯ ದಿನವಾಗಿದ್ದು, ಸ್ವೀಕೃತಗೊಂಡ ವರ್ಗಾವಣೆ ಅರ್ಜಿಗಳ ತಾತ್ಕಾಲಿಕ ಆದ್ಯತಾ ಪಟ್ಟಿಯನ್ನು ದಿನಾಂಕ 04-07-2023ರಿಂದ 10-07-2023ರಂದು ಪ್ರಕಟಿಸಲಾಗುತ್ತದೆ. ಸದರಿ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅಧಿಕಾರಿ, ನೌಕರರಿಗೆ 7 ದಿನಗಳ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

ತಾತ್ಕಾಲಿಕ ಆದ್ಯಾತಾ ಪಟ್ಟಿಗೆ ಬಂದ ಆಕ್ಷೇಪಣೆ ಸರಿಪಡಿಸಿ ಅರ್ಹತಾ ವರ್ಗಾವಣೆ ಅರ್ಜಿಗಳ ಅಂತಿಮ ಆದ್ಯಾತ ಪಟ್ಟಿಯನ್ನು ದಿನಾಂಕ 12-07-2023ರಂದು ಪ್ರಕಟಿಸಲಾಗುತ್ತದೆ. ಅಂತಿಮ ವರ್ಗಾವಣೆಯ ಪಟ್ಟಿಯಂತೆ ವೃಂದವಾರು ಸಮಾಲೋಯನೆಯನ್ನು ಪ್ರಾರಂಭಿಸಲು ದಿನಾಂಕ 14-07-2023ರಂದು ಶುರುವಾಗಲಿದೆ. ದಿನಾಂಕ 31-07-2023ರಂದು 2023-24ನೇ ಸಾಲಿನ ಅವಧಿಯ ವರ್ಗಾವಣೆಯ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *