ಶ್ರೀಹರಿಕೋಟ: ಚಂದ್ರಯಾನ-3 ಯೋಜನೆಯ ಭಾಗವಾಗಿರುವ ವಿಕ್ರಂ ಲ್ಯಾಂಡರ್ ಚಂದ್ರನ ನೆಲಕ್ಕಿಳಿದು ಇತಿಹಾಸ ಬರೆಯಲು ಸನ್ನದ್ಧವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸಂಜೆ 6.04 ನಿಮಿಷಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತ ಕಾಲೂರಲಿದೆ. ತನ್ಮೂಲಕ ಅಲ್ಲಿಗೆ ತಲುಪಿದ ಮೊದಲ ದೇಶ ಎಂಬ ಶ್ರೇಯಕ್ಕೆ ಪಾತ್ರವಾಗಲಿದೆ.
ಯೋಜನೆಯ ಹೊಣೆ ಹೊತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 140 ಕೋಟಿ ಭಾರತೀಯರ ಜೊತೆ ಈ ರೋಚಕ ಕ್ಷಣಕ್ಕಾಗಿ ಉಸಿರು ಬಿಗಿಹಿಡಿದು ಕಾದಿದ್ದರೆ, ಇಡೀ ವಿಶ್ವ ಭಾರತದತ್ತ ಕುತೂಹಲದ ದೃಷ್ಟಿ ನೆಟ್ಟಿದೆ.
ಒಂದು ವೇಳೆ, ಅನಿರೀಕ್ಷಿತ ಕಾರಣದಿಂದ ಬುಧವಾರ ಸಂಜೆ ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆ ನಡೆಸಲು ಸಾಧ್ಯವಾಗದಿದ್ದರೆ, ಆ.27ರ ಭಾನುವಾರದಂದು ಮರು ಯತ್ನ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.
5ನೇ ಬ್ರಿಕ್ಸ್ ಶೃಂಗಕ್ಕಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್‌ನ ಐತಿಹಾಸಿಕ ಕ್ಷಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಲಿದ್ದಾರೆ. ನೂರಾ ನಲವತ್ತು ಕೋಟಿ ಭಾರತೀಯರ ಶುಭ ಹಾರೈಕೆ ಹಾಗೂ ಪ್ರಾರ್ಥನೆಯೊಂದಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO)ಯ ಚಂದ್ರಯಾನ-3 ನೌಕೆ ಬುಧವಾರ ಸಂಜೆ 6.04ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಸಜ್ಜಾಗಿದ್ದು, ಈ ಐತಿಹಾಸಿಕ ಸಂದರ್ಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಅನೂಹ್ಯ ಕುತೂಹಲಗಳನ್ನು ಒಡಲಲ್ಲಿಟ್ಟುಕೊಂಡಿರುವ, ಈವರೆಗೂ ವಿಶ್ವದ ಯಾವುದೇ ದೇಶವೂ ಭೇದಿಸದ ಚಂದ್ರನ ದಕ್ಷಿಣ ಧ್ರುವದಲ್ಲಿ ಇಸ್ರೋ ವಿಜ್ಞಾನಿಗಳು ನೌಕೆ ಇಳಿಸುತ್ತಿದ್ದು, ಈ ಸಾಹಸವನ್ನು ಇಡೀ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿವೆ.