ಲೇಖನ: ಡಾ.ಸುಮತಿ.ಪಿ
ದೇಶ ಸುತ್ತು-ಕೋಶ ಓದು ಎನ್ನುವ ಮಾತಿನ ಅರ್ಥವು ಬಹಳ ವಿಸ್ತಾರವಾಗಿದೆ.ದೇಶ ವಿದೇಶಗಳನ್ನು ಸುತ್ತುವುದರಿಂದ ಸಿಗುವ ಅನುಭವ ಪುಸ್ತಕ ಓದುವುದಕ್ಕಿಂತಲೂ ಹೆಚ್ಚಿನದು ಎಂದರೆ ತಪ್ಪಾಗಲಾರದು.
ಇಂದಿನ ವೇಗದ ಜೀವನದ, ಸ್ಪರ್ಧಾತ್ಮಕ ಯುಗದಲ್ಲಿ,ಬದುಕು ಒತ್ತಡದಲ್ಲಿ ಸಾಗುತ್ತಿರುವುದು. ಜೀವನದ ದಿನನಿತ್ಯದ ಜಂಜಾಟ, ಕೆಲಸ, ವಿದ್ಯಾಭ್ಯಾಸ, ಹೀಗೆ ಬಿಡುವಿಲ್ಲದ ಬದುಕು, ಒಂದೇ ಬಗೆಯ ದಿನಚರಿಯಲ್ಲಿ ಬೇಸತ್ತು ಮನಸ್ಸು ಚಂಚಲಗೊಂಡಾಗ, ವಿರಾಮವು ಬೇಕಾಗುತ್ತದೆ. ಮನಸ್ಸು ಬದಲಾವಣೆಯನ್ನು ಬಯಸುತ್ತದೆ. ಇಂತಹ ಸಂದರ್ಭಗಳಲ್ಲಿ ಪ್ರವಾಸ ಕೈಗೊಂಡು ತನ್ನ ಕುಟುಂಬದೊಡನೆ, ಸ್ನೇಹಿತರು ಮತ್ತು ಆಪ್ತರೊಡನೆ ಸಮಯ ಕಳೆಯುವುದು ಕೂಡ
ತನುಮನಕೆ ಕ್ಷಮತೆಯನ್ನು ಒದಗಿಸುತ್ತದೆ.ಹಲವರ ಅಚ್ಚುಮೆಚ್ಚಿನ ಹವ್ಯಾಸಗಳಲ್ಲಿ ಪ್ರವಾಸವೂ ಒಂದಾಗಿದೆ.ಕೆಲವರಿಗೆ ಪ್ರವಾಸ ಒಂದು ಅತ್ಯಂತ ಖುಷಿ ಕೊಡುವ ಹವ್ಯಾಸವಾಗಿರುತ್ತದೆ.
ಇಂದು ಪ್ರವಾಸ ಒಂದು ಉದ್ಯಮವಾಗಿ ಬೆಳೆದು ನಿಂತಿದೆ.
ಪ್ರವಾಸೋದ್ಯಮವು ಭಾರತದಲ್ಲಿ ಅತಿ ದೊಡ್ಡ ಸೇವಾ ವಲಯವಾಗಿದ್ದು, ಹಲವು ವೈವಿದ್ಯತೆಗಳ ಪರಿಚಯ ಮತ್ತು ವಿಭಿನ್ನ ಅನುಭವಗಳನ್ನು ನೀಡುತ್ತದೆ. ಮೈಮನಸ್ಸನ್ನು ಉಲ್ಲಾಸ ಗೊಳಿಸುವಲ್ಲಿ ಪ್ರವಾಸದ ಪಾತ್ರ ಬಹಳ ದೊಡ್ಡದು.ಪ್ರವಾಸ ಮಾಡುವುದು ಎಂದರೆ ಅದು ಕೇವಲ ಸುತ್ತಾಟವಲ್ಲ. ಅಲ್ಲಿ ಒಂದು ರೀತಿಯ ಕಲಿಕೆ ಇರುತ್ತದೆ.ಅದು ಬದುಕಿನ ಶ್ರೇಯೋಭಿವೃದ್ಧಿಗೆ ಸಹಕಾರಿ ಆಗುತ್ತದೆ. ಕೃಷಿ ಪ್ರವಾಸೋದ್ಯಮ, ಸಾಂಸ್ಕೃತಿಕ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ, ಪರಂಪರೆಯ ಪ್ರವಾಸೋದ್ಯಮ, ವೈದ್ಯಕೀಯ ಪ್ರವಾಸೋದ್ಯಮ, ನೌಕಾಯಾನ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ, ವನ್ಯಜೀವಿ ಪ್ರವಾಸೋದ್ಯಮ ಹೀಗೆ ಹಲವು ಬಗೆಯ ಪ್ರವಾಸಗಳಿವೆ. ದೇಶದಲ್ಲಿ ಪ್ರವಾಸೋದ್ಯಮ ಸಾರಿಗೆ, ಹೊಟೇಲ್ ಉದ್ಯಮಕ್ಕೆ,ವಾಣಿಜ್ಯ ವ್ಯವಹಾರದಲ್ಲಿ ನೇರ ಲಾಭ ತರುವುದರಿಂದ, ಅಲ್ಲಿ ಹೆಚ್ಚು ಉದ್ಯೋಗವಕಾಶಗಳು ಸೃಷ್ಟಿಯಾಗುತ್ತದೆ. ಅಲ್ಲದೇ ದೇಶಕ್ಕೆ ಆರ್ಥಿಕ ಲಾಭವನ್ನೂ ಉಂಟು ಮಾಡುವುದರ ಮೂಲಕ ಆರ್ಥಿಕ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತದೆ.
ವಿಶ್ವ ಪರ್ಯಟನೆ ಮತ್ತು ಪ್ರವಾಸೋದ್ಯಮ ಸಮಿತಿಯ ಪ್ರಕಾರ, ಪರ್ಯಟನ ವಲಯದಲ್ಲಿ ಅತಿ ಹೆಚ್ಚು ಅಭಿವೃದ್ಧಿಯ ಸಾಮರ್ಥ್ಯ ಹೊಂದಿರುವ
ಭಾರತ ದರಗಳ ಸ್ಫರ್ಧೆಯಲ್ಲಿ ಆರನೆಯ ಸ್ಥಾನ ಹಾಗೂ ಸುರಕ್ಷತೆ ಹಾಗೂ ಭದ್ರತೆಯ ವಿಚಾರದಲ್ಲಿ 39ನೆಯ ಸ್ಥಾನದಲ್ಲಿದೆ ಎಂಬ ಅಂಶ ತಿಳಿದು ಬರುತ್ತದೆ.
ಪ್ರವಾಸೋದ್ಯಮವು ದೇಶದ ಪ್ರಗತಿಗೆ ಮತ್ತು ಆರ್ಥಿಕತೆಗೆ ಬಹಳ ದೊಡ್ಡ ಕೊಡುಗೆಯನ್ನು ನೀಡುವುದರೊಂದಿಗೆ, ಪ್ರವಾಸಿಗರ ಮತ್ತು ಸ್ಥಳೀಯರ ನಡುವೆ
ಸಾಂಸ್ಕೃತಿಕ ಕೊಂಡಿಯನ್ನು ಬೆಸೆದು, ಸಾಮರಸ್ಯವನ್ನು ಪೋಷಿಸುತ್ತದೆ. ಲಕ್ಷಾಂತರ ಮಂದಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಉದ್ಯೋಗ ಸೃಷ್ಟಿ ಮಾಡುವುದರೊಂದಿಗೆ ಜನ ಸಮುದಾಯಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಕೂಡಾ ಸಹಕರಿಸುತ್ತದೆ.
ನಾವೀನ್ಯತೆ ಮತ್ತು ಡಿಜಿಟಲ್ ಪ್ರಗತಿಯನ್ನು ಬಳಸಿಕೊಳ್ಳುವುದರ ಮೂಲಕ ಪ್ರವಾಸೋದ್ಯಮವು ಸಮಗ್ರತೆ, ಸ್ಥಳೀಯ ಸಮುದಾಯ ಸಬಲೀಕರಣ ಮತ್ತು ಸಮರ್ಥ ಸಂಪನ್ಮೂಲ ನಿರ್ವಹಣೆಯನ್ನು ಸುಧಾರಿಸಲು ಅವಕಾಶಗಳನ್ನು ಒದಗಿಸುತ್ತದೆ,
1980ರಲ್ಲಿ ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ಯುನೈಟೆಡ್ ನೇಶನ್ಸ್ ವರ್ಲ್ಡ್ ಟೂರಿಸಂ ಆರ್ಗನೈಸೇಷನ್ “ವಿಶ್ವ ಪ್ರವಾಸೋದ್ಯಮ ದಿನಾಚರಣೆ” ಆಚರಿಸಲು ನಿರ್ಧರಿಸಿತು. ಸೆಪ್ಟೆಂಬರ್ 27 ,ವಿಶ್ವ ಪ್ರವಾಸೋದ್ಯಮದಲ್ಲಿ ಮಹತ್ತರವಾದ ಹೆಜ್ಜೆಯಾಗಿದೆ.
ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ 1997ರ ನಂತರ ಪ್ರತಿ ವರ್ಷವೂ ಒಂದೊಂದು ರಾಷ್ಟ್ರವನ್ನು ಆಯ್ಕೆ ಮಾಡಿಕೊಂಡು ಅಧಿಕೃತವಾಗಿ ಪ್ರವಾಸೋದ್ಯಮ ದಿನ ಆಚರಿಸುವ ನಿರ್ಧಾರ ಕೈಗೊಂಡಿತು.
ಈಗ ಪ್ರತಿ ವರುಷ ಸೆಪ್ಟೆಂಬರ್ 27ರಂದು ಜಗತ್ತಿನಾದ್ಯಂತ ಪ್ರವಾಸೋದ್ಯಮ ದಿನಾಚರಣೆ ಆಚರಿಸಲಾಗುತ್ತಿದೆ. ಎಲ್ಲಾ ದೇಶಗಳಲ್ಲೂ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಸ್ಥಳೀಯ ಉತ್ಸವಗಳಂತೆ ಆಚರಿಸಲಾಗುತ್ತಿದೆ. ತನ್ಮೂಲಕ ಜಾಗತಿಕ ಮಟ್ಟದಲ್ಲಿ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಗಳ ಮೇಲೆ ಪ್ರವಾಸೋದ್ಯಮದ ಪರಿಣಾಮದ ಕುರಿತು ಜನ ಜಾಗೃತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇದೊಂದು ಜಾಗತಿಕ ಪ್ರವಾಸೋದ್ಯಮದ ಇತಿಹಾಸದಲ್ಲಿ ವಿಶಿಷ್ಠ ಮೈಲುಗಲ್ಲಾಗಿದೆ.
ಪ್ರತಿ ವರುಷ ವಿವಿಧ ಧ್ಯೇಯ ವಾಕ್ಯಗಳ ಮೂಲಕ ಜನಜಾಗೃತಿ ಮಾಡಲಾಗುತ್ತಿದೆ.ಈ ಬಾರಿಯ ಧ್ಯೇಯ ವಾಕ್ಯ “ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆಗಳು”.ಈ
ಸಂದೇಶದ ಅಡಿಯಲ್ಲಿ, ಕ್ಷೇತ್ರದಲ್ಲಿ ತೊಡಗಿರುವ ಭಾಗಿದಾರರ ಸಹಭಾಗಿತ್ವದಲ್ಲಿ ಸ್ಥಳೀಯ ಶಾಲಾ ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳ ಸಹಯೊಗದೊಂದಿಗೆ ರಸಪ್ರಶ್ನೆ, ಪ್ರಬಂಧ ಚರ್ಚಾ ಸ್ಪರ್ದೆ, ರಂಗೋಲಿ ಸ್ಪರ್ದೆ ಇತ್ಯಾದಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.ಎಲ್ಲ ಜಿಲ್ಲೆಗಳಲ್ಲಿನ ಹೋಟೆಲ್, ರೆಸಾರ್ಟ್ ಮತ್ತು ಹೋಮ್ಸ್ಟೇಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸ್ವಚ್ಚತೆ ಹಾಗೂ ನೈರ್ಮಲ್ಯ ಶುಚಿತ್ವದ ಬಗ್ಗೆ ಅರಿವು ಮೂಡಿಸುವ ಉಪಕ್ರಮವನ್ನು ಕೈಗೊಳ್ಳಲಾಗುತ್ತಿದೆ.
ಪರಿಸರ ಸ್ನೇಹಿ ಚಟುವಟಿಕೆಗಳನ್ನು ಪ್ರಸ್ತುತಿಪಡಿಸಲು ಎಲ್ಲ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸಾಮಾನ್ಯ ಸಲಹೆಗಳನ್ನು ಪಾಲಿಸುವಂತೆ ಪ್ರವಾಸೋದ್ಯಮ ಇಲಾಖೆ ಸೂಚನೆ ನೀಡುತ್ತಿದೆ.
ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಥೀಮ್ ಅನ್ನು ಪರಿಸರ ಸ್ನೇಹಿ ಅಂಶಗಳನ್ನು ಬ್ಯಾನರ್‌ನಲ್ಲಿ ಮುದ್ರಿಸಿ ಪ್ರದರ್ಶಿಸಬೇಕು. ಪ್ರವಾಸಿಗರಿಗೆ ಸಾಂಪ್ರದಾಯಿಕ ಖಾದ್ಯಗಳನ್ನು ಒದಗಿಸಬೇಕು. ಪ್ರವಾಸಿ ತಾಣಗಳ ಕುರಿತ ವಿಡಿಯೋಗಳನ್ನು ಎಲ್ಲ ಹೋಟೆಲ್ಗಳು ಹಾಗೂ ಕಚೇರಿಗಳಲ್ಲಿ ಪ್ರದರ್ಶಿಸಬೇಕು. ಸ್ವಚ್ಛತಾ ಅಭಿಯಾನಗಳನ್ನು ಕೈಗೊಳ್ಳುವುದರ ಮೂಲಕ ಸಸಿಗಳನ್ನು ನೆಡುವಂತೆ ಸೂಚಿಸಲಾಗುತ್ತಿದೆ.
ರಾಜ್ಯದಾದ್ಯಂತ ಎಲ್ಲ ಹೋಟೆಲ್ಗಳು ಹಾಗೂ ರೆಸ್ಟೋರೆಂಟ್‌ಗಳಲ್ಲಿ ಸ್ವಚ್ಛತೆ ಯನ್ನು ಕಾಪಾಡಬೇಕು.ಹೋಟೆಲ್ಗಳು ಹಾಗೂ ರೆಸ್ಟೋರೆಂಟ್‌ಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿಗಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಕೈಗೊಳ್ಳಲು ವ್ಯವಸ್ಥೆ ಮಾಡಬೇಕು .ಈ ಮೂಲಕ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಗುರಿಯನ್ನು ಹೊಂದಿದೆ.
**ಭಾರತದಲ್ಲಿ ಸುಸ್ಥಿರ ಪ್ರವಾಸೋದ್ಯಮ**
ಜವಾಬ್ದಾರಿಯುತ, ಅಂತರ್ಗತ, ಹಸಿರು ಮತ್ತು ಆತಿಥ್ಯದ ಪ್ರವಾಸೋದ್ಯಮದ ಉತ್ತಮ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು, ಪ್ರವಾಸೋದ್ಯಮ ನಿರ್ವಹಣೆಯಲ್ಲಿ ತೊಡಗಿರುವ ಎಲ್ಲಾ ಪಾಲುದಾರರು ನಿಯಮಗಳ ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕಾದ ಜವಾಬ್ದಾರಿಯಿದೆ.
ನೈಸರ್ಗಿಕ ಪರಿಸರ ವ್ಯವಸ್ಥೆಗೆ ಹಸಿರು ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಮತ್ತು ಸುಸ್ಥಿರ ಮೂಲಸೌಕರ್ಯವನ್ನು ನಿರ್ವಹಿಸುವುದು ಮುಖ್ಯವಾಗಿದೆ, ಇದರಿಂದ ಪ್ರವಾಸಿಗರಿಗೆ ಬೆಚ್ಚಗಿನ ಆತಿಥ್ಯವು ಅಭಿವೃದ್ಧಿ ಹೊಂದುತ್ತದೆ.
ಪ್ರವಾಸೋದ್ಯಮಕ್ಕಾಗಿ ಶಿಕ್ಷಣ ಮತ್ತು ಕೌಶಲ್ಯಗಳಲ್ಲಿ ಹೂಡಿಕೆ ಮಾಡುವ ಮೂಲಕ,ಸುಸ್ಥಿರ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವ ಮೂಲಕ ಮತ್ತು ಹಸಿರು ರೂಪಾಂತರವನ್ನು ವೇಗಗೊಳಿಸುವ ಮೂಲಕ ಮತ್ತು ನಾವೀನ್ಯತೆಯಲ್ಲಿ ಹೂಡಿಕೆ ಮಾಡುವ ಮೂಲಕ ಸಮೃದ್ಧಿ ಯೋಜನೆಗಳಿಗೆ ಹೂಡಿಕೆಯನ್ನು ತಲುಪಿಸುವುದು ಪ್ರಮುಖ ಅಗತ್ಯವಾಗಿದೆ
ಆರ್ಥಿಕತೆಯ ಬೆಳವಣಿಗೆ ಮತ್ತು ಉತ್ಪಾದಕತೆಯನ್ನು ಉತ್ತೇಜಿಸುವ ಮತ್ತು ಆಧಾರವಾಗಿರುವ ಸಾಂಪ್ರದಾಯಿಕ ಹೂಡಿಕೆಗಳು ಮಾತ್ರವಲ್ಲದೆ
ಭಾರತದ ನೈಸರ್ಗಿಕ ಸೌಂದರ್ಯವನ್ನು ಗುರುತಿಸಲು,ಹೆಚ್ಚಿಸಲು ಮತ್ತು ಭಾರತೀಯ ಆರ್ಥಿಕತೆಗೆ ಪ್ರವಾಸೋದ್ಯಮದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಪ್ರವಾಸಿ ತಾಣಗಳ ನಿರ್ಮಾಣದ ಸಮಯದಲ್ಲಿ ನಾಶವಾಗುವ ಮರಗಿಡಗಳನ್ನು ಪುನರ್ಬೆಳೆಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರವಾಸಿ ತಾಣಗಳಲ್ಲಿ ಉದ್ಯಾನವನಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕಾಗುತ್ತದೆ.ಈ ನಿಟ್ಟಿನಲ್ಲಿ ಸಾಕಷ್ಟು ಅರಿವನ್ನು ಮೂಡಿಸಲಾಗುತ್ತಿದೆ. ಪರಿಣಾಮವಾಗಿ ಪರಿಸರ ಸಂರಕ್ಷಣೆಗೆ ಶ್ರಮಿಸಿದ ಆದರ್ಶ ಮಹನೀಯರ ನೆನಪಿನಲ್ಲಿ ಅಲ್ಲಲ್ಲಿ ಪರಿಸರ ಪೂರಕ ಚಟುವಟಿಕೆಗಳು ನಡೆಯುತ್ತಿವೆ.ಸಾಲು ಮರದ ತಿಮ್ಮಕ್ಕನ ಹೆಸರಲ್ಲಿ ನಿರ್ಮಾಣವಾದ ಪಾರ್ಕ್ ಇದಕ್ಕೆ ಉದಾಹರಣೆಯಾಗಿ ಕಾಣುತ್ತದೆ.
ಅಭಿವೃದ್ಧಿಯ ಹೆಸರಿನಲ್ಲಿ ಆಗುತ್ತಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಾಡಬೇಕಾಗಿದೆ. ಪ್ರವಾಸಿ ತಾಣಗಳು, ಹೊಟೇಲ್ ಗಳು, ಶೌಚಾಲಯಗಳು, ರೆಸ್ಟೋರೆಂಟ್ ಗಳಲ್ಲಿ ಸ್ವಚ್ಛತೆ ಕಾಪಾಡುವುದರ ಮೂಲಕ ಆರೋಗ್ಯಕರ ಪರಿಸರದ ನಿರ್ಮಾಣವಾಗಬೇಕಾಗಿದೆ.
ನಮ್ಮನಮ್ಮ ಮನೆಗಳಿಂದ ಹಿಡಿದು, ನೆರೆಹೊರೆ,ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳ ಮೂಲಕ ಹಸಿರು ಹೂಡಿಕೆಯ ಜಾಗೃತಿ ಮೂಡಿಸಿದರೆ,ಆ ಮೂಲಕ ಜಾಗೃತರಾದರೆ ನಾವು ಆಚರಿಸುವ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಧ್ಯೇಯವಾಕ್ಯಕ್ಕೆ ಅರ್ಥ ಬರುವುದು. ಆ ಮೂಲಕ ವಿಶ್ವ ಪ್ರವಾಸೋದ್ಯಮ ದಿನವನ್ನು ಅತ್ಯುತ್ತಮವಾಗಿ ಆಚರಿಸಿದಂತಾಗುತ್ತದೆ.
ಪ್ರಪಂಚದಾದ್ಯಂತ, ಎಲ್ಲಾ ಅಭಿವೃದ್ಧಿ ಹಂತಗಳಲ್ಲಿನ ದೇಶಗಳಲ್ಲಿ, ಅನೇಕ ಮಿಲಿಯನ್ ಉದ್ಯೋಗಗಳು ಮತ್ತು ವ್ಯವಹಾರಗಳು ಬಲವಾದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಪ್ರವಾಸೋದ್ಯಮ ವಲಯವನ್ನು ಅವಲಂಬಿಸಿವೆ. ಪ್ರವಾಸೋದ್ಯಮವು ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವಲ್ಲಿ ಪ್ರೇರಕ ಶಕ್ತಿಯಾಗಿದೆ, ಭವಿಷ್ಯದ ಪೀಳಿಗೆಗೆ ಆನಂದಿಸಲು ಅವುಗಳನ್ನು ಸಂರಕ್ಷಿಸುತ್ತದೆ”.