✍️ ವಿ.ಕೆ ವಾಲ್ಪಾಡಿ
ಪಕ್ಷದಿಂದ ಮುಂದಿನ ಆರು ವರ್ಷಗಳ ಅವಧಿಗೆ ಉಚ್ಚಾಟನೆಗೊಂಡಿರುವ ಬಿಜೆಪಿ ಶಾಸಕ ಬಸನಗೌಡಪಾಟೀಲ್ ಯತ್ನಾಳ್ ಅವರ ಬೆಂಬಲಿಗರಿಂದ ಸಾಕಷ್ಟು ಪ್ರತಿಭಟನೆಗಳು,ಪದಾಧಿಕಾರಿಗಳ ರಾಜೀನಾಮೆ ಪ್ರಕ್ರಿಯೆಗಳು ನಡೆಯುತ್ತಿದೆಯಾದರೂ ಆವೇಶಗಳೆಲ್ಲವೂ ತಣಿದ ನಂತರ ಕಣ್ಣರಳಿಸಿ ನೋಡಲಿಕ್ಕಿದೆ. ಆ ನಂತರದಲ್ಲಿ ಏನು ಎಷ್ಟು ಬೆಂಬಲಗಳು ಯತ್ನಾಳ್ ಬೆನ್ನಿಗೆ ಇದೆ ಎನ್ನುವುದು ಸ್ಪಷ್ಟವಾಗುತ್ತದೆ.
ಪಂಚಮಸಾಲಿ ಸ್ವಾಮಿಗಳು ಕೂಡಾ ಪಕ್ಷದ ವರಿಷ್ಠರ ವಿರುದ್ಧ ಭಾರೀ ಅಸಮಾಧಾನವನ್ನು ಬಹಿರಂಗವಾಗಿಯೇ ತೋರಿಸಿಕೊಂಡಿದ್ದಾರೆ.
ಬಸನಗೌಡಪಾಟೀಲ್ ಯತ್ನಾಳ್ ಅವರು ಬಿಜೆಪಿಯ ಪಕ್ಷದಲ್ಲಿ ಉಚ್ಚಾಟಿಸಲ್ಪಟ್ಚದ್ದು ಇದು ಮೂರನೆಯಬಾರಿ. ವಾಜಪೇಯಿ ಸರಕಾರವಿದ್ದಾಗ ರಾಜ್ಯ ರೈಲ್ವೆ ಸಚಿವರಾಗಿದ್ದ ಯತ್ನಾಳ್ ಮುಂದೆ ಸಚಿವ ಪದವಿಯನ್ನು ರಾಜ್ಯದಲ್ಲಿ ಪಡೆದುಕೊಳ್ಳಲಾಗದ ಕಾರಣ ಯೆಡಿಯೂರಪ್ಪರಲ್ಲಿ ಸದಾ ಮುನಿಸು ಆರಂಭವಾದುದು.
ಯಡಿಯೂರಪ್ಪನವರು ಲಿಂಗಾಯತ ಸಮುದಾಯದವರೇ ಆಗಿದ್ದರೂ ಕೂಡಾ ಉತ್ತರ ಕರ್ನಾಟಕದಲ್ಲಿ ಬೇರೊಬ್ಬ ಲಿಂಗಾಯತ ವ್ಯಕ್ತಿ ತನ್ನದೆ ಸರಿಸಮಾನ ಮಟ್ಟಕ್ಕೆ ಬೆಳೆಯುತ್ತಾನೆ ಎಂದು ಕಣ್ಣಿಟ್ಟದ್ದೇ ಯತ್ನಾಳ್ ಮೇಲೆ!
ಅದೇ ಭಯದಿಂದಾಗಿ ಯಡಿಯೂರಪ್ಪನವರು ಯತ್ನಾಳರನ್ನು ತುಳಿಯುವ ಕೆಲಸ ಮಾಡಿದ್ದು.
ಬಿಜೆಪಿ ಹೈಕಮಾಂಡ್ ತಳೆದ ಖಡಕ್ ನಿರ್ಧಾರದಿಂದ ಯತ್ನಾಳ್ ವಿರೋಧಿಗರು ಹಾಲು ಕುಡಿದರೂ ಕೂಡ ಅವರಿಗೆ ಮುಂದೇನು ಎಂಬುದನ್ನು ಹೈಕಮಾಂಡ್ ಸೂಚಿಸಿಯೆ ಸೂಚಿಸುತ್ತದೆ. ಏನೆಂದರೆ ಹಾಲು ಕುಡಿದರಷ್ಟೇ ಮುಗಿಯುವುದಿಲ್ಲ ಮುಂದಕ್ಕೆ ಭಿನ್ನಮತ ಬಲಗೊಳ್ಳದಂತೆ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು.ದೂರ ನಿಂತವರನ್ನು ಹತ್ತಿರಕ್ಕೆಳೆದುಕೊಳ್ಳಬೇಕು .
ಡಿ. ವಿ. ಸದಾನಂದ ಗೌಡ ರಾಜ್ಯ ಬಿಜೆಪಿ ಅಧ್ಯಕ್ಷನಾಗಿದ್ದಾಗ ಯತ್ನಾಳ್ ಉಚ್ಚಾಟನೆಗೆ ಬಿ ಎಸ್ ವೈಯ ಶಿಫಾರಸ್ಸೇ ಫೈನಲ್ ಆಗಿತ್ತು. ಶೋಭ ಕರಂದ್ಲಾಜೆ ಮತ್ತು ಯೆಡ್ಯೂರಪ್ಪನವರ ಮಧ್ಯೆ ಸಂಬಂಧಗಳನ್ನು ಕಟ್ಟಿ ಹೇಳಿಕೆ ಕೊಡುತ್ತಿದ್ದ ಯತ್ನಾಳರನ್ನು ಉಚ್ಚಾಟಿಸುವುದೇ ಅನಿವಾರ್ಯವಾಗಿತ್ತು.
ಇದೀಗ ಮೂರನೆ ಬಾರಿಯ ಉಚ್ಚಾಟನೆಯಲ್ಲಿಯೂ ಬಿಎಸ್ ವೈ ಮದ್ದು ಅರೆದಿರುವುದು ಸತ್ಯವಾಗಿ ಕಂಡುಬರುತ್ತಿದೆ.
ಬಿ. ಎಲ್. ಸಂತೋಷ್ ಏನು,ಎಷ್ಟೇ ಪವರ್ ಫುಲ್ ಆದರೂನೂ ಬಿ ಎಸ್ ವೈಯನ್ನು ಬಿಟ್ಟು ಬೇರೆ ನಿರ್ಣಯ ಕೈಗೊಳ್ಳುವುದಕ್ಕೆ ಹೈಕಮಾಂಡ್ ಯೋಚಿಸುವುದೂ ಇಲ್ಲ.
ಬಿಜೆಪಿ ಹೈಕಮಾಂಡ್ ಈವರೆಗೂ ಕೂಡ ಕರ್ನಾಟಕದಲ್ಲಿ ಬಿಜೆಪಿಗೆ ಮತಗಳು ಸಿಗುವುದೇ ಯೆಡಿಯೂರಪ್ಪನವರಿಂದ ಎಂದು ನಂಬಿಕೊಂಡಿದೆ. ಕೆಜಿಪಿ ಕಟ್ಟಿದ್ದಾಗಲೂ ಬಿಜೆಪಿಗೆ ಭಾರೀ ಹಿನ್ನಡೆಯಾಯಿತು. ಅದು ಗೊತ್ತಾಗಿ ನಂತರ ಅವರನ್ನು ಹೈಕಮಾಂಡ್ ಬಿಜೆಪಿಗೆ ಸೇರಿಸಿಕೊಂಡಿತು. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಷ್ಟು ಕಡಿಮೆ ಬಲಕ್ಕೆ ಇಳಿಯುವಲ್ಲಿಯೂ ಯಡಿಯೂರಪ್ಪ ಭಿನ್ನಮತವೇ ಕಾರಣ ಎಂಬುದೂ ಹೈಕಮಾಂಡಿಗೆ ಸಂಪೂರ್ಣ ಅರಿವಾಗಿದೆ. ಅದು ನಿಜವೂ ಕೂಡ,ಹೆಚ್ಚಿನ ಬಿಜೆಪಿ ಅಭ್ಯರ್ಥಿಗಳು ಪರಾಭವಗೊಳ್ಳುವಲ್ಲಿ ಬಿ ಎಸ್ ವೈ ಗುಂಪಿನ ಕಠಿಣ ಪರಿಶ್ರಮವೇ ಕಾರಣ.
ಯತ್ನಾಳ್ ನಡೆ ಮುಂದೇನು ಅಂತ ತಿಳಿಯುವುದಕ್ಕೆ ಕುತೂಹಲ ಹೆಚ್ಚಾಗಿದೆ.
ಯತ್ನಾಳ್ ಮತ್ತು ಕೆ. ಎಸ್. ಈಶ್ವರಪ್ಪ ಜೊತೆಯಾಗಿ ರಾಜಕೀಯ ಪಕ್ಷ ಕಟ್ಟುತ್ತಾರೆ.ಮುಂದಿನ ಅಕ್ಟೋಬರ ತಿಂಗಳಲ್ಲಿ ಪಕ್ಷ ಅಸ್ತಿತ್ವಕ್ಕೆ ಬರಲಿದೆ ಎಂದಿತ್ಯಾದಿ ಊಹಾಪೋಹ ಸುದ್ದಿಗಳು ರೆಕ್ಕೆ ಕಟ್ಟಿಕೊಂಡು ಹಾರಾಡತೊಡಗಿದೆ.
ಯತ್ನಾಳ್ ಇನ್ನು ಪುನಃ ಬಿಜೆಪಿ ಸೇರುತ್ತಾರೆಯೋ ಅನ್ನುವುದನ್ನೂ ಕೆಲವರು ನಿರೀಕ್ಷೆ ಇಟ್ಟಿದ್ದಾರೆ. ಅವರನ್ನು ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟಿಸಲಾಗಿದೆ.ಅದೊಂದು ಬಲವಾದ ಶಿಕ್ಷೆ ಅನ್ನಬಹುದು.
ಯತ್ನಾಳ್ ಮುಂದೆ ಪಕ್ಷ ಕಟ್ಟುವುದಾಗರೂ ಕಟುಹಿಂದುತ್ವವನ್ನು ಸಾರುವ ಧ್ಯೇಯೋದ್ದೇಶ ಹೊತ್ತುಕೊಂಡೇ ತಿರುಗುವ ಪಕ್ಷವಾಗುವುದು.ಯಾಕೆಂದರೆ ಅವರಿಗೆ ಹಿಂದುತ್ವದ ಘೋಷಣೆಯಲ್ಲಿ ಮತಸಿಗುವ ಆತ್ಮವಿಶ್ವಾಸ ಇನ್ನೂ ಇದೆ.
ರಾಜ್ಯದಲ್ಲಿ ಬರೇ ಹಿಂದುತ್ವವನ್ನು ಮುಂದಿಟ್ಟುಕೊಂಡು ಪಕ್ಷ ನಡೆಸಿದರೆ ಬೆಂಬಲ ಸಿಗುವುದು ಇನ್ನುಮುಂದೆ ಕಷ್ಟ ಅನ್ನುವ ಅನುಭವವೇ ಬಿಜೆಪಿಗೆ ಆಗಿರುತ್ತದೆ. ಕರ್ನಾಟಕದ ಜನತೆ ಸರ್ವಧರ್ಮ ಸಮಾನರಾಗಿ ಜಾತ್ಯತೀತ ಸಿದ್ಧಾಂತದ ನೆಲೆಯಲ್ಲಿಯೇ ಬದುಕುವುದರಿಂದ ಪ್ರತ್ಯೇಕ ಹಿಂದುತ್ವ ವಾದಕ್ಕೆ ಅಸ್ತಿತ್ವ ಇರುವುದಿಲ್ಲ.
ಇದೀಗ ಮೂರನೆಯ ಬಾರಿಗೆ ಯತ್ನಾಳರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಅವರ ಮೇಲಿರುವ ಪಕ್ಷ ವಿರೋಧಿ ನಡವಳಿಕೆಗಳು, ನೋಟೀಸುಗಳಿಗೆ ಸರಿಯಾಗಿ ಉತ್ತರಿಸದೆ ದುರಹಂಕಾರ ತೋರಿಸುವುದು,ಮುಖ್ಯವಾಗಿ ಹಿರಿಯ ನಾಯಕ ಬಿ ಎಸ್ ವೈ ಮತ್ತವರ ಕುಟುಂಬವನ್ನೇ ಮುಂದಿಟ್ಟುಕೊಂಡು ಬಹಿರಂಗವಾಗಿ ಮಾನಹಾನಿಕರ ಹೇಳಿಕೆ ಕೊಡುತ್ತಿದ್ದ ಆರೋಪದಲ್ಲಿಯೇ ಪಕ್ಷವು ಯತ್ನಾಳರನ್ನು ಆರುವರ್ಷಗಳಿಗೆ ಮುಂಚಿತವಾಗಿ ಎರಡೂವರೆ ವರ್ಷದಲ್ಲಿಯೆ ಮರುಸೇರ್ಪಡೆ ಮಾಡಿಕೊಳ್ಳುವುದಿಲ್ಲ ಅನ್ನುವುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು.
ಒಟ್ನಲ್ಲಿ ಯತ್ನಾಳರಿಗೆ ಬಿಜೆಪಿಯ ಸಂಬಂಧ ಇಲ್ಲಿಂದಲೇ ಮುಕ್ತಾಯವಾಗುವುದು ಎಂದೂ ತಿಳಿದುಕೊಳ್ಳಬಹುದು.
-ವಿ. ಕೆ. ವಾಲ್ಪಾಡಿ
K