
ಕಾರ್ಕಳ,ಏ.26: ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವತಿಯಿಂದ ಜೋಡುರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ವಾಣಿಜ್ಯ ಸಂಕೀರ್ಣ “ಸಹಕಾರ ಸಿಂಧೂರ” ಲೋಕಾರ್ಪಣೆ ಹಾಗೂ ಸೊಸೈಟಿಯ ತ್ರಿಂಶತಿ ಸಂಭ್ರಮ ಕಾರ್ಯಕ್ರಮ ಏ.26 ರಂದು ಭಾನುವಾರ ಜೋಡುರಸ್ತೆಯಲ್ಲಿ ಜರುಗಿತು.

ನೂತನ ವಾಣಿಜ್ಯ ಸಂಕೀರ್ಣವನ್ನು ಗೋವಾದ ಕೈವಲ್ಯ ಮಠದ ಶಿವಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿ, ಹೊಸ ಕಟ್ಟಡ ಲೋಕಾರ್ಪಣೆ ಸಮಸ್ತ ರಾಜಾಪುರ ಸಮಾಜಕ್ಕೆ ಅತ್ಯಂತ ಆನಂದದ ಕ್ಷಣವಾಗಿದೆ ಎಂದರು. ಈ ಭವ್ಯ ಕಟ್ಟಡ ನಿರ್ಮಾಣಕ್ಕೆ ಎಲ್ಲರೂ ಒಂದಾಗಿ ಕೈಜೋಡಿಸಿರುವುದು ಶ್ಲಾಘನೀಯವಾಗಿದ್ದು, ಸಹಕಾರ ಸೊಸೈಟಿಯ ಮೂಲಕ ಈ ಕಾರ್ಯ ಸಾಧ್ಯವಾಗಿದೆ ಎಂದು ಹೇಳಿದರು. ಇದು ಸಮಾಜದ ಬೆಳವಣಿಗೆಗೆ ಬುನಾದಿಯಾಗಿದ್ದು, ಸಹಯೋಗವೇ ಸಮಾಜದ ಶಕ್ತಿ ಹಾಗೂ ಸೇವೆಯ ಮೂಲವಾಗಿದೆ. ಆತ್ಮನಿರ್ಭರತೆಯನ್ನು ಸಾಧಿಸಲು ಸಹಕಾರಿ ಕ್ಷೇತ್ರವು ಅತ್ಯಂತ ಪ್ರಮುಖವಾಗಿದೆ ಎಂದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮುಂದುವರಿಯುವುದು ಅವಶ್ಯಕವಾಗಿದ್ದು, ಸಮಾಜದ ಸೇವೆಯೇ ಮುಖ್ಯ ಉದ್ದೇಶವಾಗಿರಬೇಕು ಎಂದರು.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಮಾತನಾಡಿ, ರಾಜಾಪುರ ಸೊಸೈಟಿ ಸಹಕಾರಿ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲಾಗಿದ್ದು, ಸಮಾಜದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತಿದೆ ಎಂದರು. “ಕೃಷ್ಣನನ್ನು ಜಗತ್ತಿಗೆ ಗುರುವಾಗಿಸಿಕೊಂಡವರು ನಾವು. ಕೃಷ್ಣ ದೇವರ ಸಹಕಾರ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಶ್ರೇಯಸ್ಸನ್ನು ಪಡೆಯಬೇಕ ಎಂದರು. ಸಹಕಾರ ತತ್ವದ ಮೂಲಕ ಸೊಸೈಟಿಯ ಸರ್ವತೋಮುಖ ಬೆಳವಣಿಗೆಗೆ ಸಮಾಜದ ಬೆಂಬಲ ಸ್ಪಷ್ಟವಾಗಿದ್ದು, ಈ ಕಟ್ಟಡವೇ ಅದಕ್ಕೆ ಸಾಕ್ಷಿಯಾಗಿದೆ. ಸಹಕಾರಿ ಚಟುವಟಿಕೆಗಳು ಆಲದ ಮರದಂತೆ ವಿಸ್ತರಿಸಿ ಸಾವಿರಾರು ಮಂದಿಗೆ ಸೇವೆ ಒದಗಿಸುತ್ತಿವೆ ಎಂದರು. ಸಂಸ್ಥೆ ಇನ್ನಷ್ಟು ಬೆಳೆಯಲಿ, ಕೃಷ್ಣನ ಪ್ರೇರಣೆ ದೊರೆಯಲಿ ಎಂದು ಆಶಿಸಿದರು.
ಸೊಸೈಟಿಯ ಅಧ್ಯಕ್ಷರಾದ ಸಹಕಾರ ರತ್ನ ಕಡಾರಿ ರವೀಂದ್ರ ಪ್ರಭು ಅವರು ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿ, 1996ರಲ್ಲಿ ಕಡ್ತಲ ರವೀಂದ್ರ ನಾಯಕ್ ಅವರೊಂದಿಗೆ ಭದ್ರ ಬುನಾದಿ ಹಾಕಿ ಆರಂಭಿಸಿದ ಸಂಸ್ಥೆ ಇಂದು 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದೆ ಎಂದು ತಿಳಿಸಿದರು. ಪೇಜಾವರ ವಿಶ್ವೇಶ್ವರತೀರ್ಥ ಸ್ವಾಮೀಜಿ ನೀಡಿದ ಆಶೀರ್ವಾದದಿಂದ ಸಹಕಾರಿ ಕ್ಷೇತ್ರದಲ್ಲಿ ಬೆಳೆಯಲು ಸಾಧ್ಯವಾಯಿತು ಎಂದು ಸ್ಮರಿಸಿದರು. ಜನರ ವಿಶ್ವಾಸ, ಸಿಬ್ಬಂದಿಗಳ ಸಹಕಾರ ಹಾಗೂ ನಿರ್ದೇಶಕ ಮಂಡಳಿಯ ಪ್ರಾಮಾಣಿಕ ಪ್ರಯತ್ನದಿಂದ ಸಂಸ್ಥೆ ಜನಮನ್ನಣೆ ಗಳಿಸಿದೆ ಎಂದರು. ಕೇಂದ್ರ ಕಚೇರಿ ಕಟ್ಟಡ, 2016ರ ಸಭಾಭವನ ಹಾಗೂ 2026ರ “ಸಹಕಾರ ಸಿಂಧೂರ” ಸಂಕೀರ್ಣ ನಿರ್ಮಾಣ ಸಾಧನೆಗಳನ್ನು ವಿವರಿಸಿದರು. ಕಟ್ಟಡದ ಸುಮಾರು 97% ಭಾಗ ಈಗಾಗಲೇ ಬಾಡಿಗೆಗೆ ನೀಡಲಾಗಿದ್ದು, ಭಾರತ್ ಸಿನೆಮಾ ಕೂಡ ಆರಂಭವಾಗಲಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಬೆಂಗಳೂರು ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಮಾತನಾಡಿ,ಕಳೆದ 30 ವರ್ಷಗಳಿಂದ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಸೊಸೈಟಿ ಕಾರ್ಯನಿರ್ವಹಿಸುತ್ತಿದೆ ಎಂದರು. ಏಳು ಶಾಖೆಗಳ ಮೂಲಕ ಕೋಟ್ಯಾಂತರ ವ್ಯವಹಾರ ನಡೆಸುತ್ತಿರುವ ಸಂಸ್ಥೆ ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸುತ್ತಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಐವತ್ತು ವರ್ಷಗಳನ್ನು ವಿಜೃಂಭಣೆಯಿಂದ ಆಚರಿಸಲಿ ಎಂದು ಶುಭ ಹಾರೈಸಿದರು. ಮಹಿಳೆಯರಿಗೆ ನೀಡಿದ ಸಾಲಗಳಲ್ಲಿ 99.9% ಮರುಪಾವತಿ ಕಂಡುಬರುತ್ತದೆ ಎಂದು ತಿಳಿಸಿ, ಸಂಸ್ಥೆಗೆ ಅನುದಾನ ನೀಡಲು ಸಹಕರಿಸುವುದಾಗಿ ಭರವಸೆ ನೀಡಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸೊಸೈಟಿ 30 ವರ್ಷಗಳಲ್ಲಿ ಉತ್ತಮ ಹೆಸರು ಗಳಿಸಿದೆ ಎಂದರು. ಸಹಕಾರಿ ಸಂಸ್ಥೆಗಳು ಆರ್ಥಿಕ ಕ್ಷೇತ್ರದಲ್ಲಿ ಶಕ್ತಿಯುತವಾಗುತ್ತಿದ್ದು, ₹254 ಕೋಟಿ ಠೇವಣಿ ಸಂಗ್ರಹಿಸಿರುವುದು ಸಾಧನೆ ಎಂದು ಹೇಳಿದರು.
ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಸೊಸೈಟಿ ನಿರಂತರವಾಗಿ ಹೊಸ ಸಾಧನೆಗಳನ್ನು ಸಾಧಿಸುತ್ತಿದ್ದು, ಜೋಡುರಸ್ತೆ ಭಾಗದ ಅಭಿವೃದ್ಧಿಗೂ ಪೂರಕವಾಗಿದೆ ಎಂದರು. ಕೊರೊನಾ ಕಾಲದಲ್ಲೂ ಮಾಡಿದ ಸೇವಾ ಕಾರ್ಯ ಶ್ಲಾಘನೀಯವಾಗಿದ್ದು, “ಸಹಕಾರ ಸಿಂಧೂರ” ಸಂಕೀರ್ಣ ಹೊಸ ಹೆಜ್ಜೆಯಾಗಿದೆ ಎಂದು ಹೇಳಿದರು. ಅಧ್ಯಕ್ಷ ರವೀಂದ್ರ ಪ್ರಭು ಹಾಗೂ ನಿರ್ದೇಶಕ ಮಂಡಳಿಯ ದೂರದೃಷ್ಟಿಯ ಫಲವಾಗಿ ಯೋಜನೆ ಯಶಸ್ವಿಯಾಗಿದೆ ಎಂದರು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹಾಗೂ ಸಹಕಾರ ಮಹಾಮಂಡಳ ನಿರ್ದೇಶಕ ಸಹಕಾರ ರತ್ನ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಸೊಸೈಟಿ ಬ್ಯಾಂಕಿಂಗ್ ಸೇವೆಗಳಷ್ಟೇ ಅಲ್ಲದೆ ಗ್ರಾಮೀಣ ಅಭಿವೃದ್ಧಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲೂ ಸೇವೆ ನೀಡುತ್ತಿದೆ ಎಂದರು. ಸಹಕಾರಿ ರಂಗ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಜನತೆಗೆ ಅನೇಕ ಅವಕಾಶಗಳನ್ನು ಒದಗಿಸುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮಾತನಾಡಿ, ರಾಜಪುರ ಸಮಾಜದ ಜನಸಂಖ್ಯೆ ಮುಖ್ಯವಲ್ಲ ಸಮಾಜದಲ್ಲಿ ಹೇಗೆ ತೊಡಗಿಸಿಕೊಳ್ಳುತ್ತಾರೆ ಎಂಬುದೇ ಮುಖ್ಯ , ಅದರ ಪ್ರತಿಪಲವೆ ಈ ಕಟ್ಟಡವಾಗಿದೆ ಎಂದು ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕ ಸದಾಶಿವ ಪ್ರಭು ಬಿ.ಮಾತನಾಡಿ ಸತತ ಮುವತ್ತು ವರ್ಷಗಳ ಸೇವೆಗೆ ಸಿಬ್ಬಂದಿಗಳು ಹಾಗೂ ನಿರ್ದೇಶಕ ಮಂಡಳಿಯ ಕಾರ್ಯ ಅನನ್ಯವಾದುದು ಎಂದರು.
ಮಂಗಳೂರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್, ಉದ್ಯಮಿ ಸಂತೋಷ್ ವಾಗ್ಳೆ, ಸಹಕಾರಿ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್., ಕುಂದಾಪುರ ವಿಭಾಗದ ಸಹಕಾರಿ ಸಂಘಗಳ ನಿಬಂಧಕ ಸುಧೀರ್ ಕುಮಾರ್, ಅಡಪಾಡಿ ಕ್ಷೇತ್ರದ ಧರ್ಮದರ್ಶಿ ಪುಂಡಲೀಕ ನಾಯಕ್, ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಆಡಳಿತ ಮೊಕ್ತೇಸರ ಚೇತನ್ ನಾಯಕ್, ಸಿಇಒ ಸುರೇಂದ್ರ ನಾಯಕ್ ಉಪಸ್ಥಿತರಿದ್ದರು.
ಸಿಇಒ ಸುರೇಂದ್ರ ನಾಯಕ್ ದಂಪತಿಗಳು ಪೇಜಾವರ ಸ್ವಾಮೀಜಿ ಹಾಗೂ ಶಿವಾನಂದ ಸ್ವಾಮೀಜಿಯವರಿಗೆ ಪಾದಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಸೇರಿದಂತೆ ರವೀಂದ್ರ ಆಚಾರ್ಯ, ನಾಗರಾಜ ಆಚಾರ್ಯ, ಸತೀಶ್ ಪ್ರಭು, ಅನೀಶ್ ತೆಂಡುಲ್ಕರ್, ದಾಮೋದರ ಆಚಾರ್ಯ, ವಿಕ್ರಂ ಅವರನ್ನು ಸನ್ಮಾನಿಸಲಾಯಿತು.
ಕೀರ್ತಿ ಶೆಣೈ ಪ್ರಾರ್ಥಿಸಿದರು. ನೀರೆ ರವೀಂದ್ರ ನಾಯಕ್ ಸ್ವಾಗತಿಸಿದರು. ಸಿಇಒ ಸುರೇಂದ್ರ ನಾಯಕ್ ಧನ್ಯವಾದ ಸಲ್ಲಿಸಿದರು. ಸಂತೋಷ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


.
.
.
.
.
.
.
.
.
.
.
.
.
.
.
.
.
.
.
.
