
ಕಾರ್ಕಳ,ಜು.28: ಅಜೆಕಾರು ಜ್ಞಾನಸುಧ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಶಾಲಾ ಸಂಸತ್ತು ಉದ್ಘಾಟನೆ ಹಾಗೂ ಪ್ರಮಾಣವಚನ ಸ್ವೀಕಾರ ಸಮಾರಂಭ ಹಾಗೂ ಪೋಷಕರ ಸಭೆಯು ಜು. 27ರಂದು ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಭಾಗವಹಿಸಿ ಮಾತನಾಡಿ, ಜೀವನದಲ್ಲಿ ಎಂದಿಗೂ ಅಹಂಕಾರ ಪಡಬಾರದು. ಎಷ್ಟೇ ಉನ್ನತ ಸ್ಥಾನಕ್ಕೆ ಏರಿದರೂ ಸರಳತೆ, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವವನ್ನು ಅಳವಡಿಸಿಕೊಳ್ಳಬೇಕು ಕಿವಿಮಾತು ಹೇಳಿ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಶುಭ ಹಾರೈಸಿದರು.
ಪ್ರಾಂಶುಪಾಲರಾದ ಸಂತೋಷ್ ಅವರು ನೂತನ ವಿದ್ಯಾರ್ಥಿ ಸಂಸತ್ ಸದಸ್ಯರಿಗೆ ಪ್ರಮಾಣವಚನ ಬೋಧಿಸಿ, ಶಾಲೆಯ ಶಿಸ್ತು, ಗೌರವ ಹಾಗೂ ವಿದ್ಯಾರ್ಥಿಗಳ ಹಿತಕ್ಕಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.
ಜ್ಞಾನಸುಧ ಶಿಕ್ಷಣ ಸಂಸ್ಥೆಗಳ ಎ.ಪಿ.ಆರ್.ಒ. ರಾಮಚಂದ್ರ ನೆಲ್ಲಿಕಾರ್ ಅವರು ಮಾತನಾಡಿ, 2026–27ನೇ ಸಾಲಿನ ಅಜೆಕಾರು ಜ್ಞಾನಸುಧದ ವಿದ್ಯಾರ್ಥಿ ಸಂಸತ್ತು ಮಾದರಿ ಸಂಸತ್ತಾಗಿ ಬೆಳೆಯಲಿ ಎಂದು ಹಾರೈಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಾ ದೇಶದ ಉತ್ತಮ ನಾಗರಿಕರಾಗಬೇಕೆಂದು ಶುಭ ಹಾರೈಸಿದರು. ಉಪಪ್ರಾಂಶುಪಾಲೆ ಆರತಿ ಅವರು ವಿದ್ಯಾರ್ಥಿಗಳಿಗೆ ಜವಾಬ್ದಾರಿಯುತ ನಾಯಕತ್ವ, ಶಿಸ್ತು ಹಾಗೂ ಸೇವಾ ಮನೋಭಾವದ ಕುರಿತು ಅಮೂಲ್ಯ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕುಮಾರಿ ಕೀರ್ತನಾ ಸ್ವಾಗತಿಸಿದರು. ಶಿಕ್ಷಕಿ ಆಶಾ ಜ್ಯೋತಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಅದಿತಿ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿ ಲಿಸ್ಟನ್ ಮಿನೇಜಸ್ ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ನೂತನ ವಿದ್ಯಾರ್ಥಿ ಸಂಸತ್ ಸದಸ್ಯರಿಗೆ ಶುಭ ಹಾರೈಸಿದರು.




.
.
.
.
.
.
.
.
.
.
.
.
.
.
.
.
.
.
.
.
