

ಬೆಂಗಳೂರು, ಸೆ. 05: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಐವರು ಖೈದಿಗಳು ಜೈಲು ವಾರ್ಡರ್ ಮಂಜುನಾಥ ಎಂಬವರ ಮೇಲೆ ಭೀಕರ ಹಲ್ಲೆ ನಡೆಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಐವರು ಆರೋಪಿಗಳಾದ ಮೊಹಮ್ಮದ್ ಮುಜಾಮಿಲ್, ಅಬ್ದುಲ್ ಶಫ್ಗನ್, ಮೊಹಮ್ಮದ್ ರಿಜ್ವಾನ್, ನಿಯಾಜ್ (ನಯಾಜ್)ಹಾಗೂ ಕಲಂದರ್ ಶಫಿ ಹಲ್ಲೆಗೈದವರು.
ಕಳೆದ ಆಗಸ್ಟ್ 22 ರಂದು ಐವರು ಆರೋಪಿಗಳನ್ನು ಪರಪ್ಪನ ಅಗ್ರಹಾರದ ‘ಅನೆಕ್ಸ್-1’ ಕಟ್ಟಡಕ್ಕೆ ವರ್ಗಾಯಿಸಲಾಗಿತ್ತು. ಆ ಸಂದರ್ಭದಲ್ಲಿ ತಮ್ಮೊಂದಿಗೆ ನಿಯಮಬಾಹಿರವಾಗಿ ಹೆಚ್ಚುವರಿ ವಸ್ತುಗಳನ್ನು ಜೈಲಿನೊಳಗೆ ತೆಗೆದುಕೊಂಡು ಹೋಗಲು ಯತ್ನಿಸಿದ್ದರು. ಆದರೆ ಜೈಲು ವಾರ್ಡರ್ ಮಂಜುನಾಥ್ ಅವರು ಕಾನೂನಿನಂತೆ ಹೆಚ್ಚುವರಿ ವಸ್ತುಗಳನ್ನು ಒಳಗೆ ಬಿಡದೆ ತಡೆದಿದ್ದರು. ಇದೇ ವಿಷಯದಲ್ಲಿ ಆರೋಪಿಗಳು ಮಂಜುನಾಥ್ ವಿರುದ್ಧ ವೈಷಮ್ಯ ಬೆಳೆಸಿಕೊಂಡು ಮಂಜುನಾಥ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ್ದರು.
ಸೆಪ್ಟೆಂಬರ್ 2 ರಂದು ಆರೋಪಿಗಳ ವಿಡಿಯೋ ಕಾನ್ಫರೆನ್ಸ್ ಹಾಜರಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲು ವಾರ್ಡರ್ ಮಂಜುನಾಥ್ ಅನೆಕ್ಸ್-1 ಕಟ್ಟಡಕ್ಕೆ ತೆರಳಿದ್ದ ವೇಳೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ಆರೋಪಿ ಮೊಹಮ್ಮದ್ ಮುಜಾಮಿಲ್ ಹಳೆಯ ದ್ವೇಷವನ್ನು ಮುಂದಿಟ್ಟುಕೊಂಡು ವಾರ್ಡರ್ ಜೊತೆ ವಾಗ್ವಾದ ನಡೆಸಿ ಏಕಾಏಕಿ ಮಂಜುನಾಥ್ ಅವರ ಮುಖ ಹಾಗೂ ಮೂಗಿಗೆ ಮುಷ್ಠಿಯಿಂದ ಬಲವಾಗಿ ಗುದ್ದಿ ರಕ್ತ ಬರುವಂತೆ ಗಾಯಗೊಳಿಸಿದ್ದಾನೆ. ತಕ್ಷಣವೇ ಆತನ ಸಹಚರರು ಕೈಜೋಡಿಸಿ, ಮಂಜುನಾಥ್ ಅವರನ್ನು ಕೊಠಡಿ ಸಂಖ್ಯೆ 4 ಕ್ಕೆ ಎಳೆದುಕೊಂಡು ಹೋಗಿ ಮನಸೋಇಚ್ಛೆ ಥಳಿಸಿದ್ದಾರೆ.
ಬಳಿಕ ತಕ್ಷಣವೇ ಜೈಲು ಸಿಬ್ಬಂದಿಗಳು ಮಂಜುನಾಥ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಐವರು ಖೈದಿಗಳ ಅಟ್ಟಹಾಸಕ್ಕೆ ಜೈಲು ಸಿಬ್ಬಂದಿಗಳೇ ಬೆಚ್ಚಿಬಿದ್ದಿದ್ದಾರೆ. ಬಂಧಿತ ಖೈದಿಗಳಾದ ಮೊಹಮ್ಮದ್ ಮುಜಾಮಿಲ್, ಅಬ್ದುಲ್ ಶಫ್ಗನ್, ಮೊಹಮ್ಮದ್ ರಿಜ್ವಾನ್, ನಿಯಾಜ್ (ನಯಾಜ್) ಹಾಗೂ ಕಲಂದರ್ ಶಫಿ ವಿರುದ್ಧ ಕೊಲೆ ಯತ್ನ ಸೇರಿದಂತೆ ವಿವಿಧ ಗಂಭೀರ ಪ್ರಕರಣಗಳ ಅಡಿಯಲ್ಲಿ FIR ದಾಖಲಾಗಿದೆ.
ಜೈಲಿನ ಆಡಳಿತ ವ್ಯವಸ್ಥೆ ಮತ್ತು ಭದ್ರತೆಯ ಬಗ್ಗೆ ಸಾರ್ವಜನಿಕವಾಗಿ ತೀವ್ರ ಕಳವಳ ವ್ಯಕ್ತವಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
