

ಕಲಬುರಗಿ, ಸೆ.04:RSS ಪಥಸಂಚಲನದಲ್ಲಿ ಭಾಗವಹಿಸಿರುವ ಆರೋಪದದಲ್ಲಿ ಯಾದಗಿರಿ ಜಿಲ್ಲೆಯ ಇಬ್ಬರು ಸರ್ಕಾರಿ ಶಿಕ್ಷಕರನ್ನು ಅಮಾನತುಗೊಳಿಸಿದ ಸರ್ಕಾರದ ಆದೇಶಕ್ಕೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ(KSAT) ತಡೆ ನೀಡಿದೆ.
ಶಿಕ್ಷಕರಾದ ಗುರುರಾಜ್ ಜೋಶಿ ಮತ್ತು ಅಣ್ಣಾಸಾಹೇಬ್ ದೇಶಮುಖ್ ಅವರು ಕಳೆದ 2025ರ ಅಕ್ಟೋಬರ್ 12ರಂದು ನಡೆದ RSS ಪಥಸಂಚಲನದಲ್ಲಿ ಭಾಗವಹಿಸಿದ್ದರು ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಅವರನ್ನು ಅಮಾನತುಗೊಳಿಸಿತ್ತು.ಸರ್ಕಾರದ ಅಮಾನತು ಆದೇಶ ಪ್ರಶ್ನಿಸಿ ಶಿಕ್ಷಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ KSAT ಕಲಬುರಗಿ ಪೀಠ, ಸರ್ಕಾರದ ಅಮಾನತು ಆದೇಶಕ್ಕೆ ತಡೆ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ KSAT ಕಲಬುರಗಿ ಪೀಠವು, RSS ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ನಿಷೇಧಿಸುವ ಯಾವುದೇ ನಿರ್ದಿಷ್ಟ ಸರ್ಕಾರಿ ಆದೇಶವನ್ನು ಸರ್ಕಾರ ತೋರಿಸಿಲ್ಲ ಎಂದು ಹೇಳಿದೆ. ಅಲ್ಲದೆ, RSS ರಾಜಕೀಯ ಸಂಘಟನೆ ಎಂದು ಪರಿಗಣಿಸುವ ಕುರಿತು ಈ ಹಂತದಲ್ಲಿ ಯಾವುದೇ ನಿರ್ಣಾಯಕ ವಿಚಾರವನ್ನು ದಾಖಲಿಸದೇ ರಾಜಕೀಯೇತರ ಸಂಘಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಮಾತ್ರವೇ 2021ರ ಸರ್ಕಾರಿ ನೌಕರರ ನಡತೆ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಮೇಲ್ನೋಟಕ್ಕೆ ಹೇಳಲಾಗದು ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 9ರಂದು ನಡೆಸಲಿದೆ. ಮುಂದಿನ ವಿಚಾರಣೆಯಲ್ಲಿ ಸರ್ಕಾರ ತನ್ನ ವಾದವನ್ನು ಮಂಡಿಸಲಿದೆ.





.
.
.
.
.
.
.
.
.
.
.
.
.
.
.
.
.
.
.
.
