ಬೆಂಗಳೂರು:ರಾಜ್ಯ ಸರ್ಕಾರ ಈಗಾಗಲೇ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಜಾರಿಗೊಳಿಸಿದೆ.ಆದರೆ ರಾಜ್ಯದಾದ್ಯಂತ ಎಲ್ಲಾ ಕಡೆಗಳಲ್ಲಿ ಸರ್ಕಾರಿ ಬಸ್ ಸೇವೆ ಇಲ್ಲದ ಹಿನ್ನೆಲೆಯಲ್ಲಿ ಖಾಸಗಿ ಬಸ್ ಗಳಿಗೂ ಶಕ್ತಿ ಯೋಜನೆ ವಿಸ್ತರಿಸುವಂತೆ ಈ ಹಿಂದೆ ಸಾಕಷ್ಟು ಒತ್ತಾಯ ಕೇಳಿಬಂದಿತ್ತು.ಅದರಂತೆ ಖಾಸಗಿ ಬಸ್ ಗಳಲ್ಲಿಯೂ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.
ಅರ್ಜಿದಾರರ ಮನವಿಯನ್ನು ಸರ್ಕಾರ ಎರಡು ತಿಂಗಳಲ್ಲಿ ಪರಿಗಣಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಉಡುಪಿ ಜಿಲ್ಲೆಯ ಕಾರ್ಕಳದ ಖಾಸಗಿ ಬಸ್ ಮಾಲಕ ಶರತ್ ಶೆಟ್ಟಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ಪೀಠ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಪುತ್ತಿಗೆ ರಮೇಶ್ ವಾದ ಮಂಡಿಸಿ, ಶಕ್ತಿ ಯೋಜನೆ ಜಾರಿಯಾಗಿ ಖಾಸಗಿ ಬಸ್ ಮಾಲೀಕರು ಸಂಕಷ್ಟದಲ್ಲಿದ್ದಾರೆ. ಈ ಯೋಜನೆಯನ್ನು ಖಾಸಗಿ ಬಸ್ ಗಳಿಗೂ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದರು.
ಒಂದು ವೇಳೆ ಹೈಕೋರ್ಟ್ ನಿರ್ದೇಶನಕ್ಕೆ ಸರ್ಕಾರ ಅಸ್ತು ಎಂದರೆ ಸರ್ಕಾರಿ ಬಸ್ ಸೇವೆಯಿಂದ ವಂಚಿತರಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮಹಿಳೆಯರಿಗೆ ಇದರಿಂದ ಭಾರೀ ಲಾಭವಾಗಲಿದೆ. ಸರ್ಕಾರ ಆದಷ್ಟು ಬೇಗ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣ ಭಾಗ್ಯ ಕಲ್ಪಿಸಲಿ ಎಂದು ಮಹಿಳೆಯರು ಆಗ್ರಹಿಸುತ್ತಿದ್ದಾರೆ.
ಸರ್ಕಾರ ಇದಕ್ಕೆ ಅಸ್ತು ಎಂದಲ್ಲಿ ಸರ್ಕಾರಿ ಬಸ್ಸುಗಳಂತೆ ಖಾಸಗಿ ಬಸ್ಸುಗಳಲ್ಲಿಯೂ ಮಹಿಳೆಯರ ‘ಶಕ್ತಿ’ ಪ್ರದರ್ಶನವಾಗಲಿದೆ
ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ