ಉಡುಪಿ :ರಾಜ್ಯಾದ್ಯಂತ ಕೃಷ್ಣಜನ್ಮಾಷ್ಟಮಿಯ ಸಂಭ್ರಮ ಕಳೆಗಟ್ಟಿದೆ. ಅದರಲ್ಲೂ ಕೃಷ್ಣನೂರು ಉಡುಪಿಯ ಶ್ರೀಕೃಷ್ಣ ಮಠ ಹಬ್ಬದ ರಂಗಿನಿಂದ ಕಂಗೊಳಿಸಿದೆ. ದೇಗುಲದ ತುಂಬೆಲ್ಲಾ ವಿಶೇಷ ಅಲಂಕಾರ, ಭಕ್ತರಿಂದ ಜಪ ತಪ, ಪುರದ ತುಂಬ ಹುಲಿ ವೇಷಗಳ ಕಲರವ, ಕಡೆಗೋಲು ಕೃಷ್ಣನ ನಗರಿಯಲ್ಲಿ ಎರಡು ದಿನ ಉತ್ಸವದ ಸಂಭ್ರಮ.
ಕೃಷ್ಣಮಠದಲ್ಲಿ ಮಧ್ಯರಾತ್ರಿ 11.42ಕ್ಕೆ ಕೃಷ್ಣನ ಅವತಾರ ಗಳಿಗೆಯಲ್ಲಿ ಕೃಷ್ಣನಿಗೆ ಪ್ರಧಾನ ಅರ್ಘ್ಯ ಪ್ರದಾನ ಮಾಡಿದ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ನಂತರ ಹೊರಗೆ ತುಳಸಿಕಟ್ಟೆಯಲ್ಲಿ ಚಂದ್ರನಿಗೆ ಅರ್ಘ್ಯ ಪ್ರದಾನ ಮಾಡಿದರು. ಶ್ರೀಗಳು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಮತ್ತು ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಂದಲೂ ಅರ್ಘ್ಯ ಪ್ರದಾನ ಬಳಿಕ ಸಾರ್ವಜನಿಕರಿಂದ ಕೃಷ್ಣನಿಗೆ ಅರ್ಘ್ಯ ಪ್ರದಾನ ನಡೆಯಿತು.
ಇಂದು ರಥಬೀದಿಯಲ್ಲಿ ಕೃಷ್ಣ ಲೀಲೋತ್ಸವ – ಮೊಸರುಕುಡಿಕೆ ಆಚರಣೆ ನಡೆಯಲಿದೆ ಶ್ರೀ ಕೃಷ್ಣಮಠವು ವಿಶೇಷ ಹೂವಿನ ಅಲಂಕೃತಗೊಂಡಿದ್ದು, ಇಂದು. ಮುಂಜಾನೆಯಿಂದಲೇ ಸಾವಿರಾರು ಭಕ್ತರು ಕೃಷ್ಣಮಠಕ್ಕೆ ಆಗಮಿಸಿ ಅಲಂಕೃತ ಬಾಲ ಕೃಷ್ಣನ ದರ್ಶನ ಪಡೆದರು. ಕೃಷ್ಣ ಜಯಂತಿಯ ಪ್ರಯುಕ್ತ ಕಡೆಗೋಲು ಕೃಷ್ಣನಿಗೆ ಮೊಸರು ಮೆಲ್ಲುತ್ತಿರುವ ಬಾಲಕೃಷ್ಣನ ವಿಶೇಷ ಅಲಂಕಾರ ಮಾಡಿದ್ದು ಗಮನ ಸೆಳೆಯಿತು.
ಚಿನ್ನದ ರಥದಲ್ಲಿ ಕೃಷ್ಣನ ಮಣ್ಣಿನ ವಿಗ್ರಹಕ್ಕೆ ಉತ್ಸವ, ಬಳಿಕ ಭಕ್ತರಿಗೆ ಕೃಷ್ಣನಿಗೆ ಅರ್ಪಿಸಿದ ಲಡ್ಡುಚಕ್ಕುಲಿ ಪ್ರಸಾದದ ವಿತರಣೆ ನಡೆಯಲಿದೆ.
ಉಡುಪಿ ಅಂದರೆ ಕೃಷ್ಣಮಠ, ಕೃಷ್ಣಮಠವೆಂದರೆ ಅಷ್ಟಮಿ, ಅಷ್ಟಮಿ ಅಂದರೆ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥರು. ಹೀಗೊಂದು ಭಾವನೆ ಮೂಡುವುದಕ್ಕೆ ಕಾರಣವೂ ಇದೆ, ವಿಟ್ಲಪಿಂಡಿ ಆಚರಣೆಗೆ ಹೊಸ ಆಯಾಮ ಕೊಟ್ಟವರು ಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮಿವರ ತೀರ್ಥ ಸ್ಚಾಮಿಗಳು. ಅಷ್ಟಮಿಯ ದಿನ ಆರ್ಘ್ಯ ಪ್ರದಾನ ಮುಗಿದ ನಂತರ, ಶ್ರೀ ಕೃಷ್ಣ ಲೀಲೋತ್ಸವದ ಸಂಭ್ರಮ ರಥ ಬೀದಿಯನ್ನು ಆವರಿಸಿಬಿಡುತ್ತದೆ. ಅನೇಕ ಮಂದಿ ಉಪವಾಸ, ಪೂಜೆ ಪುನಸ್ಕಾರಗಳ ಮೂಲಕ ಕೃಷ್ಣ ನ ಆರಾಧನೆ ಮಾಡಿದರೆ, ಕಲಾರಾಧನೆಯ ಮೂಲಕವೂ ಕೃಷ್ಣನ ಪೂಜೆ ಮಾಡುತ್ತಾರೆ.