ಪಲ್ಲಕೆಲೆ: ಇಡೀ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿರುವ ರೋಚಕ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಕ್ರಿಕೆಟ್ ಪ್ರೇಮಿಗಳ ಉಸಿರು ಬಿಗಿ ಹಿಡಿಯುವಂತೆ ಮಾಡುವ ಜಗತ್ತಿನ ಏಕೈಕ ಕದನ ಅಂದ್ರೆ ಅದು ಇಂಡೋ-ಪಾಕ್ ಕ್ರಿಕೆಟ್ ಪಂದ್ಯ. 4 ವರ್ಷಗಳ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ಭಾರತ-ಪಾಕ್ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಗುತ್ತಿರುವುದು ಸ್ಪರ್ಧೆಯ ರೋಚಕತೆಯನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ. ಸೆಪ್ಟೆಂಬರ್ 2ರಂದು ಶ್ರೀಲಂಕಾದ ಪಲ್ಲೆಕೆಲೆ ಕ್ರಿಕೆಟ್ ಮೈದಾನದಲ್ಲಿ ಕಾದಾಟ ನಡೆಸಲು ಭರ್ಜರಿ ಸಿದ್ಧತೆ ಮಾಡಿಕೊಂಡಿವೆ
ಭಾರತ ಹಾಗೂ ಪಾಕಿಸ್ತಾನ ನಡುವಿನ ಕಾದಾಟಕ್ಕೆ ಪಲ್ಲಕೆಲೆ ವೇದಿಕೆಯಾಗುತ್ತಿದ್ದು, ಶನಿವಾರ ಇಲ್ಲಿ ಬಹುನಿರೀಕ್ಷಿತ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯ ತನ್ನದೇ ರೀತಿಯಲ್ಲಿ ವಿಶೇಷತೆ ಪಡೆದಿದ್ದು, 4 ವರ್ಷ ಬಳಿಕ ಉಭಯ ತಂಡಗಳು ಏಕದಿನ ಮಾದರಿಯಲ್ಲಿ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಕೊನೆಯ ಬಾರಿಗೆ ಏಕದಿನ ಪಂದ್ಯವಾಡಿದ್ದು 2019ರ ವಿಶ್ವಕಪ್‌ನಲ್ಲಿ. ಇದೀಗ ಮತ್ತೊಂದು ವಿಶ್ವಕಪ್ ಮುಖಾಮುಖಿಗೆ ಒಂದೂವರೆ ತಿಂಗಳಷ್ಟೇ ಬಾಕಿ ಇದ್ದು, ಈ ಪಂದ್ಯ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಪಂದ್ಯ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಡಿಸ್ನಿ+ ಹಾಟ್‌ಸ್ಟಾರ್ ನಲ್ಲಿ ನೇರಪ್ರಸಾರಗೊಳ್ಳಲಿದೆ. ಪಲ್ಲಕೆಲೆಯಲ್ಲಿ ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ಮಳೆ ಮುನ್ಸೂಚನೆ ಇದ್ದು, ಪಂದ್ಯ ತಡವಾಗಿ ಆರಂಭವಾಗುವ ಸಾಧ್ಯತೆಯಿದೆ.
ಎರಡೂ ತಂಡಗಳು ಪರಸ್ಪರ ಎದುರಾಗುವಾಗ ಭಾರತದ ಬ್ಯಾಟರ್‌ಗಳು ಹಾಗೂ ಪಾಕಿಸ್ತಾನ ವೇಗಿಗಳ ನಡುವಿನ ಪೈಪೋಟಿಯೇ ಹೆಚ್ಚು ಆಸಕ್ತಿ ಕೆರಳಿಸಲಿದೆ. ಈ ಸಲದ ಸನ್ನಿವೇಶವೂ ವಿಭಿನ್ನವಾಗಿಲ್ಲ. ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿಗೆ ಶಾಹೀನ್ ಅಫ್ರಿದಿ, ನಸೀಂ ಶಾ, ಹ್ಯಾರಿಸ್ ರೌಫ್ ಸವಾಲೆಸೆಯಲಿದ್ದಾರೆ. ಶ್ರೇಯಸ್ ಅಯ್ಯರ್ ತಂಡದಲ್ಲಿದ್ದು ಅವರು ಬ್ಯಾಟಿಂಗ್ ಬಲ ಹೆಚ್ಚಿಸುವ ನಿರೀಕ್ಷೆ ಮೂಡಿಸಿದೆ. 2019ರ ಏಕದಿನ ವಿಶ್ವಕಪ್ ಬಳಿಕ 4ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್‌ರಷ್ಟು ಯಶಸ್ಸು ವಿಶ್ವದ ಮತ್ತಿನ್ಯಾವ ಬ್ಯಾಟರ್‌ಗೂ ಸಿಕ್ಕಿಲ್ಲ. ಅವರು 94.37ರ ಸ್ಟ್ರೈಕ್‌ರೇಟ್, 47.35ರ ಸರಾಸರಿಯಲ್ಲಿ 805 ರನ್ ಕಲೆಹಾಕಿದ್ದಾರೆ. 2 ಶತಕ ಸಹ ದಾಖಲಾಗಿದೆ. ಕೆ.ಎಲ್.ರಾಹುಲ್ ಅಲಭ್ಯರಾಗಲಿರುವ ಕಾರಣ, ಇಶಾನ್ ಕಿಶನ್‌ಗೆ ಮತ್ತೊಂದು ಅವಕಾಶ ಸಿಗಲಿದೆ.
ಭಾರತ ತನ್ನ ಕೆಳ ಕ್ರಮಾಂಕವನ್ನು ಬಲಿಷ್ಠಗೊಳಿಸಬೇಕಿದ್ದರೆ ಶಾರ್ದೂಲ್ ಠಾಕೂರ್‌ರನ್ನು ಆಡಿಸಬೇಕು. ಇಲ್ಲವಾದಲ್ಲಿ ಜಸ್‌ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್, ಮೊಹಮದ್ ಶಮಿಯೊಂದಿಗೆ ಆಡಬಹುದು. ಕುಲ್ದೀಪ್ ಯಾದವ್ ಆಡುವುದು ಬಹುತೇಕ ಖಚಿತವೆನಿಸಿದ್ದು, ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಆಲ್ರೌಂಡರ್‌ಗಳ ಸ್ಥಾನ ನಿರ್ವಹಿಸಲಿದ್ದಾರೆ.
ಉಭಯ ತಂಡಗಳ ನಡುವಿನ ಕಳೆದ 5 ಮುಖಾಮುಖಿಗಳಲ್ಲಿ ಭಾರತ 4ರಲ್ಲಿ ಗೆದ್ದಿದ್ದು, ಪಾಕಿಸ್ತಾನ 1 ಪಂದ್ಯ ಜಯಿಸಿದೆ. ಈ ಪಂದ್ಯದಲ್ಲೂ ಭರ್ಜರಿ ಪೈಪೋಟಿ ಎದುರಾಗಬಹುದು.