ಒಡಿಶಾ: ನಿನ್ನೆ ಸಂಜೆ ಒಡಿಶಾದ ಬಾಲಸೋರ್ ಜಿಲ್ಲೆಯ ಬಹಾನ್ ರೈಲ್ವೆ ನಿಲ್ದಾಣದಲ್ಲಿ ಮೂರು ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಈ ಘಟನಾ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭೀಕರ ಅಪಘಾತದಲ್ಲಿ 292 ಮಂದಿ ಮೃತಪಟ್ಟಿದ್ದಾರೆ. ಬರೋಬ್ಬರಿ 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭೀಕರ ದುರಂತ ನಡೆದ ಬೆನ್ನಲ್ಲೇ ರೈಲ್ವೇ ಸಚಿವರ ಜೊತೆ ಮಾತುಕತೆ ನಡೆಸಿದ್ದ ಮೋದಿ, ಅಗತ್ಯ ನೆರವಿಗೆ ಸೂಚನೆ ನೀಡಿದ್ದರು. ಇಂದು ಎಲ್ಲಾ ಕಾರ್ಯಕ್ರಮ ರದ್ದುಗೊಳಿಸಿರುವ ಮೋದಿ ದುರಂತ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಘಟನಾ ಸ್ಥಳದಲ್ಲಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೇ ಅಧಿಕಾರಿಗಳು ಅಪಘಾತದ ಮಾಹಿತಿಯನ್ನು ನೀಡಿದ್ದಾರೆ. ಸುಮಾರು 40 ನಿಮಿಷಗಳ ಕಾಲ ಘಟನಾ ಸ್ಥಳದಲ್ಲಿದ್ದ ಮೋದಿ, ಭೀಕರ ಅಪಘಾತದ ಇಂಚಿಂಚು ಮಾಹಿತಿ ಪಡೆದಿದ್ದಾರೆ.
ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಜೊತೆ ಮಾತನಾಡಿದ ಮೋದಿ, ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡುವ ಮೊದಲು ಪ್ರಧಾನಿ ಮೋದಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಈ ವೇಳೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದರು. ಇತ್ತ ಅಶ್ವಿನಿ ವೈಷ್ಣವ್ ದುರಂತ ನಡೆದ ನಿನ್ನೆ ರಾತ್ರಿಯಿಂದ ಘಟನಾ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.
ಘಟನಾ ಸ್ಥಳ ಭೇಟಿ ಬಳಿಕ ಪ್ರಧಾನಿ ಮೋದಿ, ಕಟಕ್‌ನಲ್ಲಿ ಆಸ್ಪತ್ರೆಗೆ ತೆರಳಲಿದ್ದಾರೆ. ರೈಲು ದುರಂತದಲ್ಲಿ ಗಾಯಗೊಂಡ 900ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೋದಿ ಕಟಕ್‌ನಲ್ಲಿ ಗಾಯಳುಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಲಿದ್ದಾರೆ.
ಒಡಿಶಾದ ಬಾಲಸೋರ್ ಬಳಿ 3 ರೈಲುಗಳು ಅಪಘಾತಕ್ಕೆ ಈಡಾದ ಬೆನ್ನಲ್ಲೇ ತಮ್ಮೆಲ್ಲ ಅಧಿಕೃತ ಪ್ರವಾಸ ರದ್ದುಗೊಳಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಘಟನಾ ಸ್ಥಳಕ್ಕೆ ಶುಕ್ರವಾರ ತಡರಾತ್ರಿಯೇ ದೌಡಾಯಿಸಿದರು. ಅಲ್ಲದೆ, ಶನಿವಾರದ ಗೋವಾ-ಮುಂಬೈ ವಂದೇಭಾರತ್ ರೈಲು ಉದ್ಘಾಟನಾ ಕಾರ್ಯಕ್ರಮವನ್ನೂ ರದ್ದುಗೊಳಿಸಿದರು.
ಘಟನಾ ಸ್ಥಳದಲ್ಲಿ 3 ರೈಲು ಮಾರ್ಗಗಳಿದ್ದವು. ಕೋಲ್ಕತಾದ ಶಾಲಿಮಾರ್ ರೈಲು ನಿಲ್ದಾಣದಿಂದ ಚೆನ್ನೈಗೆ ಮೇನ್ ಲೈನ್‌ನಲ್ಲಿ ಸಂಜೆ 7.30ಕ್ಕೆ ಹೊರಟಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12841), ಒಡಿಶಾದ ಬಹನಗಾ ಬಜಾರ್‌ನಲ್ಲಿರುವ ರೈಲು ನಿಲ್ದಾಣದ ಬಳಿ ಹಳಿತಪ್ಪಿ ಪಕ್ಕದ ಹಳಿಯಲ್ಲಿ ನಿಂತಿದ್ದ ಗೂಡ್‌್ಸ ರೈಲಿಗೆ ಮೊದಲು ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕೋರಮಂಡಲ್ ಎಕ್ಸ್‌ಪ್ರೆಸ್‌ನ 12 ಬೋಗಿಗಳು ಹಳಿ ತಪ್ಪಿ ಮೂರನೇ ರೈಲು ಮಾರ್ಗದ ಮೇಲೂ ಬಿದ್ದಿವೆ. ಕೆಲವು ಸಮಯದ ಬಳಿಕ ಇದೇ ಮಾರ್ಗವಾಗಿ ಇನ್ನೊಂದು ಹಳಿಯಲ್ಲಿ ವಿರುದ್ಧ ದಿಕ್ಕಿನಿಂದ ಆಗಮಿಸಿದ ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12864) ಸಹ ಹಳಿತಪ್ಪಿದ್ದ ಕೋರಮಂಡಲ್‌ನ ಬೋಗಿಗಳಿಗೆ ಡಿಕ್ಕಿ ಹೊಡೆದಿದ್ದು, ನಾಲ್ಕು ಬೋಗಿಗಳು ಹಳಿತಪ್ಪಿವೆ ಎಂದು ರೈಲ್ವೆ ಸಚಿವಾಲಯದ ವಕ್ತಾರ ಅಮಿತಾಭ್ ಶರ್ಮಾ ಹೇಳಿದ್ದಾರೆ.