ನವದೆಹಲಿ: ಒಡಿಶಾ ರೈಲು ಅಪಘಾತದ ತನಿಖೆಯನ್ನು ಕೇಂದ್ರೀಯ ತನಿಖಾ ದಳ ಮಂಗಳವಾರ ವಹಿಸಿಕೊಂಡಿದ್ದು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ.
ಕೋರಮಂಡಲ್ ಎಕ್ಸ್ಪ್ರೆಸ್, ಯಶವಂತಪುರ-ಹೌರಾ ಎಕ್ಸ್ಪ್ರೆಸ್ ಮತ್ತು ಗೂಡ್ಸ್ ರೈಲು ಡಿಕ್ಕಿ ಹೊಡಿದಿದ್ದ ಒಡಿಶಾದ ಬಾಲಸೋರ್ನ ಬಹನಾಗ ಬಜಾರ್ನಲ್ಲಿ ತನಿಖೆ ನಡೆಸಲು ಸಿಬಿಐ, ವಿಧಿವಿಜ್ಞಾನ ತಜ್ಞರೊಂದಿಗೆ ಬಾಲಸೋರ್ಗೆ ತಲುಪಿತ್ತು. ಈ ಅಪಘಾತದ ಕುರಿತು 03.06.2023 ರ GRPS ಪ್ರಕರಣ ಸಂಖ್ಯೆ.64 ರಡಿಯಲ್ಲಿ ಬಾಲಸೋರ್ GRPS, ಜಿಲ್ಲಾ ಕಟಕ್ (ಒಡಿಶಾ) ನಲ್ಲಿ ಈ ಹಿಂದೆ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ.

ನಿಗದಿತ ಕಾರ್ಯವಿಧಾನವನ್ನು ಅನುಸರಿಸಿ, ಜೂನ್ 3 ರಂದು ಐಪಿಸಿ ಸೆಕ್ಷನ್ಗಳು 337, 338, 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು) ಮತ್ತು 34 (ಸಾಮಾನ್ಯ ಉದ್ದೇಶ), ಮತ್ತು ಸೆಕ್ಷನ್ 153 (ಕಾನೂನುಬಾಹಿರ ಮತ್ತು ನಿರ್ಲಕ್ಷ್ಯದಿಂದ ರೈಲ್ವೆ ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟುಮಾಡುವುದು), ರೈಲ್ವೇ ಕಾಯಿದೆಯ 154 ಮತ್ತು 175 (ಜೀವಕ್ಕೆ ಅಪಾಯವನ್ನುಂಟುಮಾಡುವುದು) ಅಡಿಯಲ್ಲಿ ಬಾಲಸೋರ್ ಜಿಆರ್ಪಿ ದಾಖಲಿಸಿದ ಎಫ್ಐಆರ್ ಅನ್ನು ಕೇಂದ್ರೀಯ ಸಂಸ್ಥೆ ವಹಿಸಿಕೊಂಡಿದೆ.
ಕೇಂದ್ರೀಯ ತನಿಖಾ ದಳವು ರೈಲ್ವೇ ಸಚಿವಾಲಯದ ಕೋರಿಕೆ, ಒಡಿಶಾ ಸರ್ಕಾರದ ಒಪ್ಪಿಗೆ ಮತ್ತು ಡಿಒಪಿಟಿ (ಭಾರತ ಸರ್ಕಾರ) ದಿಂದ ಹೆಚ್ಚಿನ ಆದೇಶಗಳ ಮೇರೆಗೆ ಪ್ರಕರಣ ದಾಖಲಿಸಿದೆ ಎಂದು ಹೇಳಿದೆ.



