ನವದೆಹಲಿ: ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ 8 ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳ ಪ್ರಕರಣದಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯೆ ನೀಡಿದ್ದು, ಇದು ಬಹಳ ಸೂಕ್ಷ್ಮ ವಿಷಯವಾಗಿದೆ ಎಂದು ಹೇಳಿದೆ. ಈ ಪ್ರಕರಣವು ಕಾನೂನು ಪ್ರಕ್ರಿಯೆಗೆ ಒಳಪಟ್ಟಿರುತ್ತದೆ. ಈಗಾಗಲೇ ಈ ಕುರಿತು ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಕಂಪನಿಯ ವಕೀಲರೊಂದಿಗೂ ಮಾತನಾಡುತ್ತಿದ್ದೇವೆ. ಅಲ್ಲದೇ ನಾವು 8 ಭಾರತೀಯರಿಗೆ ನಮ್ಮ ಕಾನೂನು ನೆರವು ನೀಡುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ಊಹಾಪೋಹಗಳನ್ನು ತಪ್ಪಿಸಿ. ಕತಾರ್ ಜೊತೆಗಿನ ಈ ಪ್ರಕರಣದ ಸಂಪೂರ್ಣ ಪ್ರಕ್ರಿಯೆ ಗೌಪ್ಯವಾಗಿರುತ್ತದೆ ಎಂದು ಹೇಳಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಈ ವಿಷಯದ ಬಗ್ಗೆ ಭಾರತವು ಕತಾರ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಮತ್ತು ಸರ್ಕಾರವು ಭಾರತೀಯ ನಾಗರಿಕರಿಗೆ ಎಲ್ಲಾ ಕಾನೂನು ಮತ್ತು ರಾಯಭಾರ ಕಚೇರಿಯ ಸಹಾಯವನ್ನು ನೀಡುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು. ಅಲ್ಲದೇ ಇದು ಸಕಾರಾತ್ಮಕ ಫಲಿತಾಂಶವನ್ನು ನೀಡುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಕತಾರ್ ನ್ಯಾಯಾಲಯದಲ್ಲಿ ಈ ಬಗ್ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಈ ವಿಷಯದಲ್ಲಿ ನಾವು ಕತಾರ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ.
ಅಕ್ಟೋಬರ್ 26 ರಂದು ಕತಾರ್ ನ್ಯಾಯಾಲಯವು 8 ಭಾರತೀಯರಿಗೆ ಮರಣದಂಡನೆ ವಿಧಿಸಿತ್ತು. ಭಾರತವು ಈ ನಿರ್ಧಾರವನ್ನು ಆಘಾತಕಾರಿ ಎಂದು ಕಳವಳ ವ್ಯಕ್ತಪಡಿಸಿದೆ ಮತ್ತು ಈ ವಿಷಯದಲ್ಲಿ ಎಲ್ಲಾ ಕಾನೂನು ಆಯ್ಕೆಗಳನ್ನು ಪರಾಮರ್ಶೆ ನಡೆಸುವುದಾಗಿ ಹೇಳಿದೆ. ಈ 8 ಭಾರತೀಯರು ಖಾಸಗಿ ಕಂಪನಿ ಅಲ್ ದಹ್ರಾದಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಆಗಸ್ಟ್‌ನಲ್ಲಿ ಬೇಹುಗಾರಿಕೆ ಪ್ರಕರಣದಲ್ಲಿ ಇವರನ್ನು ಕತಾರ್ ಅಧಿಕಾರಿಗಳು ಬಂಧಿಸಿದ್ದರು.