ಕಾರ್ಕಳ: ಕರ್ತವ್ಯಲೋಪದ ಆರೋಪದ ಹಿನ್ನೆಲೆಯಲ್ಲಿ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಜ್ಯೋತಿ. ಬಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಎಣ್ಣೆಹೊಳೆ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ.ಬಿ ಅವರು ಈ ಹಿಂದೆ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಹಾಗೂ ಬೈಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ 2019 ರಲ್ಲಿ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಅವರನ್ನು 7 ದಿನಗಳ ಕಾಲ ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಆದರೆ ಶಿಕ್ಷಣ ಇಲಾಖೆಯ ಅಮಾನತು ಶಿಕ್ಷೆಯನ್ನು ಪ್ರಶ್ನಿಸಿ ಜ್ಯೋತಿ ಅವರು ಕೆಎಟಿ ಯಲ್ಲಿ ದಾವೆ ಹೂಡಿದ್ದರು. ಬಳಿಕ ಅಮಾನತು ತೆರವುಗೊಂಡು ಅವರನ್ನು ಕಾರ್ಕಳ ಎಣ್ಣೆಹೊಳೆಯ ರಾಧಾನಾಯಕ್ ಶಾಲೆಗೆ ವರ್ಗಾವಣೆಗೊಳಿಸಲಾಗಿತ್ತು. ಆದರೆ ಜ್ಯೋತಿ ಅವರು ಎಣ್ಣೆಹೊಳೆ ಶಾಲೆಗೆ ಕರ್ತವ್ಯಕ್ಕೆ ಹಾಜರಾಗದೆ ಬೈಂದೂರಿನಲ್ಲಿ ಅವಕಾಶ ಕೊಡುವಂತೆ ಕೊರ್ಟ್ ಮೆಟ್ಟಿಲೇರಿದ್ದರು.ಆದರೆ ಎಣ್ಣೆಹೊಳೆ ಶಾಲೆಗೆ ಕರ್ತವ್ಯಕ್ಕೆ ಹಾಜರಾಗದೇ ಸುಧೀರ್ಘ ರಜೆಯಲ್ಲಿದ್ದರು.ಈ ಪ್ರಕರಣದ ಇಲಾಖಾ ತನಿಖೆಯ ಬಳಿಕ ಶಿಕ್ಷಣ ಇಲಾಖೆಯ ಆಯುಕ್ತರು ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಜ್ಯೋತಿ ಅವರನ್ನು ಸೇವೆಯಿಂದಲೇ ವಜಾಗೊಳಿಸಿ ಆದೇಶಿಸಿದ್ದರು.
ಇತ್ತ ಅಮಾನತು ಪ್ರಕರಣದ ವಾದವಿವಾದಗಳ ಬಳಿಕ ಕೆಎಟಿ ಜ್ಯೋತಿ ಅವರಿಗೆ ಎಣ್ಣೆಹೊಳೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಿತ್ತು. ಈ ಆದೇಶವನ್ನು ಉಲ್ಲಂಘಿಸಿ ಜ್ಯೋತಿ ಅವರು 481 ದಿನ ಸುಧೀರ್ಘ ಅನಧಿಕೃತ ರಜೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಆಯುಕ್ತರು ವಿಚಾರಣೆ ನಡೆಸಿ ವಜಾಗೊಳಿಸಿದ್ದರು.ಈ ಹಿಂದಿನ ಕರ್ತವ್ಯಲೋಪದ ಆರೋಪ ವಿಚಾರಣೆಯಲ್ಲಿತ್ತು. ವಿಚಾರಣೆಯಲ್ಲಿ ಜ್ಯೋತಿ ತಪ್ಪಿತಸ್ಥರೆಂದು ಸಾಬೀತಾದ ಬಳಿಕ ಅವರನ್ನು ಸೇವೆಯಿಂದ ವಜಗೊಳಿಸಿದ್ದಾರೆ ಇದೀಗ ಜ್ಯೋತಿ ಅವರು ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.