ಬೆಂಗಳೂರು,ಡಿ.26: ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ ನೀಡುವ ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ‘ಯುವನಿಧಿ’ ಯೋಜನೆಗೆ ಇಂದು (ಡಿ.26) ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಜನೆಗೆ ಚಾಲನೆ ನೀಡಲಿದ್ದಾರೆ.
ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ. ಸಮಾರಂಭದಲ್ಲಿ ಯುವನಿಧಿ ಯೋಜನೆಯ ಪೋಸ್ಟರ್ ಅನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಲೋಗೋವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಅನಾವರಣಗೊಳಿಸಲಿದ್ದಾರೆ. ಸ್ಪೀಕರ್ ಯು.ಟಿ.ಖಾದರ್, ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳುವರು.
ಯೋಜನೆಗೆ ಮುಖ್ಯಮಂತ್ರಿ ಅವರು ಚಾಲನೆ ನೀಡಿದ ಬಳಿಕ 2023-24ನೇ ಸಾಲಿನಲ್ಲಿ ಪದವಿ/ಡಿಪ್ಲೊಮಾ ಪಾಸಾಗಿಯೂ ಉದ್ಯೋಗ ದೊರೆಯದವರು ಸೇವಾ ಸಿಂಧು ಪೋರ್ಟಲ್‌ನಲ್ಲಿ ಇಂದಿನಿಂದಲೇ ನಿರುದ್ಯೋಗ ಭತ್ಯೆಗೆ ಅರ್ಜಿ ಸಲ್ಲಿಸಬಹುದು. ಜತೆಗೆ, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳ ಮೂಲಕವೂ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಜನವರಿ 12ರ ಸ್ವಾಮಿ ವಿವೇಕಾನಂದರ ಜಯಂತಿಯಂದು ಅರ್ಹ ಪದವೀಧರರಿಗೆ ಮಾಸಿಕ 3000 ರು. ಹಾಗೂ ಡಿಪ್ಲೊಮಾ ತೇರ್ಗಡೆಯಾದವರಿಗೆ ಮಾಸಿಕ 1500 ರೂ. ನಿರುದ್ಯೋಗ ಭತ್ಯೆ ನೇರ ನಗದು ವರ್ಗಾವಣೆ(ಡಿಬಿಟಿ) ಮೂಲಕ ಜಮೆಯಾಗಲಿದೆ.
ನಿರುದ್ಯೋಗ ಭತ್ಯೆ ಪಡೆಯಲು ಇರುವ ಷರತ್ತುಗಳು:
ಈ ಯೋಜನೆಗೆ ಅರ್ಜಿ ಸಲ್ಲಿಸುವವರು ಪದವಿ/ ಡಿಪ್ಲೊಮಾ ವ್ಯಾಸಂಗದ ಅವಧಿಯಲ್ಲಿ ಕರ್ನಾಟಕದಲ್ಲಿ ಕನಿಷ್ಠ 6 ವರ್ಷದವರೆಗೆ ವಾಸವಾಗಿರಬೇಕು. ಇದರ ನಡುವೆ ಸ್ವಂತ ಉದ್ಯೋಗ ಆರಂಭಿಸಿದರೆ, ಉದ್ಯೋಗ ಸಿಕ್ಕರೆ ಭತ್ಯೆ ಪಡೆಯುವಂತಿಲ್ಲ. ಈ ಯೋಜನೆಯ 4.81 ಲಕ್ಷ ಪದವೀಧರರು, 48,153 ಡಿಪ್ಲೊಮಾ ತೇರ್ಗಡೆಯಾದವರು ಸೇರಿ ಒಟ್ಟು 5.29 ಲಕ್ಷ ಮಂದಿ ನೋಂದಣಿಯಾಗುವ ನಿರೀಕ್ಷೆಯಿದೆ. ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 250 ಕೋಟಿ ರೂ, ಮುಂದಿನ ಹಣಕಾಸು ವರ್ಷದಲ್ಲಿ 1250 ಕೋಟಿ ರೂ. ಅಂದಾಜು ವೆಚ್ಚದ ನಿರೀಕ್ಷೆ ಮಾಡಲಾಗಿದೆ. ಅನರ್ಹರು ಭತ್ಯೆ ಪಡೆದರೆ ಅಷ್ಟೂ ಮೊತ್ತ ವಾಪಾಸ್ ಪಡೆಯುವ ಜತೆಗೆ ಕಾನೂನು ಕ್ರಮವೂ ಎದುರಿಸಬೇಕಾಗುತ್ತದೆ ಎಂದು ಸರ್ಕಾರ ಎಚ್ಚರಿಸಿದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
ಪದವೀಧರರು ಆಧಾರ್ ಕಾರ್ಡ್, ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪ್ರಮಾಣ ಪತ್ರ (ಪಿಡಿಸಿ),ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್, ಡಿಪ್ಲೊಮಾ ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಆಧಾರ್ ಕಾರ್ಡ್, ಪಿಯುಸಿ ಅಂಕಪಟ್ಟಿ,ಬ್ಯಾಂಕ್ ಪಾಸ್ ಬುಕ್, ಡಿಪ್ಲೊಮಾ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪ್ರಮಾಣ ಪತ್ರ. ಕರ್ನಾಟಕ ವಾಸಿಯಾಗಿರುವ ಬಗ್ಗೆ ಸೂಕ್ತ ದಾಖಲೆ ಸಲ್ಲಿಸಬೇಕು
ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ