ಕಾರ್ಕಳ: ಭಾರತೀಯ ಜನತಾ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹಾಗೂ ಅವರೊಂದಿಗಿರುವ ಕೆಲವೊಂದು ವ್ಯಕ್ತಿಗಳು ಮತದಾರರಿಗೆ ಬಾಡೂಟ ಹಾಗೂ ಹಣ ಹಂಚುತ್ತಿದ್ದಾರೆ ಎಂದು ಆರೋಪಿಸಿ ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಬುಧವಾರ ಕಾರ್ಕಳ ಚುನಾವಣಾಧಿಕಾರಿ ಮದನ್ ಮೋಹನ್ ಅವರಿಗೆ ದೂರು ನೀಡಿದರು.
ಕಾರ್ಕಳ ವಿಧಾನಸಭಾ ಕ್ಷೇತ್ರದ ಹಲವು ಕಡೆಗಳಲ್ಲಿ ಈಗಾಗಲೇ ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಹಾಗೂ ಅವರೊಂದಿಗಿರುವ ಕೆಲವು ವ್ಯಕ್ತಿಗಳು ತಮ್ಮ ಕಾರ್ಯಕರ್ತರ ಮನೆಯಲ್ಲಿ ಮಾಂಸದ ಬಾಡೂಟ ಕೊಟ್ಟಿರುವ ಬಗ್ಗೆ ಹಾಗೂ ವ್ಯಾಪಕವಾಗಿ ಹಣ ಹಂಚುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದಿದೆ. ಚುನಾವಣಾ ಅಕ್ರಮಗಳ ಕುರಿತು ಈಗಾಗಲೇ ನಮ್ಮ ಕಾರ್ಯಕರ್ತರು ತಮಗೆ ತಿಳಿಸಿದ್ದರೂ ಈ ಬಗ್ಗೆ ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿರುವುದಿಲ್ಲ.
ಪ್ರಸ್ತುತ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದ್ದು,ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ಹಾಗೂ ಅವರೊಂದಿಗಿರುವ ಕೆಲವು ವ್ಯಕ್ತಿಗಳು ಚುನಾವಣಾ ನೀತಿ, ಸಂಹಿತೆಗಳನ್ನು ಗಾಳಿಗೆ ತೂರಿ ಬಾಡೂಟ ಹಾಗೂ ಹಣ ಆಮಿಷ ಒಡ್ಡುತ್ತಿದ್ದು ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ.ಆದ್ದರಿಂದ ತಾವು ಅಕ್ರಮಗಳನ್ನು ನಡೆಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.