ಬೆಂಗಳೂರು :ಕಾಂತಾರ ಚಿತ್ರದ ವರಾಹರೂಪಂ… ಹಾಡಿನ ಬಗ್ಗೆ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡು ಈ ಚಿತ್ರದ ಹಾಡಿಗೆ ಕೃತಿಚೌರ್ಯದ ಆರೋಪ ಕೇಳಿ ಬಂದಿತ್ತು. ಈ ಕುರಿತಂತೆ ಜಿಲ್ಲಾ ನ್ಯಾಯಾಲಯ, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ನಲ್ಲಿ ಕೇಸ್‌ಗಳು ನಡೆಯುತ್ತಿದ್ದು, ಸುಪ್ರೀಂಕೋರ್ಟ್ ಈ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ. ವರಾಹರೂಪಂ.. ಹಾಡನ್ನು ತೆಗೆಯಬೇಕು ಎಂಬ ಕೇರಳ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ಕೇರಳ ಹೈಕೋರ್ಟ್ನ ನ್ಯಾಯಮೂರ್ತಿ ಎ. ಬದ್ರುದೀನ್ ಅವರು ರಿಷಬ್ ಹಾಗೂ ವಿಜಯ್‌ಗೆ ನಿರೀಕ್ಷಣಾ ಜಾಮೀನು ನೀಡಿದ್ದರು. ಕಾಪಿರೈಟ್ ಪ್ರಕರಣದಲ್ಲಿ ಸಿವಿಲ್ ಕೋರ್ಟ್ನಿಂದ ಮಧ್ಯಂತರ ಅಥವಾ ಅಂತಿಮ ಆದೇಶ ಬರುವವರೆಗೆ ಕಾಂತಾರ ಸಿನಿಮಾದಲ್ಲಿ ವರಾಹ ರೂಪಂ.. ಹಾಡನ್ನು ಬಳಕೆ ಮಾಡುವಂತಿಲ್ಲ. ಈ ಪ್ರಕರಣದ ಮರುವಿಚಾರಣೆಗೆ ಕೋರಲು ಅರ್ಜಿದಾರರಿಗೆ ಅವಕಾಶ ಇದೆ ಎಂದು ಬದ್ರುದೀನ್ ಹೇಳಿದ್ದರು. ಈಗ ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೊಸ ಆದೇಶ ನೀಡಿದೆ.
ಕೇರಳ ಹೈಕೋರ್ಟ್ ವಿಧಿಸಿದ್ದ ಷರತ್ತನ್ನು ಸುಪ್ರೀಂಕೋರ್ಟ್ ಸಡಿಲಿಸಿದೆ. ಸಿನಿಮಾ ತಂಡದವರು ಹಾಡನ್ನು ಬಳಕೆ ಮಾಡಬಹುದು. ವಿಚಾರಣೆಗೆ ಹಾಜರಾದಾಗ ನಿರ್ದೇಶಕರು ಹಾಗೂ ನಿರ್ಮಾಪಕರನ್ನು ಪೊಲೀಸರು ಪ್ರಶ್ನೆ ಕೇಳಬಹುದೇ ಹೊರತು ಅರೆಸ್ಟ್ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ.
ಕಾಂತಾರ ತಂಡದವರು ಕೃತಿಚೌರ್ಯ ಮಾಡಿದ್ದಾರೆ ಎಂದು ಕೇರಳ ಹೈಕೋರ್ಟ್ಗೆ ಅನಿಸಿದೆ. ಹಾಗೆಂದು ಈ ರೀತಿಯ ನಿಯಮಗಳನ್ನು ಹೇರಲು ಸಾಧ್ಯವಿಲ್ಲ. ಫೆಬ್ರವರಿ 12 ಮತ್ತು 13 ರಂದು ಅರ್ಜಿದಾರರು ಖುದ್ದಾಗಿ ವಿಚಾರಣೆಗೆ ಹಾಜರಾಗಬೇಕು. ಅವರನ್ನು ಬಂಧಿಸಿದ್ದರೆ ಜಾಮೀನಿನ ಮೇಲೆ ಬಿಟ್ಟು ಕಳುಹಿಸಬೇಕು. ಹಾಡನ್ನು ತೆಗೆದು ಹಾಕಬೇಕು ಎಂಬ ಆದೇಶಕ್ಕೆ ತಡೆ ನೀಡುತ್ತಿದ್ದೇವೆ ಎಂದು ಕೋರ್ಟ್ ಆದೇಶಿಸಿದೆ.