ಕಾರ್ಕಳ: ಭಾರತವು 138 ಕೋಟಿ ಭಾರತೀಯರಿಗೆ ಸೇರಿದ ದೇಶವೇ ಹೊರತು, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ ದೇಶವಲ್ಲ. ದೇಶದ ಬಲಿಷ್ಟ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಟ್ಟಿರುವುದು ಕಾಂಗ್ರೆಸ್ ಪಕ್ಷ ಎಂದು ಮಾಜಿ ಸಂಸದ, ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್. ಶಂಕರ್ ಹೇಳಿದರು.
ಅವರು ಶುಕ್ರವಾರ ಕಾರ್ಕಳದ ಬಂಡಿಮಠ ಬಸ್ ನಿಲ್ದಾಣದಲ್ಲಿ ನಡೆದ ಕಾಂಗ್ರೆಸ್ ಕರಾವಳಿ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.ಭಾರತಕ್ಕೆ ನೀಡಿದ ಸಂವಿಧಾನ ಹಾಗೂ ಸಂಸದೀಯ ವ್ಯವಸ್ಥೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಟ್ಟಿ ನೆಲೆ ಸಿಕ್ಕಿದೆ. ಪ್ರಸ್ತುತ ರಾಜಕಾರಣಿಗಳು ಕಾಂಗ್ರೆಸ್ ಪಕ್ಷವನ್ನು ಮುಕ್ತ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದಲೇ ಈ ದೇಶ ಸ್ವತಂತ್ರ ಪಡೆದು, ಅತ್ಯಂತ ಬಲಿಷ್ಟವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವುದನ್ನು ಟೀಕಿಸುವವರು ಅರ್ಥಮಾಡಿಕೊಳ್ಳಬೇಕು ಎಂದರು.
ಇದೀಗ ಚುನಾವಣೆ ಸಮೀಪಿಸುತ್ತಿದ್ದು, ಕಾಂಗ್ರೆಸ್ ಪಕ್ಷವು ವಿವಿಧ ಯೋಜನೆಗಳನ್ನು ಪ್ರಕಟಿಸಿದೆ. ಆ ಯೋಜನೆಗಳ ಅನುಷ್ಟಾನಕ್ಕೆ ಅನುದಾನ ಎಲ್ಲಿಂದ ಎಂಬ ಪ್ರಶ್ನೆಗಳನ್ನು ಇತರರು ಕೇಳುತ್ತಿದ್ದಾರೆ. ಈ ರಾಜ್ಯದ ಬಜೆಟ್ 3.15 ಲಕ್ಷ ಕೋಟಿ ರೂ. ಆಗಿದೆ. ಅದರ ಪೈಕಿ 80 ಸಾವಿರದಿಂದ 1 ಲಕ್ಷ ಕೋಟಿ ರೂ. ಸೋರಿಕೆಯಾಗುತ್ತಿದೆ. ಪ್ರಸ್ತುತ ಕಾಂಗ್ರೆಸ್ ಘೋಷಣೆಯ ಈ ಯೋಜನೆಗಳಿಗೆ 25ರಿಂದ 30 ಸಾವಿರ ಕೋಟಿ ರೂ. ಸಾಕಾಗುತ್ತದೆ. ಭ್ರಷ್ಟಾಚಾರದಿಂದ ಸೋರಿಕೆಯನ್ನು ತಡೆದು ಬಡವರಿಗೆ ಯೋಜನೆಗಳನ್ನು ರೂಪಿಸುವ ವ್ಯವಸ್ಥೆಯನ್ನು ಕಾಂಗ್ರೆಸ್ ಮಾಡಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಪ್ರತೀ ಮನೆಯ ಯಜಮಾನಿಗೆ 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆ ಹಾಗೂ ಪ್ರತಿಯೊಬ್ಬ ವ್ಯಕ್ತಿಗೂ 10ಕೆ.ಜಿ. ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಘೋಷಿಸಿದೆ ಎಂದರು.
ವೇದಿಕೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಮಮತಾ ಗಟ್ಟಿ, ಜಿಲ್ಲಾ ಸಂಯೋಜಕ ರಾಜು ಪೂಜಾರಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಯೋಗೀಶ್ ನಯನ್ ಇನ್ನಾ, ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಗಳಾದ ನೀರೆ ಕೃಷ್ಣ ಶೆಟ್ಟಿ, ಮಂಜುನಾಥ ಪೂಜಾರಿ, ಡಿ.ಆರ್.ರಾಜು, ವಕ್ತಾರ ಶುಭದ ರಾವ್, ಇಂಟಕ್ ಅಧ್ಯಕ್ಷ ಸುಧಾಕರ್ ಶೆಟ್ಟಿ, ನಗರ ಅಧ್ಯಕ್ಷ ಮಧುರಾಜ್ ಶೆಟ್ಟಿ, ಮಹಿಳಾ ಅಧ್ಯಕ್ಷೆ ಅನಿತಾ ಡಿಸೋಜ, ನಗರ ಮಹಿಳಾ ಅಧ್ಯಕ್ಷೆ ಕಾಂತಿ ಶೆಟ್ಟಿ, ಕಾಂಗ್ರೆಸ್ ಪ್ರಮುಖರಾದ ಅಣ್ಣಪ್ಪ ನಕ್ರೆ, ಕ್ಸೇವಿಯರ್, ತಾರನಾಥ ಶೆಟ್ಟಿ, ಭೋಜ ಶೆಟ್ಟಿ, ಜೋಯ್ಸ್ ಟೆಲ್ಲಿಸ್, ಸದಾನಂದ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.