ಕಾರ್ಕಳ : ಬಿಜೆಪಿ ಸರಕಾರ ತನ್ನ ಆಡಳಿತ ಅವಧಿಯಲ್ಲಿ ಗೋ ಹತ್ಯೆ ನಿಷೇಧ ಕಾಯಿದೆಯನ್ನು ಜಾರಿಗೆ ತಂದಿತ್ತು. ಆದರೆ, ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಹತ್ತೇ ದಿನದಲ್ಲಿ ಯಾರದೋ ಒಲೈಕೆಗಾಗಿ ಗೋ ಹತ್ಯೆ ನಿಷೇಧ ಕಾಯಿದೆಯನ್ನು ವಾಪಾಸ್ ಪಡೆಯುವ ಹೇಳಿಕೆ ನೀಡಿದೆ. ಗೋವಿಗೆ ರಕ್ಷಣೆ ಇಲ್ಲ ಎಂದು ಹೇಳಿಕೆ ನೀಡುತ್ತಾ ಸ್ಥಳೀಯ ಶಾಸಕರ ವಿರುದ್ಧ ಮಾತಾನಾಡುತ್ತಿದ್ದ ಕಾರ್ಕಳದ ಕಾಂಗ್ರೆಸ್ಸಿಗರು ಈಗ ತಮ್ಮ ನಾಯಕರ ನಿಲುವಿನ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಸವಾಲು ಹಾಕಿದ್ದಾರೆ.

ಕಾರ್ಕಳ ಕಾಂಗ್ರೆಸ್ನಲ್ಲಿ ದ್ವಂದ್ವ ನಿಲುವಿದ್ದು, ಸುಳ್ಳಿನ ಮುಖವಾಡ ಹಾಕಿಕೊಂಡಿದ್ದಾರೆ. ಇವರು ತಮ್ಮ ನಾಯಕರ ಗೋ ಹತ್ಯೆ ನಿಷೇಧ ಕಾಯಿದೆಯನ್ನು ವಾಪಾಸ್ ಪಡೆದುಕೊಳ್ಳುವ ಹೇಳಿಕೆ ಬಗ್ಗೆ ಸ್ಪಷ್ಟತೆಯನ್ನು ನೀಡಬೇಕು. ರಾಜ್ಯ ಕಾಂಗ್ರೆಸ್ ನಾಯಕರು ಗೋ ಹತ್ಯೆ ನಿಷೇಧ ಕಾಯಿದೆಯನ್ನು ವಾಪಾಸ್ ಪಡೆಯುವ ಹೇಳಿಕೆಯನ್ನು ನೀಡುತ್ತಾ, ಗೋ ಹತ್ಯೆ ಏಕೆ ಮಾಡಬಾರದೆಂದು ಉಡಾಫೆಯಾಗಿ ಮಾತಾನಾಡುತ್ತಿದ್ದಾರೆ. ಆದರೆ, ಇತ್ತ ಕಾರ್ಕಳದಲ್ಲಿ ಕಾಂಗ್ರೆಸ್ ನಾಯಕರು ಗೋ ಪೂಜೆ ಮಾಡುವ ಮೂಲಕ ನಾವೂ ಹಿಂದೂ ಪರ, ಹಿಂದೂ ನಾಯಕರು ಎಂದು ಬಿಂಬಿಸುವ ನಾಟಕವಾಡುತ್ತಿದ್ದಾರೆ ಎಂದು ಕುಟುಕಿದ್ದಾರೆ.

ಕಾರ್ಕಳದಲ್ಲಿ ಗೋವಿಗೆ ರಕ್ಷಣೆ ಇಲ್ಲ ಎಂದು ಶಾಸಕ ಸುನಿಲ್ ಕುಮಾರ್ ವಿರುದ್ಧ ಸುಳ್ಳು ಅಪಾದನೆ ಮಾಡುತ್ತಾ, ಪೊಲೀಸ್ ಇಲಾಖೆಯವರನ್ನು ಸುಮ್ಮನೆ ತರಾಟೆಗೆ ತೆಗೆದುಕೊಳ್ಳುತ್ತಿದ್ದವರು. ಈಗ ಮಾತೆಯಂತೆ ಆರಾಧಿಸುವ ಗೋವಿನ ಹತ್ಯೆಗೆ ಅವಕಾಶ ಮಾಡಿಕೊಡುತ್ತಿರುವ ಕಾಂಗ್ರೆಸ್ಸಿಗರು ತಮ್ಮ ನಾಯಕರ ಹಿಂದೂ ವಿರೋಧಿ ನೀತಿಯ ಬಗ್ಗೆ ಕಾರ್ಕಳದ ಜನತೆಗೆ ಉತ್ತರಿಸಬೇಕು ಎಂದು ಸವಾಲು ಹಾಕಿದರು.



