ಕಾರ್ಕಳ: ಕಾಂಗ್ರೆಸ್ ಜತೆ ಸೇರಿಕೊಂಡು ಹಣಪಡೆದು ಬಿಜೆಪಿಯ ವಿರುದ್ಧ ಕಾರ್ಕಳದಲ್ಲಿ ಸ್ಪರ್ಧಿಸಿ ಸೋತಿರುವ ಪ್ರಮೋದ್ ಮುತಾಲಿಕ್ ಓರ್ವ ಡೀಲ್ ಮಾಸ್ಟರ್, ಹಣಕ್ಕಾಗಿ ಅವರು ಏನು ಬೇಕಾದರೂ ಮಾಡುವ ಮನಸ್ಥಿತಿಯುಳ್ಳವರು ಎಂದು ಕಾರ್ಕಳದ ಬಿಜೆಪಿ ನೂತನ ಶಾಸಕ ಸುನಿಲ್ ಕುಮಾರ್ ಮುತಾಲಿಕ್ ವಿರುದ್ಧ ತೀವೃ ವಾಗ್ದಾಳಿ ನಡೆಸಿದರು.

ಪ್ರಮೋದ್ ಮುತಾಲಿಕ್ ಅವರ ಟೈಗರ್ ಗ್ಯಾಂಗ್ ಹಣಕ್ಕಾಗಿ ಉತ್ತರ ಕರ್ನಾಟಕದಲ್ಲಿ ಹಿಂದೂಗಳ ಹತ್ಯೆ ಮಾಡಿದೆ, ಹತ್ಯೆಯ ಟೈಗರ್ ಗ್ಯಾಂಗ್ ಇಂದಿಗೂ ಗುಲ್ಬರ್ಗ ಜೈಲಿನಲ್ಲಿದ್ದಾರೆ ನೀವು ಯಾಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು. ಚುನಾವಣೆ ನೆಪದಲ್ಲಿ ಎಷ್ಟು ಹಣ ವಸೂಲಿ ಮಾಡಿದ್ದೀರಿ ಎಂದು ಗೊತ್ತಿದೆ ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ನೀಡುತ್ತೇನೆ ಎಂದರು.

ಅವರು ಕಾರ್ಕಳ ಬಿಜೆಪಿ ವತಿಯಿಂದ ಭಾನುವಾರ ಕಾರ್ಯಕರ್ತರಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಹಾಗೂ ಪ್ರಮೋದ್ ಮುತಾಲಿಕ್ ವಿರುದ್ಧ ಸುನಿಲ್ ಕುಮಾರ್ ತನ್ನ 20 ನಿಮಿಷಗಳ ಭಾಷಣದಲ್ಲಿ ಆರೋಪಗಳ ಸುರಿಮಳೆಯನ್ನೇ ಸುರಿಸಿದರು ಮಾತ್ರವಲ್ಲದೇ ತಾನು ನಡೆದುಬಂದು ರಾಜಕೀಯದ ಹಾದಿ, ಜತೆಗೆ ಸಂಘಟನೆ, ಅಭಿವೃದ್ದಿಯ ಕುರಿತು ಅತ್ಯಂತ ಸ್ಥೂಲವಾಗಿ ಸಭಿಕರ ಮುಂದೆ ಬಿಚ್ಚಿಟ್ಟರು.
ರಾಜ್ಯದಲ್ಲಿ ಬಿಜೆಪಿ 65 ಸ್ಥಾನಗಳನ್ನು ಪಡೆದಿದ್ದು ಈ ಕುರಿತು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಇದರ ಜತೆಗೆ ಮುಂದಿನ ಲೋಕಸಭಾ ಚುನಾವಣೆಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದರು. ಈ ಬಾರಿಯ ಚುನಾವಣೆಯಲ್ಲಿ ನಾವು ಸಾಕಷ್ಟು ವಿಚಾರಗಳನ್ನು ಕಲಿಯಬೇಕಾಯಿತು ಎನ್ನುವ ಮೂಲಕ ಪಕ್ಷದೊಳಗಿನ ಹಿತಶತ್ರುಗಳ ಕುರಿತು ಉಲ್ಲೇಖಿಸಿದರು. ಕೇವಲ ಅಭಿವೃದ್ದಿ ಮಾಡಿದರೆ ಸಾಲದು ಜತೆಗೆ ರಾಜಕಾರಣವನ್ನು ಮಾಡಬೇಕು ಎಂದು ಈ ಬಾರಿಯ ಚುನಾವಣೆ ಕಲಿಸಿಕೊಟ್ಟಿದೆ.ರಾಜಕೀಯದ ಚಿಲ್ಲರೆ ಅಪಪ್ರಚಾರಗಳಿಗೆ ಬೆಲೆ ಕೊಟ್ಟಿಲ್ಲ,ಕೈಗೆ ಬಳೆ ತೊಟ್ಟಿಲ್ಲ,ಸಂಘಟನೆ ಹೇಗೆ ಕಟ್ಟಬೇಕು, ವಿರೋಧಿಗಳಿಗೆ ಹೇಗೆ ಎದುರಿಸಬೇಕೆಂದು ಗೊತ್ತಿದೆ ಎಂದು ಮಾತಿನ ಮೂಲಕ ಸುನಿಲ್ ಕುಮಾರ್ ಎಚ್ಚರಿಸಿದರು.
ಈ ಬಾರಿಯ ಕಾಂಗ್ರೆಸ್ ಚುನಾವಣಾ ಪ್ರಚಾರ ಭಾಷಣದಲ್ಲಿ ಓರ್ವ ವ್ಯಕ್ತಿ ನನ್ನ ಕುರಿತು ತೇಜೋವಧೆ ಮಾಡಿದ್ದು ಆತನ ವಿರುದ್ಧ ಮಾನನಷ್ಟ ಕೇಸ್ ಹಾಕಿ ಎಂದು ಕಾರ್ಯಕರ್ತರು ಹೇಳಿದ್ದರು, ಆದರೆ ಆ ವ್ಯಕ್ತಿಗೆ ಮಾನವೇ ಇಲ್ಲದಿದ್ದರೆ ಮಾನನಷ್ಟ ಕೇಸ್ ಹೇಗೆ ಹಾಕುವುದು ಎಂದು ಖಾಸಗಿ ಸುದ್ದಿವಾಹಿನಿಯ ಮುಖ್ಯಸ್ಥನ ವಿರುದ್ಧ ಗುಡುಗಿದರು. ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಮತದಾರನ ತೀರ್ಪನ್ನು ಗೌರವಿಸಬೇಕಿತ್ತು ಆದರೆ ಮತದಾರರು ಹಣ ಹೆಂಡಕ್ಕೆ ಮತ ಮಾರಾಟ ಮಾಡಿದ್ದಾರೆ ಎಂದು ಮತದಾರರನ್ನು ಅವಮಾನಿಸಿದೆ.ಚುನಾವಣೆಯಲ್ಲಿ ಟೀಕೆಗಳು ಸಹಜ ಆದರೆ ನನ್ನ ಹಾಗೂ ಕುಟುಂಬದ ವಿರುದ್ಧ ಕೆಟ್ಟದಾಗಿ ಟೀಕೆ ಮಾಡಿದರೂ ತಂದೆತಾಯಿ ಕಲಿಸಿದ ಸಂಸ್ಕೃತಿಯಿAದ ಯಾರಿಗೂ ಕೆಟ್ಟದಾಗಿ ಟೀಕೆ ಮಾಡಿಲ್ಲ. ಅಭಿವೃದ್ದಿಕಾರ್ಯಗಳು ಶಾಸಕನ ಕರ್ತವ್ಯ ಅದನ್ನು ಮಾಡಬೇಕೆನ್ನುವ ಕಾಂಗ್ರೆಸ್ಸಿಗರು 30 ವರ್ಷಗಳಿಂದ ಯಾಕೆ ಅಭಿವೃದ್ಧಿ ಮಾಡಿಲ್ಲ ಎಂದರು.

ಕಳೆದ 4 ತಿಂಗಳಿನಿAದ ವಿರೋಧಿಗಳು ಮಾಡಿದ ನಿರಂತರ ಸುಳ್ಳು ಆರೋಪಗಳನ್ನು ಮಾಡಿದರು. ಅಭಿವೃದ್ಧಿಯ ವಿಚಾರದಲ್ಲಿ ಕಾರ್ಕಳ ಯಾವ ರೀತಿಯಲ್ಲಿ ಕಡಿಮೆ ಮಾಡಿದ್ದೇನೆ, ಜನರು ಅಭಿವೃದ್ಧಿ ವಿಚಾರದಲ್ಲಿ ಚರ್ಚೆಯನ್ನೇ ಮಾಡದವರು ಕಾರ್ಕಳದಲ್ಲಿ ಅಪಪ್ರಚಾರದ ಮೂಲಕ ಜನರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.ಕಾರ್ಕಳದಲ್ಲಿ ವಿರೋಧಿಗಳು ಸಭ್ಯತೆಮೀರಿ ನಡೆದುಕೊಂಡರೆ ಸಹಿಸಲು ಸಾಧ್ಯವಿಲ್ಲ.ಕಾರ್ಕಳದಲ್ಲಿ ಅಭಿವೃದ್ದಿಗೆ ಹಿನ್ನಡೆಯಾಗುವುದಿಲ್ಲ,ಕಾಂಗ್ರೆಸ್ ಜನವಿರೋಧಿ ನಿಲುವುಗಳ ವಿರುದ್ಧ ವಿಧಾನಸಭೆಯಲ್ಲಿ ಸಮರ್ಥವಾಗಿ ಧ್ವನಿ ಎತ್ತುವ ಮೂಲಕ ರಾಜ್ಯದ ಹಿತಕಾಯಲು ಬದ್ದನಿದ್ದೇನೆ ಎಂದು ಸುನಿಲ್ ಕುಮಾರ್ ಹೇಳಿದರು.
ಅನಂತಶಯನ ವೃತ್ತದಿಂದ ಕಾರ್ಕಳ ಬಂಡಿಮಠ ಬಸ್ ನಿಲ್ದಾಣದವರೆಗೆ ಸುನಿಲ್ ಕುಮಾರ್ ಅವರು ಭಾರೀ ಸಂಖ್ಯೆಯಲ್ಲಿ ದ್ದ ಕಾರ್ಯಕರ್ತರ ಜತೆಗೆ ಮೆರವಣಿಗೆಯಲ್ಲಿ ಸಾಗಿಬಂದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾರ್ಕಳ ಬಿಜೆಪಿ ಅಧ್ಯಕ್ಷ ಮಹಾವೀರ ಹೆಗ್ಡೆ, ಬಿಜೆಪಿ ಹಿರಿಯ ಮುಖಂಡ ಬೋಳ ಪ್ರಭಾಕರ ಕಾಮತ್, ಎಂ.ಕೆ ವಿಜಯ ಕುಮಾರ್, ಮಣಿರಾಜ ಶೆಟ್ಟಿ, ಕೆ.ಪಿ ಶೆಣೈ, ಬೆಳುವಾಯಿ ಸದಾನಂದ ಶೆಟ್ಟಿ, ರವೀಂದ್ರ ಶೆಟ್ಟಿ ಬಜಗೋಳಿ, ರಾಮಚಂದ್ರ ಆಚಾರ್ಯ ಉಪಸ್ಥಿತರಿದ್ದರು.
ರವೀಂದ್ರ ಮೊಯಿಲಿ ಸ್ವಾಗತಿಸಿದರು. ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

