ಕಾರ್ಕಳ: ಈ ಸಾಲಿನ ಬಿರುಬೇಸಿಗೆ ರೈತರನ್ನು ಕಂಗೆಡಿಸುತ್ತಿದ್ದು, ಹೆಚ್ಚುತ್ತಿರುವ ಬಿಸಿಲಿನ ಝಳ, ಹೆಚ್ಚಿದ ಉಷ್ಣಾಂಶ, ನೀರಿನ ಕೊರತೆ ಅಡಿಕೆ ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದೆ. ಇದರೊಂದಿಗೆ ಅನೇಕ ಅಡಿಕೆ ತೋಟಗಳಲ್ಲಿ ಜೇಡ ನುಸಿ ತೀವ್ರ ಬಾಧೆ ಉಂಟು ಮಾಡುತ್ತಿದ್ದು ಹೆಚ್ಚಿನ ರೈತರು ಇದರ ಗುಣಲಕ್ಷಣಗಳನ್ನು ಬಿಸಿಲಿನ ಪರಿಣಾಮದಿಂದಾದ ಲಕ್ಷಣಗಳೆಂದು ತಪ್ಪು ಗ್ರಹಿಕೆಯಲ್ಲಿ ಇರುವ ಹಿನ್ನೆಲೆಯಲ್ಲಿ ಈ ನುಸಿ ಭಾದೆ ಹೆಚ್ಚಿನ ತೋಟಗಳಿಗೆ ಹರಡಲು ಕಾರಣವಾಗಿದೆ.
ಅಡಿಕೆಗೆ ಪಶ್ಚಿಮದ ಬಿಸಿಲು ನಿರಂತರವಾಗಿ ಬಿದ್ದಾಗ ಎಲೆಗಳಲ್ಲಿ ಕಂಡು ಬರುವ ಲಕ್ಷಣಗಳಾದ ಹಳದಿಯಾಗುವಿಕೆ ಹಾಗೂ ಎಲೆ ಸುಡುವಿಕೆ ಲಕ್ಷಣಗಳು ಈ ಜೇಡ ನುಸಿ ಭಾಷೆಯಲ್ಲೂ ಕಂಡು ಬರುವುದರಿಂದ ರೈತರನ್ನು ತಪ್ಪು ಗ್ರಹಿಕೆಗೆ ದೂಡಿದೆ.
ಅಡಿಕೆ ಬೆಳೆಗೆ ಪ್ರಮುಖವಾಗಿ ಕೆಂಪು ಹಾಗೂ ಬಿಳಿ ಎಂಬ ಎರಡು ಜಾತಿಯ ಜೇಡ ನುಸಿ (Spider mite)ಗಳು ಬಾಧೆ ಉಂಟು ಮಾಡುತ್ತಿದ್ದು ಇವುಗಳು ಸಾಮಾನ್ಯವಾಗಿ ಮಾರ್ಚ್‌ನಿಂದ ಮೇ ತಿಂಗಳವರೆಗೆ ಕಂಡು ಬರುತ್ತವೆ. ಚಿಕ್ಕ ಸಸಿಗಳು ಹೆಚ್ಚು ಭಾದೆಗೆ ಒಳಪಟ್ಟರೂ ಸಹ 15-20 ವರ್ಷದ ಮರಗಳಲ್ಲೂ ಇದರ ಭಾದೆ ಕಂಡು ಬರುತ್ತಿದೆ. ಈ ಜೀವಿಯ ಮರಿ ಹಾಗೂ ಪ್ರೌಡ ನುಸಿಗಳು ಗರಿಗಳ ತಳಭಾಗದಲ್ಲಿ ಕುಳಿತು ರಸ ಹೀರುವುದರಿಂದ ಸಣ್ಣ ಹಳದಿ ಚುಕ್ಕೆಗಳು ಕಾಣಿಸಿಕೊಂಡು ತರುವಾಯ ಎಲೆ ಹಳದಿಯಾಗಿ ಸುಟ್ಟ ಲಕ್ಷಣ ಕಾಣಿಸುತ್ತದೆ. ಇವುಗಳು ಅತೀ ಚಿಕ್ಕ ಮೈಟ್ ಜಾತಿಗೆ ಸೇರಿದ ಜೀವಿಗಳಾಗಿದ್ದು, ತೀಕ್ಷ್ಮವಾಗಿ ನೋಡಿದಲ್ಲಿ ಬರಿಗಣ್ಣಿನಿಂದ ಇವುಗಳ ಚಲನವಲನ ಗಮನಿಸಬಹುದಾಗಿದೆ. ಎಲೆಗಳ ತಳಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಜೇಡ ಬಲೆ ಲಕ್ಷಣಗಳಿದ್ದು, ಗರಿಯ ತಳಭಾಗವನ್ನು ಬೆರಳಿನಿಂದ ಉಜ್ಜಿದಲ್ಲಿ ಕೆಂಪು ನುಸಿ ಭಾದೆ ಇದ್ದಲ್ಲಿ ಕುಂಕುಮ ರೀತಿಯ ಪುಡಿ ಬೆರಳಿಗೆ ಅಂಟಿಕೊಳ್ಳುವುದಲ್ಲದೆ ಬಿಳಿ ನುಸಿ ಬಾಧೆಗಳಲ್ಲಿ ಜೇಡ ಬಲೆ ಬೆರಳಿಗೆ ಅಂಟಿಕೊಳ್ಳತ್ತದೆ
ಈ ಜೇಡ ನುಸಿಗಳ ನಿಯಂತ್ರಣಕ್ಕೆ ರೈತರು ಪ್ರಮುಖವಾಗಿ ಸಾಕಷ್ಟು ನೀರಾವರಿ ಸೌಲಭ್ಯ ಒದಗಿಸುವುದು, ಹೆಚ್ಚು ಭಾದೆಗೆ ಒಳಗಾದ ಗರಿಗಳನ್ನು ಕತ್ತರಿಸುವುದರೊಂದಿಗೆ ಕೀಟ ನಾಶಕಗಳ ಸಿಂಪರಣೆ ಕೈಗೊಳ್ಳಬಹುದಾಗಿದೆ. ಭಾದೆಯ ತೀವ್ರತೆ ಕಡಿಮೆ ಇರುವ ತೋಟಗಳಲ್ಲಿ ಬೇವಿನ ಎಣ್ಣೆಯನ್ನು 15 ದಿನಗಳ ಅಂತರದಲ್ಲಿ ಸಿಂಪಡಿಸಬಹುದು. ತೀವ್ರಭಾದಿತ ತೋಟಗಳಲ್ಲಿ ಇಥಿಯಾನ್ (Ethion) ಅಥವಾ ಪ್ರೋಪಾರ್‌ಗೈಟ್ (Propargite) ಅಥವಾ ಸ್ಟ್ರೋಮೆಸಿಫೆನ್ (Spiromesifen) ಔಷಧಿಗಳನ್ನು 2ml/ ಲೀಟರ್ ನೀರಿಗೆ ಬೆರೆಸಿ ಗರಿಗಳ ತಳಭಾಗಕ್ಕೆ ಸಿಂಪಡಿಸಬೇಕು. ಅವಶ್ಯವಿದ್ದಲ್ಲಿ 15 ದಿನಗಳ ಅಂತರದಲ್ಲಿ ಮತ್ತೊಮ್ಮೆ ಸಿಂಪರಣೆ ಕೈಗೊಳ್ಳಬಹುದಾಗಿದೆ ಎಂದು ಕಾರ್ಕಳ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ ಬಿ.ವಿ ತಿಳಿಸಿದ್ದಾರೆ.