ಕಾರ್ಕಳ :ಚರಿತ್ರೆ ಎನ್ನುವುದು ಕೇವಲ ಕಾಲ ಮತ್ತು ಘಟನೆಗಳ ಮೊತ್ತವಷ್ಟೇ ಆಗಿರದೆ ಮೌಖಿಕ ಸಾಹಿತ್ಯ ಮತ್ತು ಭೌತಿಕ ಸಾಮಾಗ್ರಿಗಳು ಕೂಡಾ ಚರಿತ್ರೆಯ ಭಾಗಗಳೇ ಆಗಿವೆ. ಮನುಷ್ಯ ನಿರ್ಮಿತ ಈ ಭೌತಿಕ ವಸ್ತುಗಳೆಲ್ಲವೂ ಗತಕಾಲದ ಜೀವನಕ್ರಮ ಮತ್ತು ಸಂಸ್ಕೃತಿಯನ್ನು ನಮಗೆ ಪರಿಚಯಿಸಿದರೆ, ಬದಲಾದ ಇಂದಿನ ಜೀವನಶೈಲಿ ಹಾಗೂ ಮುಂದೆ ಎದುರಾಗಲಿರುವ ಆಪತ್ತಿನ ಬಗ್ಗೆಯೂ ಸೂಚ್ಯವಾಗಿ ಅವು ನಮಗೆ ತಿಳಿಸಿಕೊಡುತ್ತವೆ ಎಂದು ಖ್ಯಾತ ಇತಿಹಾಸ ತಜ್ಞ ಹಾಗೂ ಬಂಟ್ವಾಳದ ತುಳು ಬದುಕು ವಸ್ತುಸಂಗ್ರಹಾಲಯ ಮತ್ತು ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ನಿರ್ದೇಶಕರೂ ಆಗಿರುವ ಪ್ರೊ. ತುಕಾರಾಂ ಪೂಜಾರಿ ಹೇಳಿದರು.
ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಮತ್ತು ಕನ್ನಡ ಸಂಘ ಕಾಂತಾವರ ಇವರ ಜಂಟಿ ಸಹಯೋಗದೊಂದಿಗೆ ಕಾರ್ಕಳದ ಸರಕಾರಿ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ನಡೆದ ಅರಿವು ತಿಳಿವು ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಭೌತಿಕ ಶೋಧ (ವಸ್ತುವಿನ ಮುಖಾಂತರ ಚರಿತ್ರೆ) ಎಂಬ ವಿಷಯದ ಕುರಿತು ಮಾತನಾಡಿದರು.
ಪ್ರತಿಯೊಂದು ಭೌತಿಕ ವಸ್ತುವಿನ ಹಿಂದೆಯೂ ಒಂದೊAದು ಚರಿತ್ರೆಯಿದ್ದು ಇವೆಲ್ಲವೂ ಒಂದು ಕಾಲದ ತುಳುನಾಡಿನ ಸಾಮಾಜಿಕ ವ್ಯವಸ್ಥೆಯ ಪರಿಚಯವನ್ನು ಮಾಡಿಕೊಡುತ್ತವೆ. ನಮ್ಮ ಹಿರಿಯರು ಬೆಳೆದು ಬಂದ ಬದುಕಿನ ಕ್ರಮವನ್ನು ಇಂದು ಅನೇಕ ಕಾರಣಗಳಿಂದಾಗಿ ಉಳಿಸಿಕೊಳ್ಳಲಾಗದಿದ್ದರೂ ಆ ಭೌತಿಕ ವಸ್ತುಗಳನ್ನು ಮುಂದಿನ ಪೀಳಿಗೆಯ ನೆನಪಿಗಾಗಿಯೂ ಕಾಪಿಡಬೇಕಾಗಿದೆ. ಇತಿಹಾಸ ಪ್ರಜ್ಞೆಯನ್ನು ಉಳಿಸಿಕೊಳ್ಳುವುದಕ್ಕೆ ಮತ್ತು ಅವುಗಳಿಂದ ನಾವು ಅನೇಕ ಪಾಠಗಳನ್ನೂ ಕಲಿಯಬೇಕಾಗಿರುವುದರಿಂದ ಅವುಗಳ ರಕ್ಷಣೆಯೂ ಮಹತ್ವದ ಸಂಗತಿಯಾಗಿದೆ ಎಂದರು.
ಅ.ಭಾ.ಸಾ.ಪ. ತಾಲೂಕು ಘಟಕದ ಗೌರವಾಧ್ಯಕ್ಷರಾದ ನಿತ್ಯಾನಂದ ಪೈ, ಉಪಾಧ್ಯಕ್ಷರಾದ ಏರ್ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್, ಡಾ.ನಾ.ಮೊಗಸಾಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೀಣಾ ರಾಜೇಶ್ ಅತಿಥಿಗಳನ್ನು ಪರಿಚಯಿಸಿದರು. ಸದಾನಂದ ನಾರಾವಿ ಸ್ವಾಗತಿಸಿ, ಅ.ಭಾ.ಸಾ.ಪ ತಾಲೂಕು ಅಧ್ಯಕ್ಷರಾದ ಮಿತ್ರಪ್ರಭಾ ಹೆಗ್ಡೆ ವಂದಿಸಿದರು.ಡಾ. ಸುಮತಿ ಪಿ. ಕಾರ್ಯಕ್ರಮ ನಿರೂಪಿಸಿದರು.




