Share this news

ಕಾರ್ಕಳ: ಕಾರ್ಕಳದ ಜನರನ್ನು ಸೆಳೆಯಲು ಸರ್ಕಾರದ ಅನುದಾನ, ಉದ್ಯಮಿಗಳಿಂದ ಹಣಪಡೆದು ಕಾರ್ಕಳ ಉತ್ಸವ ಮಾಡಿ ಏನು ಉಪಯೋಗವಾಗಿದೆ ಎಂದು ಪ್ರಶ್ನಿಸಿದ ಅವರು, ಕಾರ್ಕಳದ ಯುವಕರಿಗೆ ಕಾರ್ಕಳದಲ್ಲೇ ಉದ್ಯೋಗ ಸೃಷ್ಟಿಸುವುದೇ ನಿಜವಾದ ಕಾರ್ಕಳ ಉತ್ಸವ ಎಂದು ನ್ಯಾಯವಾದಿ ಸುಧೀರ್ ಮರೋಳಿ ಹೇಳಿದರು.

ಅವರು ಕಾರ್ಕಳ ಮಂಜುನಾಥ ಪೈ ಸಭಾಂಗಣದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು.

ಹಿಂದೂ ಕಾರ್ಯಕರ್ತರ ದುಡಿಯುವ ಕೈಗಳಿಗೆ ಉದ್ಯೋಗ ಕೊಡುವುದರ ಬದಲು ಕತ್ತಿ, ತಲವಾರು ಕೊಟ್ಟ ಪರಿಣಾಮ ಸುಳ್ಯದಲ್ಲಿ ಸುನಿಲ್ ಕುಮಾರ್ ಹಾಗೂ ನಳಿನ್ ಕುಮಾರ್ ಹಿಂದೂ ಕಾರ್ಯಕರ್ತರ ವಿರೋಧ ಎದುರಿಸುವಂತಾಯಿತು ಎಂದರು.

ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿಯವರು ಬಿಜೆಪಿ ಸರ್ಕಾರದ ಫಲಾನುಭವಿ ಎನ್ನುವ ಸುನಿಲ್ ಕುಮಾರ್ ಅವರಿಗೆ ಬಿಜೆಪಿ ಸರ್ಕಾರದಿಂದ ಉದಯ ಶೆಟ್ಟಿ ಮುನಿಯಾಲು ಅವರಿಗೆ 38 ಕೋಟಿ ಬಿಲ್ ಪಾವತಿಯಾಗಬೇಕಿದೆ ಎನ್ನುವುದು ನೆನಪಿರಲಿ ಎಂದು ತಿರುಗೇಟು ನೀಡಿದರು.


ಚಿಕಮಗಳೂರಿನ ಆಲ್ದೂರಿನಿಂದ ಜುಬ್ಬಾ ಪೈಜಾಮಿನಲ್ಲಿ ಬಂದ ಬಿಜೆಪಿ ಅಭ್ಯರ್ಥಿ ಇವತ್ತು ಕೋಟ್ಯಂತರ ರೂಪಾಯಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಅವರ ಗುರು ಪ್ರಮೋದ್ ಮುತಾಲಿಕ್ ಪಟ್ಟಿ ಬಿಡುಗಡೆ ಮಾಡಿದ್ದಾರೆ.ನಿಮ್ಮ ಆಸ್ತಿ ಗಳಿಕೆಯ ರಹಸ್ಯವನ್ನು ನಿಮ್ಮ ಪಕ್ಷದ ಕಾರ್ಯಕರ್ತರಿಗೂ ತಿಳಿಸಿ ಅವರೂ‌ ಉದ್ದಾರವಾಗಿ ಸ್ವರ್ಣ ಕಾರ್ಕಳದ ಭಾಗವಾಗಲಿ ಎಂದು ಸುಧೀರ್ ಮರೋಳಿ‌ ವ್ಯಂಗ್ಯವಾಡಿದರು.

ಕೇಂದ್ರ ಸರ್ಕಾರ ದಕ್ಷಿಣಕನ್ನಡ ಜಿಲ್ಲೆಯ ಸ್ವಾಭಿಮಾನದ ಸಂಕೇತವಾಗಿದ್ದ ವಿಜಯಾ ಬ್ಯಾಂಕನ್ನು ನಷ್ಟದ ಸುಳಿಯಲ್ಲಿದ್ದ ಬ್ಯಾಂಕ್ ಆಫ್ ಬರೋಡ ಜತೆ ವಿಲೀನಗೊಳಿಸಿ ರೈತರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದರು.


ಬಿ.ಕೆ ಹರಿಪ್ರಸಾದ್ ಮಾತನಾಡಿ,ಬ್ರಿಟಿಷರ ಜತೆ ಒಳಒಪ್ಪಂದ ಮಾಡಿಕೊಂಡ ಜನಸಂಘದವರಿಂದ ಕಾಂಗ್ರೆಸ್ ರಾಷ್ಟ್ರಭಕ್ತಿಯ ಪಾಠ ಕಲಿಯಬೇಕಿಲ್ಲ ಎಂದರು. ದೇಶದ 27 ಸರ್ಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿರುವುದೇ ಬಿಜೆಪಿ ಸಾಧನೆಯಾಗಿದೆ. ಪ್ರಜಾಪ್ರಭುತ್ವದ ,ಸಂವಿಧಾನದ ವಿರುದ್ಧವಾಗಿರುವವರು ದೇಶದ್ರೋಹಿಗಳು,62 ವರ್ಷಗಳಿಂದ ಆರೆಸ್ಸೆಸ್ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸದವರು ದೇಶಪ್ರೇಮದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂದರು.

ಸುಳ್ಳು ಬಿಜೆಪಿಯವರ ಮನೆದೇವರು, 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದವರು ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ ಎಂದು ಹರಿಪ್ರಸಾದ್ ಪ್ರಶ್ನಿಸಿದರು.


ಬಿಜೆಪಿಯಲ್ಲಿ ಮುಖ್ಯಮಂತ್ರಿ ಪಟ್ಟ ಸಿಗಬೇಕಾದರೆ 2,500 ಕೋಟಿ ಹೈಕಮಾಂಡ್ ಗೆ ಕೊಡಬೇಕು ,ಸಚಿವರಾಗಬೇಕಾದರೆ 100 ಕೋಟಿ ಕೊಡಬೇಕೆಂದು ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳುತ್ತಾರೆ ಎಂದರೆ,ಭ್ರಷ್ಟಾಚಾರ ಮಾಡುವವರು ಯಾರು ಎಂದು ಬಿಜೆಪಿಯವರು ಉತ್ತರಿಸಲಿ ಎಂದು ಸವಾಲೆಸೆದರು.ಬಿಜೆಪಿಯವರೇ ಜಾತಿಧರ್ಮದ ಹೆಸರಿನಲ್ಲಿ ಬಡವರ ಮಕ್ಕಳನ್ನು ಕೊಲೆ ಮಾಡಬೇಡಿ,ತಾಕತ್ತಿದ್ದರೆ ನಿಮ್ಮ ಮಕ್ಕಳನ್ನು ಗಲಭೆಗಳಿಗೆ ಕಳಿಸಿ ಎಂದು ಹರಿಪ್ರಸಾದ್ ಕುಟುಕಿದರು.

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಶುಭದ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ,ಭ್ರಷ್ಟಾಚಾರದಲ್ಲಿ ಕಾರ್ಕಳ ಶಾಸಕರು ರಾಜ್ಯದಲ್ಲಿ ಪ್ರಥಮ‌ ಸ್ಥಾನದಲ್ಲಿದ್ದಾರೆ.ಪ್ರಥಮ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವಾಗ ಸುಚೇತಾ ಶೆಟ್ಟಿ ಕೊಲೆ ಪ್ರಕರಣವನ್ನು ರಾಜಕೀಯವಾಗಿ ಬಳಸಿ ಶಾಸಕನಾಗಿ ಸುಚೇತಾ ಶೆಟ್ಟಿ ಕುಟುಂಬಕ್ಕೆ ನ್ಯಾಯ ಒದಗಿಸದೇ ದ್ರೋಹ ಮಾಡಿದ್ದಾರೆ ಎಂದು ಶುಭದ್ ರಾವ್ ಆರೋಪಿಸಿದರು. ಈ ಬಾರಿ ಕಾರ್ಕಳದಲ್ಲಿ ಭ್ರಷ್ಟಾಚಾರಮುಕ್ತ ಸಮಾಜ ನಿರ್ಮಾಣಕ್ಕಾಗಿ ಉದಯ ಶೆಟ್ಟಿಯವರಿಗೆ ಬೆಂಬಲಿಸಬೇಕೆಂದು ಮನವಿ ಮಾಡಿದರು.


ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ,ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು,ರೋಜಿ ಜಾನ್,ಮಮತಾ ಗಟ್ಟಿ,ನವೀನ್ ಅಡ್ಯಂತಾಯ, ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಡಿ ಅರ್ ರಾಜು , ಕೆಪಿಸಿಸಿ ಸದಸ್ಯರುಗಳಾದ ಸುರೇಂದ್ರ ಶೆಟ್ಟಿ, ನೀರೆ ಕೃಷ್ಣ ಶೆಟ್ಟಿ , ಪ್ರಚಾರ ಸಮಿತಿ ಅಧ್ಯಕ್ಷ ಶುಭದರಾವ್ , ಕಾಂಗ್ರೆಸ್ ಮುಖಂಡ ಅವೆಲಿನ್ ಲೂಯಿಸ್, ಅಲ್ಪಸಂಖ್ಯಾತ ಮೋರ್ಚ ಜಿಲ್ಲಾ ಉಪಾಧ್ಯಕ್ಷ ಆರೀಪ್ ಕಲ್ಲೊಟ್ಟೆ , ಕೃಷ್ಣಯ್ಯ ‌ಶೆಟ್ಟಿ , ಇಂದಿರಾ ಶೆಟ್ಟಿ, ನಮಿತ ಶೆಟ್ಟಿ ‌,‌ಅನಿತಾ ಡಿಸೋಜಾ,ಯುವ ಕಾಂಗ್ರೆಸ್ ಯೋಗೇಶ್ ಇನ್ನಾ ,ಹೆಬ್ರಿ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಬಾಯರಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಕಾರ್ಕಳ ಇಂಟಕ್ ಅಧ್ಯಕ್ಷ ಕಿರಣ್ ಹೆಗ್ಡೆ , ಯೋಗಿಶ್ ಶೆಟ್ಟಿ ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಹಲವಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

Leave a Reply

Your email address will not be published. Required fields are marked *