ಕಾರ್ಕಳ:ಕಾರ್ಕಳದ ಅಭಿವೃದ್ಧಿಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹಾಗೂ ಮಾಜಿ ಶಾಸಕ ದಿ.ಗೋಪಾಲ ಭಂಡಾರಿಯವರ ಕೊಡುಗೆ ಅನನ್ಯವಾಗಿದೆ ಎಂದು ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ ಹೇಳಿದರು.
ಅವರು ಕಾರ್ಕಳದಲ್ಲಿ ಚುನಾವಣಾ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.ರಾಜ್ಯದಲ್ಲಿ ಕಾಂಗ್ರೆಸ್ 140 ಸ್ಥಾನಗಳನ್ನು ಗೆದ್ದು ಬಹುಮತ ಪಡೆದು ಸರ್ಕಾರ ರಚಿಸುವುದು ಖಚಿತ ಅದರಲ್ಲಿ ಕಾರ್ಕಳವು ಒಂದಾಗಬೇಕು .ಈ ನಿಟ್ಟಿನಲ್ಲಿ ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಮುಂದಿನ ದಿನಗಳಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ 29 ಬೂತ್ ಗಳಿಗೆ ತೆರಳಿ ಕಾರ್ಯಕರ್ತರು ಪ್ರಚಾರ ಕಾರ್ಯ ನಡೆಸಬೇಕಿದೆ ಎಂದರು.
ಈ ಹಿಂದೆ ಗೋಪಾಲ ಭಂಡಾರಿ ಅವರ ಆಡಳಿತದಿಂದ ದೇಶವೇ ಕಾರ್ಕಳ ದತ್ತ ತಿರುಗಿ ನೋಡುವಂತೆ ಆಗಿತ್ತು. ಇನ್ನು ಮುಂದೆಯೂ ಒಗ್ಗಟ್ಟಿನಿಂದ ಕೆಲಸ ಮಾಡೋಣ. ವೀರಪ್ಪ ಮೊಯಿಲಿಯವರು ಜಾರಿಗೆ ತಂದ ಸಿಇಟಿ ವ್ಯವಸ್ಥೆಯಂತಹ ಒಳ್ಳೆಯ ಕೆಲಸಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡೋಣ ಎಂದರು.
ಎಲ್ಲಾ ದೈವ ದೇವರುಗಳ ಆಶೀರ್ವಾದ ನಮ್ಮ ಮೇಲಿದೆ. ಈ ಚುನಾವಣೆ ಧರ್ಮ ಅಧರ್ಮಗಳ ನಡುವಿನ ಹೋರಾಟವಾಗಿದೆ. ಈ ಹೋರಾಟದಲ್ಲಿ ಧರ್ಮಕ್ಕೆ ಗೆಲುವು ಸಿಕ್ಕರೆ ಅಧರ್ಮಕ್ಕೆ ಸೋಲು ಖಚಿತವಾಗಿದೆ. ಪಾಂಡವರಂತೆ ಧರ್ಮದ ಉಳಿವಿಗಾಗಿ ಹೋರಾಡೋಣ ಎಂದರು. ಏಪ್ರಿಲ್ 18ರಂದು ನಾಮಪತ್ರ ಸಲ್ಲಿಸುತ್ತೇನೆ. ಏಪ್ರಿಲ್ 20ರಂದು ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದೆ ಎಂದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿ ರಾಘವ ದೇವಾಡಿಗ, ಉಪಾಧ್ಯಕ್ಷ ಅವೆಲಿನ್ ಲೂಯಿಸ್, ಕೆಪಿಸಿಸಿ ಪ್ರಚಾರ ಸಮಿತಿಯ ತಾಲೂಕು ಸಂಯೋಜಕ ಸುಪ್ರೀತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಬಂಗೇರ, ಮುಸ್ಲಿಂ ಜಮಾತ್ ಅಧ್ಯಕ್ಷ ಅಶ್ಪಕ್ ಅಹ್ಮದ್, ರೈತ ಸಂಘದ ರಾಜ್ಯ ಕಾರ್ಯದರ್ಶಿ ಉದಯ ಶೆಟ್ಟಿ ,ಜಿಲ್ಲಾ ಕಾಂಗ್ರೆಸ್ ಜನರಲ್ ಸೆಕ್ರೆಟರಿ ದಿಲೀಪ್ ಹೆಗ್ಡೆ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಾಂತಿ ಶೆಟ್ಟಿ, ಪಕ್ಷದ ಪ್ರಮುಖರಾದ ಡಾ.ಪ್ರೇಮದಾಸ್, ಸುಭೋದ್ ಶೆಟ್ಟಿ, ಸುರೇಂದ್ರ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
ಶೇಖರ್ ಮಡಿವಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಂಗ್ರೆಸ್ ವಕ್ತಾರ ಶುಭದ ರಾವ್ ಕಾರ್ಯಕ್ರಮ ನಿರೂಪಿಸಿದರು.