ಕಾರ್ಕಳ: ವಿಪರೀತ ರಣಬಿಸಿಲಿನಿಂದ ನೆಲ ಸುಡುತ್ತಿರುವ ನಡುವೆ ಅಗ್ನಿ ಅವಘಡಗಳು ಕೂ ಹೆಚ್ಚುತ್ತಿವೆ. ಕಾರ್ಕಳ ತಾಲೂಕಿನಲ್ಲಿ ಕಳೆದ ಜನವರಿಯಿಂದ ಮಾರ್ಚ್ ಅಂತ್ಯಕ್ಕೆ ಕೇವಲ ಮೂರು ತಿಂಗಳಲ್ಲಿ ಬರೋಬ್ಬರಿ 172 ಅಗ್ನಿ ಅವಘಡಗಳು ಸಂಭವಿಸಿರುವುದು ಅಗ್ನಿ ಶಾಮಕದಳ ಇಲಾಖೆಯ ಮಾಹಿತಿಯಿಂದ ತಿಳಿದುಬಂದಿದೆ. ಈ ಬೆಂಕಿ ದುರಂತದಿAದ ಒಟ್ಟಾರೆ 63.60 ಲಕ್ಷ ರೂ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ.
ಕಾರ್ಕಳ ತಾಲೂಕಿನ ಬೆಳ್ಮಣ್ ಪರಿಸರದಲ್ಲಿ ಶೇ 80 ರಷ್ಟು ಅಗ್ನಿ ಅವಘಡಗಳು ಸಂಭವಿಸುತ್ತಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಹಾಗೂ ಜನರು ಬೀಡಿ,ಸಿಗರೇಟು ಸೇದಿ ಎಸೆಯುತ್ತಿರುವ ಕಾರಣದಿಂದ ಬೆಟ್ಟುಗುಡ್ಡಗಳಲ್ಲಿನ ಒಣಹುಲ್ಲು ಹಾಗೂ ಕುರುಚಲು ಗಿಡಗಳಿಗೆ ಬೆಂಕಿ ತಗುಲಿ ಇಂತಹ ಘಟನೆಗಳು ಸಂಭವಿಸುತ್ತವೆ.
ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ 34 ಗ್ರಾಮ ಪಂಚಾಯಿತಿಗಳಿಗೆ ಕೇವಲ ಒಂದು ಅಗ್ನಿಶಾಮಕ ಠಾಣೆಯಿದ್ದು, 4,500 ಸಾವಿರ ಲೀಟರ್ ಹಾಗೂ 9 ಸಾವಿರ ಲೀಟರ್ ಸಾಮರ್ಥ್ಯದ ಎರಡು ಟ್ಯಾಂಕರ್ ವಾಹನಗಳು ಲಭ್ಯವಿದ್ದು ಸುಮಾರು 80ರಿಂದ 100 ಕಿಮೀ ವ್ಯಾಪ್ತಿಯಲ್ಲಿ ಅಗ್ನಿ ಅವಘಡ ಸಂಭವಿಸಿದರೆ ಕಾರ್ಕಳದಿಂದಲೇ ಅಗ್ನಿ ಶಾಮಕ ವಾಹನಗಳು ಕಾರ್ಯಾಚರಣೆಗೆ ಧಾವಿಸಬೇಕಾಗುತ್ತದೆ. ಇದರಿಂದ ಸಾರ್ವಜನಿಕ ಆಸ್ತಿಪಾಸ್ತಿ ಹಾಗೂ ಜೀವ ರಕ್ಷಣೆಯ ಕೆಲಸ ಕಷ್ಟಸಾಧ್ಯವಾಗುತ್ತಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾರ್ಕಳ ಅಗ್ನಿಶಾಮಕ ಠಾಣೆಯಲ್ಲಿ 27 ಮಂಜೂರಾತಿ ಹುದ್ದೆಗಳಿದ್ದು ಈ ಪೈಕಿ ಅಗ್ನಿಶಾಮಕ ಠಾಣಾಧಿಕಾರಿ, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಸೇರಿದಂತೆ ಒಟ್ಟು 22 ಹುದ್ದೆಗಳು ಭರ್ತಿಯಾಗಿದ್ದು, ಈ ಪೈಕಿ ಓರ್ವ ಚಾಲಕ ಹಾಗೂ 4 ಜನ ಫೈರ್ ಮ್ಯಾನ್ ಹುದ್ದೆಗಳು ಖಾಲಿಯಿದೆ. ಕಾರ್ಕಳವು ವಿಶಾಲವಾದ ಭೌಗೋಳಿಕ ಪ್ರದೇಶವಾಗಿರುವ ಹಿನ್ನಲೆಯಲ್ಲಿ ಹಾಗೂ ಸಾಕಷ್ಟು ಅರಣ್ಯ ಹಾಗೂ ಹುಲ್ಲುಗಾವಲು ಪ್ರದೇಶ ಹೊಂದಿರುವ ಹಿನ್ನಲೆಯಲ್ಲಿ ಬೇಸಗೆಯಲ್ಲಿ ಪದೇಪದೇ ಅಗ್ನಿ ಅವಘಡಗಳು ಸಂಭವಿಸುತ್ತಿರುವ ಕಾರಣದಿಂದ ಹಾಲಿ ಕಾರ್ಕಳ ಅಗ್ನಿಶಾಮಕ ಠಾಣೆಯನ್ನು ಮೇಲ್ದರ್ಜೆಗೇರಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಇದಲ್ಲದೇ ಹೆಬ್ರಿ ತಾಲೂಕು ಕಾರ್ಕಳದಿಂದ ಬೇರ್ಪಟ್ಟ ಬಳಿಕ ಹೆಬ್ರಿ ತಾಲೂಕಿಗೂ ಪ್ರತ್ಯೇಕ ಅಗ್ನಿಶಾಮಕ ಠಾಣೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ಈಗಾಗಲೇ 1.50 ಎಕರೆ ನಿವೇಶನ ಕಾಯ್ದಿರಿಸಲಾಗಿದೆ. ಆದರೆ ಅಗ್ನಿ ಶಾಮಕ ಠಾಣೆ ಸ್ಥಾಪನೆ ಕುರಿತು ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಹಿನ್ನಲೆಯಲ್ಲಿ ಈ ಯೋಜನೆ ನೆನೆಗುದಿಗೆ ಬಿದ್ದಿದೆ.
ಕಾರ್ಕಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಗ್ನಿ ದುರಂತ ಹೆಚ್ಚುತ್ತಿರುವ ಕಾರಣದಿಂದ ಬೆಳ್ಮಣ್, ಬೈಲೂರು, ಅಜೆಕಾರು,ಬಜಗೋಳಿ ಸೇರಿದಂತೆ ಪ್ರಮುಖ ಕೇಂದ್ರಗಳಲ್ಲಿ ಅಗ್ನಿಶಾಮಕ ಉಪಠಾಣೆಗಳನ್ನು ಸ್ಥಾಪಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಇದರಿಂದ ಕಾಡ್ಗಿಚ್ಚು ಸಂಭವಿಸಿದ ಸಂದರ್ಭದಲ್ಲಿಯೂ ಬೆಂಕಿ ನಿಯಂತ್ರಿಸಲು ಸಾಧ್ಯವಾಗುತ್ತದೆ. ಈ ಎಲ್ಲದರ ನಡುವೆ ಅಗ್ನಿ ಅವಘಡಗಳು ಸಂಭವಿಸಿದ್ದಾಗ ಕಾರ್ಯಾಚರಣೆ ಸಾಕಷ್ಟು ಪ್ರಮಾಣದಲ್ಲಿ ನೀರು ಬೇಕಾಗುತ್ತದೆ, ಆದರೆ ಬಿರುಬೇಸಗೆಯ ಸಂದರ್ಭದಲ್ಲಿ ನೀರಿನ ಕೊರತೆ ಎದುರಾಗುತ್ತಿದ್ದು ಇದರಿಂದ ಕಾರ್ಯಾಚರಣೆಗೂ ಅಡ್ಡಿಯಾಗುತ್ತಿದ್ದು, ತುರ್ತು ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸಲು ನೀರಿನ ವ್ಯವಸ್ಥೆ ಮಾಡಬೇಕಿದೆ.

