ಕಾರ್ಕಳ: ಕಾರ್ಕಳ ತಾಲೂಕು ಕಚೇರಿಯಲ್ಲಿ ಉಪತಹಶೀಲ್ದಾರ್ ಆಗಿ ನಿವೃತ್ತಿಯಾಗಿದ್ದ ಮಾಳ ಗ್ರಾಮದ ಕಡಾರಿಯ ಕೆ.ಪಿ ನಾಯ್ಕ್(ಕಡಾರಿ ಪೂವಯ್ಯ ನಾಯ್ಕ್) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಮುಂಜಾನೆ ನಿಧನರಾಗಿದ್ದಾರೆ.ಸಣ್ಣ ಪ್ರಮಾಣದ ಜ್ವರ ಹಾಗೂ ಶೀತದಿಂದ ಬಳಲುತ್ತಿದ್ದ ಚಿಕಿತ್ಸೆ ಪಡೆದುಕೊಂಡು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಸೋಮವಾರ ಮುಂಜಾನೆ ಅವರ ಆರೋಗ್ಯದಲ್ಲಿ ಹಠಾತ್ ಏರುಪೇರಾದ ಹಿನ್ನಲೆಯಲ್ಲಿ ಅವರನ್ನು ಮುಂಜಾನೆ 4.30 ರ ಸುಮಾರಿಗೆ ಕಾರ್ಕಳ ಖಾಸಗಿ ಆಸ್ಪತ್ರೆಗೆ ಸಾಗಿಸುವಾಗಲೇ ಅವರು ಮೃತಪಟ್ಟಿದ್ದಾರೆ.ಈ ಹಿಂದೆ ಹೃದಯಸಂಬAಧಿ ಖಾಯಿಲೆಯಿಂದ ಅವರಿಗೆ ಕಳೆದ ನಾಲ್ಕು ವರ್ಷದ ಹಿಂದೆ ಹೃದಯದ ಬೈಪಾಸ್ ಸರ್ಜರಿಯಾಗಿತ್ತು.
ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ಆಪ್ತಸಹಾಯಕರಾಗಿದ್ದ ಅವರು ಸೇವೆಯಿಂದ ನಿವೃತ್ತರಾದ ಬಳಿಕ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಎಸ್ಟಿ ಮೋರ್ಚಾದ ತಾಲೂಕು ಅಧ್ಯಕ್ಷರಾಗಿ ಕಾರ್ಯರ್ನಿಹಿಸುತ್ತಿದ್ದರು ಅಲ್ಲದೇ ಹಾಲಿ ಭೂನ್ಯಾಯ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದರು.
ಇದಲ್ಲದೇ ಮರಾಠಿ ಸಮಾಜ ಸಂಘದ ವಿವಿಧ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯರಾಗಿ ಪಾಲ್ಗೊಳ್ಳುತ್ತಿದ್ದ ಅವರು ಪ್ರಸ್ತುತ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ಮರಾಠಿ ಸಮಾಜ ಸೇವಾ ಸಂಘದ ಕೋಶಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕೆ.ಪಿ ನಾಯ್ಕ್ ಅವರ ನಿಧನಕ್ಕೆ ಕಾರ್ಕಳ ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಶಂಕರ ನಾಯ್ಕ್ ದುರ್ಗ, ಹಿಂದೂ ಜಾಗರಣ ವೇದಿಕೆಯ ಮುಖಂಡ ಉಮೇಶ್ ನಾಯ್ಕ್ ಸೂಡ ಸಂತಾಪ ಸೂಚಿಸಿದ್ದಾರೆ.