ಕಾರ್ಕಳ : ಆಧುನಿಕ ಭಾರತಕ್ಕೆ ಗ್ರಾಮೀಣ ಭಾರತವೇ ಶಕ್ತಿ. ಆಯಾ ಭಾಗದಲ್ಲಿರುವ ಕೃಷಿ, ಉದ್ಯಮಗಳು, ಪ್ರವಾಸೋದ್ಯಮಗಳ ಕಡೆಗೆ ನಮ್ಮ ಯುವಶಕ್ತಿಯ ಗಮನ ಹೋಗುವಂತೆ ನಾವು ನಮ್ಮ ಪಠ್ಯವಿಷಯಗಳನ್ನು ಪುನರ್ ರೂಪಿಸಿದರೆ ಗ್ರಾಮೀಣಭಾಗದ ಯುವಜನತೆ ಅದರ ಪೂರ್ಣ ಪ್ರಯೋಜನ ಪಡೆಯುವುದು ಸಾಧ್ಯವಾಗುತ್ತದೆ. ಕಾಲೇಜುಗಳು ಆ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಅಧ್ಯಾಪಕರು ಪೂರ್ಣ ಪ್ರಮಾಣದಲ್ಲಿ ವಿಷಯತಜ್ಞರಾದರೆ ಅದರ ಪೂರ್ಣಲಾಭವನ್ನು ವಿದ್ಯಾರ್ಥಿಗಳು ಪಡೆಯುತ್ತಾರೆ ಎಂದು ವಾರಣಾಸಿಯ ಮಹಾತ್ಮಾಗಾಂಧಿ ಕಾಶಿ ವಿದ್ಯಾಪೀಠ ವಿಶ್ವವಿದ್ಯಾಲಯ ಉಪಕುಲಪತಿಗಳಾದ ಡಾ. ಆನಂದ ಕುಮಾರ್ ತ್ಯಾಗಿ ಅವರು ಹೇಳಿದರು.
ಅವರು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿಗೆ ಎರಡುದಿನಗಳ ನ್ಯಾಕ್ ಪರಿಶೀಲನಾ ಸಮಿತಿಯ ತಂಡದ ಮುಖ್ಯರಾಗಿ ಭಾಗವಹಿಸಿ ತಂಡದ ವರದಿಯನ್ನು ಕಾಲೇಜಿನ ಪ್ರಾಚಾರ್ಯರಿಗೆ ಒಪ್ಪಿಸುವ ನಿರ್ಗಮನ ಸಭೆಯಲ್ಲಿ ಮಾತನಾಡಿದರು.
ಸಶಕ್ತ ಕಾಲೇಜೊಂದು ಯಾವತ್ತೂ ತನ್ನ ಸುತ್ತಮುತ್ತಲಿನ ಜನರ ಅಗತ್ಯಗಳನ್ನು ಪೂರೈಸುವತ್ತ ಯೋಚಿಸಿದರೆ ಜನರಿಗೆ ದೂರ ಹೋಗಿ ಕಲಿಯುವ ಕಷ್ಟ ತಪ್ಪುತ್ತದೆ ಆ ನಿಟ್ಟಿನಲ್ಲಿ ಕಾಲೇಜುಗಳು ಪ್ರಯತ್ನಿಸಬೇಕು ಎಂದರು.
ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕ ಡಾ. ಸೈಯದ್ ನಝಾಫ್ ಹೈದರ್ ಮಾತನಾಡಿ, ಕಾಲೇಜಿಗೆ ಶುಭ ಹಾರೈಸಿದರು. ಮಹಾರಾಷ್ಟçದ ಬೀಡ್ ನ ಆನಂದರಾವ್ ದೋಂಡೆ ಅಲಿಯಾಸ್ ಬಾಬಾಜಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಹರಿದಾಸ್ ವಿದಾತೆ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಡಾ.ಮಂಜುನಾಥ್ ಎ. ಕೋಟ್ಯಾನ್ ಅವರು ಸ್ವಾಗತಿಸಿದರು. ಐಕ್ಯೂಎಸಿ ಯ ಸಂಯೋಜಕ ಪ್ರೊ. ನಾಗಭೂಷಣ್ ವಂದಿಸಿದರು. ಪ್ರಾಧ್ಯಾಪಕ ನಂದಕಿಶೋರ್ ಕಾರ್ಯಕ್ರಮ ನಿರೂಪಿಸಿದರು.