ಕಾರ್ಕಳ: ಸಾವಿರಾರು ವರ್ಷಗಳ ಅತ್ಯಂತ ಪುರಾತನ ಹಾಗೂ ಕಾರಣೀಕ ಕ್ಷೇತ್ರವಾಗಿರುವ ಕಾರ್ಕಳದ ಕೋಟೆ ಮಾರಿಗುಡಿ ದೇವಸ್ಥಾನದ ಜೀರ್ಣೋದ್ದಾರವನ್ನು ಸಚಿವ ಸುನೀಲ್ ಕುಮಾರ್ ತಾನೇ ಮಾಡಿರುವುದು ಎನ್ನುವ ರೀತಿಯಲ್ಲಿ ಕೀಳುಮಟ್ಟದ ಪ್ರಚಾರವನ್ನು ಸುನಿಲ್ ಕುಮಾರ್ ಹಾಗೂ ಕಾರ್ಕಳ ಬಿಜೆಪಿಯವರು ಮಾಡಿಕೊಂಡು ಬರುತ್ತಿರುವುದು ಕಾರ್ಕಳ ಮಾರಿಯಮ್ಮನ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ, ದೇವಸ್ಥಾನದ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ಖಂಡನೀಯ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಯೊಗೀಶ್ ಆಚಾರ್ಯ ಇನ್ನಾ ಹೇಳಿದ್ದಾರೆ.
ಬಹುತೇಕ ಬಿಜೆಪಿ ಕಾರ್ಯಕ್ರಮದ ವೇದಿಕೆಯಲ್ಲಿ ಭಾಷಣದ ಸಂದರ್ಭದಲ್ಲಿ ಕೆಲವು ಬಿಜೆಪಿ ನಾಯಕರು ಸುನೀಲ್ ಕುಮಾರ್ ಅವರನ್ನು ಮೆಚ್ಚಿಸಲು,ದೇವಸ್ಥಾನ ಜೀರ್ಣೋದ್ದಾರ ಮಾಡಿದವರು ಸುನೀಲ್ ಕುಮಾರ್, ಸುನೀಲ್ ಕುಮಾರ್ ಇಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ ಎಂಬ ಅರ್ಥದಲ್ಲಿಯೇ ಎಂಬ ಕೀಳು ಮಟ್ಟದ ಪ್ರಚಾರವನ್ನು ಮಾಡುತ್ತಿದ್ದಾರೆ. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಪ್ರತಿಯೊಬ್ಬ ಭಕ್ತರ ಕಾಣಿಕೆ ಸಮರ್ಪಣೆಯಾಗಿದೆ.ಶಾಸಕರು ತನ್ನ ವೈಯುಕ್ತಿಕ ಸ್ವಾರ್ಥದ ರಾಜಕೀಯ ಲಾಭಕ್ಕಾಗಿ ದೇವಸ್ಥಾನವನ್ನು ಬಳಸಿಕೊಳ್ಳುವುದು ಸರಿಯಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಯೊಗೀಶ್ ಆಚಾರ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.