ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ವತಿಯಿಂದ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.
ಈಗಾಗಲೇ ಬೆಂಗಳೂರು, ಮಂಡ್ಯದಲ್ಲಿ ರೈತರ ಕಾವೇರಿ ಹೋರಾಟದ ಕಿಚ್ಚು ತೀವ್ರಗೊಂಡಿದ್ದು ಇಂದು ಕೂಡ ಮುಂದುವರಿಯಲಿದೆ.ಬೆಂಗಳೂರಲ್ಲಿ ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸೋದನ್ನು ಖಂಡಿಸಿ ಕಪ್ಪು ಬಾವುಟವನ್ನು ಪ್ರದರ್ಶಿಸುವ ಮೂಲಕ ಇಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ.
ಕಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾರಾ ಗೋವಿಂದ, ಕರವೇ ರಾಜ್ಯಾಧ್ಯಕ್ಷ ಶಿವರಾಮೇಗೌಡ, ಪ್ರವೀಣ್ ಶೆಟ್ಟಿ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿವೆ.
ಇಂದಿನ ಕಾವೇರಿ ಕಿಚ್ಚು ಹೋರಾಟದ ವೇಳೆಯಲ್ಲಿ ಕಾವೇರಿ ನದಿ ನೀರಿನ ವಿವಾದದ ಕುರಿತು ಸರ್ಕಾರ ತುರ್ತು ಅಧಿವೇಶನ ಕರೆಯಬೇಕು. ರಾಜ್ಯದ ಸಂಸದರು ಕೂಡ ರಾಜೀನಾಮೆ ನೀಡಬೇಕೆಂದು ಕನ್ನಡಪರ ಒಕ್ಕೂಟಗಳು ಆಗ್ರಹಿಸಿವೆ.