ಕಾರ್ಕಳ: ಅಭಿವೃದ್ಧಿ ನಿಟ್ಟಿನಲ್ಲಿ ಕಾರ್ಕಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ವಿಕಾಸವಾಗುತ್ತದೆ ಕಾಂಗ್ರೆಸ್ ಬಂದರೆ ವಿನಾಶಕಾರಿಯಾಗಿ ಪರಿಣಮಿಸುತ್ತದೆ ಎಂದು ಕಾರ್ಕಳ ಬಿಜೆಪಿ ಅಭ್ಯರ್ಥಿ ಸಚಿವ ಸುನಿಲ್ ಕುಮಾರ್ ಹೇಳಿದರು.
ಅವರು ಬುಧವಾರ ನಾಮಪತ್ರ ಸಲ್ಲಿಸಿ ಬಳಿಕ ಕುಕ್ಕುಂದೂರು ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದರು. ಕಳೆದ 5 ವರ್ಷಗಳ ಹಿಂದೆ ಶಾಸಕನಾಗಿ ಪುನರಾಯ್ಕೆಯಾದ ನಂತರ ಆಗಿರುವ ಅಭಿವೃದ್ಧಿಯನ್ನು ಕಾರ್ಕಳದ ಜನತೆ ನೋಡಿದ್ದಾರೆ. ರಾಜ್ಯ ಹಾಗೂ ರಾಷ್ಟ್ರೀಯ ವಿಚಾರಗಳಲ್ಲಿ ಸದಾ ಧ್ವನಿ ಎತ್ತುವ ಸುನಿಲ್ ಕುಮಾರ್ ಬೇಕಾ ಅಥವಾ ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬರುವ ಕಾಂಗ್ರೆಸ್ ಬೇಕಾ ಎನ್ನುವುದನ್ನು ಮತದಾರರು ನಿರ್ಧರಿಸಬೇಕಿದೆ ಎಂದರು. ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ ಸರ್ಕಾರದ ಫಲಾನುಭವಿಯಾಗಿದ್ದಾರೆ.ಅಂತಹ ವ್ಯಕ್ತಿ ಇವತ್ತು ಚುನಾವಣೆಗೆ ನಿಲ್ಲುತ್ತಾರೆ ಎಂದರೆ ಜನ ಯಾರನ್ನು ಆಯ್ಕೆ ಮಾಡಬೇಕು ಎಂದು ನಿರ್ಧರಿಸುತ್ತಾರೆ ಎಂದರು.
ಕೋವಿಡ್ ಸಂಕಷ್ಟದ ದಿನಗಳಲ್ಲಿ ಜನರೊಂದಿಗೆ ಇದ್ದುಕೊಂಡು ಧೈರ್ಯ ತುಂಬಿರುವುದು ಬಿಜೆಪಿ ಕಾರ್ಯಕರ್ತರು, ದೂರದ ಮುಂಬೈನಿಂದ ಬಂದವರಿಗೆ ಕ್ವಾರಂಟೈನ್ ಕೇಂದ್ರಗಳನ್ನು ಸ್ಥಾಪಿಸಿ ಆರೈಕೆ ಮಾಡಿದ ಹೆಮ್ಮೆ ನಮಗಿದೆ ,ಕಾಂಗ್ರೆಸ್ ನವರಿಗೆ ಮತ ಕೇಳಲು ಯಾವ ನೈತಿಕತೆಯ ಇದೆ ಎಂದು ಪ್ರಶ್ನಿಸಿದರು.
ಕಾರ್ಕಳ ತಾಲೂಕಿನಲ್ಲಿ ಹಳ್ಳಿ ಹಳ್ಳಿಗಳ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ, ಕುಡಿಯುವ ಹಾಗೂ ಕೃಷಿ ಚಟುವಟಿಕೆಗಳಿಗೆ ನೀರುಣಿಸಲು 237 ಕಿಂಡಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡಿ ಕಾರ್ಕಳದ ಕೃಷಿ ಚಟುವಟಿಕೆಗಳಿಗೆ ಜೀವ ತುಂಬುವ ಕೆಲಸ ಬಿಜೆಪಿ ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಕಾರ್ಕಳಕ್ಕೆ ದೊಡ್ಡ ಪ್ರಮಾಣದ ಕೊಡುಗೆ ಕೊಟ್ಟಿದ್ದೇವೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗಿದ್ದು ರಾಜ್ಯ ಮೂಲೆಮೂಲೆಗಳಿಂದ ಸಾವಿರಾರು ಪ್ರವಾಸಿಗರು ಕಾರ್ಕಳದತ್ತ ಬರುವಂತಾಗಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾನೂನು,ಮತಾಂತರ ನಿಷೇಧ ಕಾಯಿದೆ ರದ್ದುಗೊಳಿಸುತ್ತೇವೆ,ಟಿಪ್ಪು ಪ್ರತಿಮೆ ಸ್ಥಾಪಿಸುತ್ತೇವೆ ಎಂದು ಹೇಳುವ ಮೂಲಕ ಜನವಿರೋಧಿ ನಿಲುವು ಹೊಂದಿದೆ.ನಾವು ಕಾಂಗ್ರೆಸ್ ಗೆ ಹಾಕುವ ಮತಗಳು ಸಮಾಜದಲ್ಲಿ ಅಭದ್ರತೆ ಸೃಷ್ಟಿಸಲಿದೆ ಎಂದರು.ಕೆಲವು ಢೋಂಗಿ ಹಿಂದುತ್ವದ ಕಾರ್ಯಕರ್ತರು ಬಿಜೆಪಿಯ ಹಿಂದುತ್ವದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ,ಆದರೆ ಕಾಂಗ್ರೆಸ್ ಅಭ್ಯರ್ಥಿ ಮಸೀದಿಗೆ ಹೋಗಿ ಪ್ರಾರ್ಥಿಸಿರುವುದು ಯಾವ ಹಿಂದುತ್ವ ಎನ್ನುವುದು ಢೋಂಗಿ ಹಿಂದುತ್ವದ ಕಾರ್ಯಕರ್ತರು ಉತ್ತರಿಸಬೇಕಿದೆ ಎಂದರು.ಈ ಚುನಾವಣೆಯಲ್ಲಿ ಸುನಿಲ್ ಕುಮಾರ್ ಗೆಲುವು ಅಭಿವೃದ್ಧಿಯ ಗೆಲುವು,ನರೇಂದ್ರ ಮೋದಿಯವರ ಗೆಲುವು ಬಿಜೆಪಿಯ ಗೆಲುವು ಆಗಲಿದೆ ಎಂದರು.
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 4 ಸಾವಿರ ಹಕ್ಕುಪತ್ರ ವಿತರಿಸಿದ್ದೇವೆ, ಕಾರ್ಕಳದಲ್ಲಿ ಉದ್ಯೋಗ ಸೃಷ್ಟಿಗೆ ಟೆಕ್ಸ್ ಟೈಲ್ ಪಾರ್ಕ್, ಆಪ್ಟಿಕಲ್ ಫೈಬರ್ ಕೇಬಲ್ ತಯಾರಿಕಾ ಘಟಕ ಸ್ಥಾಪನೆ ಮಾಡಲಾಗುತ್ತದೆ ಎಂದರು.
ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರ, ರಾಜ್ಯದಲ್ಲಿ ಬಿಜೆಪಿಯ ಡಬ್ಬಲ್ ಇಂಜಿನ್ ಸರ್ಕಾರದ ಭಾಗವಾಗಿ ಕಾರ್ಕಳದಲ್ಲಿ ಬಿಜೆಪಿ ಶಾಸಕನನ್ನು ಗೆಲ್ಲಿಸಬೇಕೆಂದು ಸುನಿಲ್ ಕುಮಾರ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಮಹೇಶ್ ಶೆಟ್ಟಿ ಮಾತನಾಡಿ,ಕಾರ್ಕಳದಲ್ಲಿ ಚುನಾವಣೆ ಸಂದರ್ಭದಲ್ಲಿ ಅಪಪ್ರಚಾರ ಜೋರಾಗಿದೆ ಅದಕ್ಕೆ ತಲೆಕೆಡಿಸಿಕೊಳ್ಳದೇ ಸುನಿಲ್ ಕುಮಾರ್ ಅವರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವುದೇ ನಮ್ಮ ಗುರಿಯಾಗಬೇಕು ಎಂದರು.
ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ,ಕಾರ್ಯಕರ್ತರ ಉತ್ಸಾಹ ಗಮನಿಸಿದರೆ ಸುನಿಲ್ ಕುಮಾರ್ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎನ್ನುವ ಅನಿಸಿಕೆ ವ್ಯಕ್ತವಾಗಿದೆ. ಕಾರ್ಕಳದಲ್ಲಿ ಸುನಿಲ್ ಕುಮಾರ್ ಗೆಲುವು ಅವಶ್ಯಕತೆ ಮಾತ್ರವಲ್ಲ ಅನಿವಾರ್ಯ ಕೂಡ. ಯಾಕೆಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರು ಬದುಕಲು ಕಷ್ಟಕರವಾದ ವಾತಾವರಣ ನಿರ್ಮಾಣವಾಗಲಿದೆ.ಸುನಿಲ್ ಕುಮಾರ್ ಹಿಂದುಳಿದ ವರ್ಗದ ನಾಯಕರಾಗಿದ್ದು, ಅವರು ಮುಂದಿನ ಮುಖ್ಯಮಂತ್ರಿಯಾಗಲು ಅರ್ಹರಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ , . ಶಾಸಕ ರಘುಪತಿ ಭಟ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕ್ಯಾಾಪ್ಟನ್ ಗಣೇಶ್ ಕಾರ್ಣಿಕ್, ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ, ಸುರೇಶ್ ನಾಯಕ್ ಕುಯಿಲಾಡಿ, ಮಣಿರಾಜ ಶೆಟ್ಟಿ, ಕಾರ್ಕಳ ಬಿಜೆಪಿ ಅಧ್ಯಕ್ಷ ಮಹಾವೀರ ಹೆಗ್ಡೆ, ಬೋಳ ಪ್ರಭಾಕರ ಕಾಮತ್, ಎಂ.ಕೆ ವಿಜಯ ಕುಮಾರ್, ಪ್ರತಾಪ್ ಸಿಂಹ ನಾಯಕ್, ಯಶ್‌ಪಾಲ್ ಸುವರ್ಣ, ಕುತ್ಯಾಾರು ನವೀನ್ ಶೆಟ್ಟಿ, , ಬಾಹುಬಲಿ ಪ್ರಸಾದ್, ವಿಶ್ವನಾಥ ಪೂಜಾರಿ, ಶಂಕರ್ ಶೆಟ್ಟಿ, ರತ್ನಾಾಕರ ಶೆಟ್ಟಿ, ಕರುಣಾಕರ ಶೆಟ್ಟಿ, ಭಾಸ್ಕರ್ ಕೋಟ್ಯಾನ್, ಹರೀಶ್ ಶೆಟ್ಟಿ ಎರ್ಮಾಳ್, ಪ್ರಸಾದ್ ಶೆಟ್ಟಿ, ಪುರಂದರ, ರಾಮಚಂದ್ರ ಆಚಾರ್, ಬಾಲಕೃಷ್ಣ ಶೆಟ್ಟಿ, ಸದಾನಂದ ಶೆಟ್ಟಿ, ರೋಹಿತ್ ಹೆಗ್ಡೆೆ ಮತ್ತಿತರರು ಉಪಸ್ಥಿತರಿದ್ದರು.
ಮಹೇಶ್ ಶೆಟ್ಟಿ ಕುಡುಪುಲಾಜೆ ಪ್ರಸ್ತಾವನೆಗೈದರು. ರವೀಂದ್ರಕುಮಾರ್ ಸ್ವಾಗತಿಸಿ, ನರಸಿಂಹ ಕಾಮತ್ ಸಾಣೂರು ನಿರೂಪಿಸಿ, ಕರುಣಾಕರ ವಂದಿಸಿದರು.