ಕಾರ್ಕಳ: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನುವ ಕೆಲವೇ ದಿನಗಳಲ್ಲಿ ದಿನಾಂಕ ಘೋಷಣೆಯಾಗುವ ಹಿನ್ನಲೆಯಲ್ಲಿ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿ ಉಳಿದ ರಾಜಕೀಯ ಪಕ್ಷಗಳಿಗಿಂತ ಮುಂದಿದೆ.
ಈಗಾಗಲೇ ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಪು,ಕುಂದಾಪುರ ಹಾಗೂ ಬೈಂದೂರು ಕ್ಷೇತ್ರಗಳಿಗೆ ಮೊದಲಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ಉಳಿದಂತೆ ಉಡುಪಿ ಹಾಗೂ ಹೈವೋಲ್ಟೇಜ್ ಕ್ಷೇತ್ರವಾಗಿರುವ ಕಾರ್ಕಳಕ್ಕೆ ಮಾತ್ರ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ.
ಕಾರ್ಕಳದ ಚುನಾವಣಾ ಕಣ ಈ ಬಾರಿ ರಂಗೇರಲಿದ್ದು,ಹಾಲಿ ಬಿಜೆಪಿ ಶಾಸಕ ಹಾಗೂ ಸಚಿವ ಸುನಿಲ್ ಕುಮಾರ್ ಬಿಜೆಪಿಯಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ, ಈ ನಡುವೆ ಹಿಂದುತ್ವ ಹಾಗೂ ಭ್ರಷ್ಟಾಚಾರರಹಿತ ಆಡಳಿತಕ್ಕಾಗಿ ಹಿಂದುತ್ವವಾದಿ ಪ್ರಮೋದ್ ಮುತಾಲಿಕ್ ಸ್ಪರ್ಧೆಗೆ ಸಿದ್ದತೆ ನಡೆಸುವ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿಗೆ ಟಕ್ಕರ್ ನೀಡಲು ಮುಂದಾಗಿದ್ದಾರೆ. ಈ ನಡುವೆ ಬಿಜೆಪಿಯೊಳಗಿನ ಗೊಂದಲದ ಲಾಭಗಿಟ್ಟಿಸಿ ಕಾರ್ಕಳ ಕ್ಷೇತ್ರವನ್ನು ಈ ಬಾರಿ ಶತಾಯಗತಾಯ ಗೆಲ್ಲಲೇಬೇಕೆಂಬ ಲೆಕ್ಕಾಚಾರವನ್ನಿಟ್ಟುಕೊಂಡು ವೀರಪ್ಪ ಮೊಯ್ಲಿಯವರನ್ನು ವಿಶ್ವಾಸಕ್ಕೆ ಪಡೆದು ಕಾರ್ಕಳದಲ್ಲಿ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ.
ಕಾರ್ಕಳದಿಂದ ಕಾಂಗ್ರೆಸ್ ಟಿಕೆಟ್ ಗಾಗಿ ಮಂಜುನಾಥ ಪೂಜರಿ,ಸುರೇಂದ್ರ ಶೆಟ್ಟಿ, ಡಿ.ಆರ್ ರಾಜು ಹಾಗೂ ನೀರೆ ಕೃಷ್ಣ ಶೆಟ್ಟಿ ಸೇರಿ ನಾಲ್ವರು ಆಕಾಂಕ್ಷಿಗಳು ತಲಾ 2 ಲಕ್ಷ ಠೇವಣಿಯಿಟ್ಟು ಅರ್ಜಿ ಸಲ್ಲಿಸಿದ್ದರು. ಆದರೆ ಅಂತಿಮವಾಗಿ ನೀರೆ ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ ಬಹುತೇಕ ಸ್ಪರ್ಧೆಯಿಂದ ಹಿಂದೆ ಸರಿದ್ದಿದ್ದಾರೆ ಎನ್ನುವ ಮಾತುಗಳು ಕಾಂಗ್ರೆಸ್ ವಲಯದಿಂದ ಕೇಳಿಬಂದ ನಡುವೆ ಮುನಿಯಾಲು ಉದಯ ಶೆಟ್ಟಿಯವರಿಗೆ ಟಿಕಿಟ್ ಕೊಡಬೇಕೆಂಬ ಕಾರ್ಯಕರ್ತರ ಒತ್ತಡ ಬಲವಾದ ಹಿನ್ನಲೆಯಲ್ಲಿ ಅಂತಿಮವಾಗಿ ಆಯ್ಕೆ ಪಟ್ಟಿಯಲ್ಲಿ ಉದಯ ಶಟ್ಟಿ ಹೆಸರು ಸೇರ್ಪಡೆಯಾಗಿತ್ತು. ಇದೀಗ ಕಾರ್ಕಳದಲ್ಲಿ ಟಿಕೆಟ್ ಫೈಟ್ ಜೋರಾಗಿದ್ದು ಮಂಜುನಾಥ ಪೂಜಾರಿ, ಉದಯ ಶೆಟ್ಟಿ ಹಾಗೂ ಡಿ.ಆರ್ ರಾಜು ನಡುವೆ ಪೈಪೋಟಿ ಜೋರಾಗಿದೆ. ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳ ಮಾಹಿತಿ ಪ್ರಕಾರ ಉದಯ ಶೆಟ್ಟಿ ಹಾಗೂ ಮಂಜುನಾಥ ಪೂಜಾರಿ ನಡುವೆ ಟಿಕೆಟ್ ಪೈಪೋಟಿಯಿದ್ದು ಇಬ್ಬರಲ್ಲಿ ಯಾರು ಎನ್ನುವುದು ಇನ್ನೂ ಅಂತಿಮವಾಗಿಲ್ಲ.
ಕಾರ್ಕಳದಲ್ಲಿ ಕಾಂಗ್ರೆಸ್ ಗೆ ಅಂದಾಜು 45 ಸಾವಿರ ಸಾಂಪ್ರದಾಯಿಕ ಮತಗಳಿದ್ದು, ಈ ನಡುವೆ ಅಭ್ಯರ್ಥಿಯ ವೈಯುಕ್ತಿಕ ವರ್ಚಸ್ಸು, ಜಾತಿ ಲೆಕ್ಕಾಚಾರ, ಬಿಜೆಪಿಯಲ್ಲಿನ ಬಿಕ್ಕಟ್ಟು, ಮುತಾಲಿಕ್ ಸ್ಪರ್ಧೆ ವಿಚಾರಗಳು ಕಾಂಗ್ರೆಸ್ ಗೆ ಒಂದಷ್ಟು ವರದಾನವಾಗಿ ಪರಿಣಮಿಸುವ ಸಾಧ್ಯತೆಗಳಿವೆ ಎನ್ನುವ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್ ಈ ಬಾರಿ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವ ಹಾಗೂ ಕಾಂಗ್ರೆಸ್ ಪಕ್ಷದೊಳಗಿನ ಟಿಕೆಟ್ ಹಂಚಿಕೆ ಅಸಮಾಧಾನವನ್ನು ತಣಿಸುವ ನಿಟ್ಟಿನಲ್ಲಿ ಅಭ್ಯರ್ಥಿ ಘೋಷಣೆಯನ್ನು ತಡೆಹಿಡಿದಿದೆ ಎನ್ನಲಾಗುತ್ತಿದೆ.