ಬೆಂಗಳೂರು : ಕೋಳಿ ಸಾಕಾಣಿಕೆಯು (ಪೌಲ್ಟ್ರಿ ಫಾರಂ) ಕೃಷಿ ಚಟುವಟಿಕೆಯಾಗಿದ್ದು, ಅದನ್ನು ವಾಣಿಜ್ಯ ಚಟುವಟಿಕೆಯಾಗಿ ಪರಿಗಣಿಸಿ ಕರ್ನಾಟಕ ಗ್ರಾಮ ಸ್ವರಾಜ್ ಕಾಯ್ದೆಯಡಿ ಯಾವುದೇ ರೀತಿಯ ತೆರಿಗೆ ವಿಧಿಸಲು ಗ್ರಾಮ ಪಂಚಾಯತಿಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಕೃಷಿ ಜಮೀನಿನಲ್ಲಿ ನಿರ್ಮಿಸಿದ ಕೋಳಿ ಸಾಕಾಣೆ ಕೇಂದ್ರಕ್ಕೆ ತೆರಿಗೆ ಪಾವತಿಸಲು ಸೂಚಿಸಿ ಬೆಂಗಳೂರು ಉತ್ತರ ತಾಲೂಕಿನ ಸೊಂಡೆಕೊಪ್ಪ ಗ್ರಾಮ ಪಂಚಾಯತಿ ಜಾರಿಗೊಳಿಸಿದ್ದ ನೋಟಿಸ್ ಪ್ರಶ್ನಿಸಿ ಕೆ.ನರಸಿಂಹ ಮೂರ್ತಿ ಎಂಬುವರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಪೀಠ, ಕೋಳಿ ಸಾಗಾಣಿಕೆಯು ಕೃಷಿ ಚಟುವಟಿಕೆಯಾಗಿದೆ. ಕೋಳಿ ಸಾಗಾಣಿಕೆ ಕೇಂದ್ರದ ಕಟ್ಟಡವನ್ನು ಕರ್ನಾಟಕ ಗ್ರಾಮ ಸ್ವರಾಜ್ ಕಾಯ್ದೆ ಶೆಡ್ಯೂಲ್ಡ್ 4 ರ (ಎ)(2) ಅಡಿಯಲ್ಲಿ ವಾಣಿಜ್ಯ ಕಟ್ಟಡವನ್ನಾಗಿ ಪರಿಗಣಿಸಿ ತೆರಿಗೆ ವಿಧಿಸಲು ಅವಕಾಶವಿಲ್ಲ. ಇನ್ನೂ ಕೃಷಿ ಜಮೀನಿನಲ್ಲಿ ಕೋಳಿ ಸಾಕಣಿಕೆ ಕೇಂದ್ರ ಕಟ್ಟಡ ನಿರ್ಮಿಸಿದ ನಂತರವೂ ಅದು ಕೃಷಿ ಭೂಮಿಯಾಗಿಯೇ ಮುಂದುವರೆಯಲಿದೆ. ಅದನ್ನು ವಾಣಿಜ್ಯ ಭೂಮಿಯಾಗಿ ಪರಿಗಣಿಸಿ ತೆರಿಗೆ ವಿಧಿಸಲು ಸಾಧ್ಯವಿಲ್ಲ. ಕೃಷಿ ಭೂಮಿಯನ್ನು ವಾಣಿಜ್ಯ ಬಳಕೆಗೆ ಪರಿವರ್ತಿಸುವ ಅಗತ್ಯವೂ ಇಲ್ಲ ಎಂದು ಆದೇಶಿಸಿದೆ.
ಅಲ್ಲದೆ, ಕೋಳಿ ಸಾಕಣಿಕೆಯು ವಾಣಿಜ್ಯ ಚಟುವಟಿಕೆಯಾಗಿದ್ದು, ಅದಕ್ಕಾಗಿ ನಿರ್ಮಿಸಿರುವ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಪಡೆಯುವುದಕ್ಕೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ವಿತರಿಸಲು 1.3 ಲಕ್ಷ ರು. ತೆರಿಗೆ ಪಾವತಿಸುವಂತೆ ಅರ್ಜಿದಾರರಿಗೆ ಸೂಚಿಸಿ ಗ್ರಾಮ ಪಂಚಾಯತಿ ಜಾರಿಗೊಳಿಸಿದ್ದ ನೋಟಿಸ್ ಅನ್ನು ಹೈಕೋರ್ಟ್ ಇದೇ ವೇಳೆ ರದ್ದುಪಡಿಸಿದೆ. ಜೊತೆಗೆ ಅರ್ಜಿದಾರರಿಂದ ಈಗಾಗಲೇ ತೆರಿಗೆ ರೂಪದಲ್ಲಿ ಸಂಗ್ರಹಿಸಿರುವ 59,551 ರೂ.ಗಳನ್ನು ಹಿಂದಿರುಗಿಸುವಂತೆ ಪಂಚಾಯತಿಗೆ ನಿರ್ದೇಶಿಸಿದೆ.