Share this news

ಕಾರ್ಕಳ:ಕೋವಿಡ್ ಸಂದರ್ಭದಲ್ಲಿ ತರಗತಿ ನಡೆಸಿದ ಕುರಿತು ಸುದ್ದಿ ಪ್ರಕಟಿಸಿದ್ದ ಪತ್ರಕರ್ತನ ವಿರುದ್ಧ ದಾಖಲಾದ ಪ್ರಕರಣವನ್ನು ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ.
ಕಾರ್ಕಳದ ಸರ್ಕಾರಿ ಬೋರ್ಡ್ ಹೈಸ್ಕೂಲ್ ನಲ್ಲಿ ಕೊರೊನಾ ಸಂದರ್ಭದಲ್ಲಿ ತರಗತಿ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಮೇರೆಗೆ ಅಂದಿನ ಕನ್ನಡ ಪ್ರಭ ವರದಿಗಾರ ಸಂಪತ್ ನಾಯಕ್ ಶಾಲೆಗೆ ತೆರಳಿ ಪೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡಿದ್ದರು.ಅಲ್ಲದೇ ತರಗತಿ ನಡೆಸಲು ಅವಕಾಶ ಇಲ್ಲದಿದ್ದರೂ ಯಾಕೆ ತರಗತಿ ನಡೆಸಿದ್ದೀರಿ ಎಂದು ಪ್ರಶ್ನಿಸಿದಾಗ ಅಧ್ಯಾಪಕ ಮುರಳೀಧರ ಪ್ರಭು ಹಾಗೂ ಸಂಪತ್ ನಾಯಕ್ ನಡುವೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ.
ಇದಲ್ಲದೇ ಈ ಘಟನೆ ಕುರಿತು ಕನ್ನಡ ಪ್ರಭ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಪತ್ರಿಕೆಯಲ್ಲಿ ವರದಿ ಬಂದ ಬಳಿಕ ಶಿಕ್ಷಕರ ಕ್ರಮದ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು.ಇದರಿಂದ ಸಿಟ್ಟಾದ ಅಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಜಿ.ಎಸ್ ಅವರ ಸೂಚನೆ ಮೇರೆಗೆ ಮುರಳೀಧರ ಪ್ರಭು ಅವರು ಸಂಪತ್ ನಾಯಕ್ ತರಗತಿಯೊಳಗೆ ಅಕ್ರಮ ಪ್ರವೇಶ ಮಾಡಿದ್ದಾರೆ ಎಂದು ಆರೋಪಿಸಿ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ಸಂಪತ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆಯೇ ಪತ್ರಕರ್ತ ಸಂಪತ್ ನಾಯಕ್ ಇದೊಂದು ಸುಳ್ಳು ಪ್ರಕರಣವಾಗಿದೆ ತನ್ನ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿ ಪ್ರಕರಣವನ್ನು ರದ್ದುಪಡಿಸಲು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು..
ಬರೋಬ್ಬರಿ 3 ವರ್ಷಗಳ ವಿಚಾರಣೆ ಇದೀಗ ಹೈಕೋರ್ಟ್ ಈ ಪ್ರಕರಣವನ್ನು ವಜಾಗೊಳಿಸಿ ತೀರ್ಪು ಪ್ರಕಟಿಸಿದೆ. ಸಂಪತ್ ನಾಯಕ್ ಪರ ಹೈಕೋರ್ಟ್ ನ್ಯಾಯವಾದಿ ಪವನ್‌ಚಂದ್ರ ಶೆಟ್ಟಿ ವಾದಿಸಿದ್ದರು.
ಈ ತೀರ್ಪಿನಿಂದ ಶಿಕ್ಷಕ ಮುರಳೀಧರ ಪ್ರಭು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಶಶಿಧರ ಜಿ‌.ಎಸ್ ಅವರಿಗೆ ಮುಖಭಂಗವಾಗಿದೆ.

 
 

 

 
 

Leave a Reply

Your email address will not be published. Required fields are marked *