ಕಾರ್ಕಳ : ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ಖಾಸಗಿ ವಾಹನಗಳ ಹಾವಳಿ ಹೆಚ್ಚಾಗುತ್ತಿದ್ದು, ಕಾನೂನುಬಾಹಿರವಾಗಿ ಬಾಡಿಗೆ ಮಾಡಿಕೊಂಡು ಸರಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿದ್ದಾರೆ. ಇದರಿಂದ ಸರಕಾರಕ್ಕೆ ತೆರಿಗೆ ಕಟ್ಟಿ ಬಾಡಿಗೆ ಮಾಡುತ್ತಿರುವ ಟ್ಯಾಕ್ಸಿ ಮಾಲಕರಿಗೆ ಅನ್ಯಾಯವಾಗುತ್ತಿದೆ ಎಂದು ಕಾರ್ಕಳ ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ ಮಾಲಕರ ಸಂಘ ಆಕ್ರೋಶ ವ್ಯಕ್ತಪಡಿಸಿದ್ದು,ಇದರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕಾರ್ಕಳ ನಗರ ಠಾಣೆಗೆ ಮನವಿ ಮಾಡಿದ್ದಾರೆ.
ಇದೇ ರೀತಿ ಖಾಸಗಿ ವಾಹನಗಳ ಹಾವಳಿ ಮುಂದುವರಿದರೆ, ಸರಕಾರಕ್ಕೆ ತೆರಿಗೆ ಪಾವತಿಸುತ್ತಿರುವ ಟ್ಯಾಕ್ಸಿ ಮಾಲಕರು ಸಂಕಷ್ಟಕ್ಕೀಡಾಗುತ್ತಾರೆ. ಖಾಸಗಿ ವಾಹನ ಅಪಘಾತವಾದಲ್ಲಿ ಪ್ರಯಾಣಿಕರಿಗೆ ವಿಮೆಯೂ ಸಿಗುವುದಿಲ್ಲ. ಇದರಿಂದ ಪ್ರಯಾಣಿಕರಿಗೂ ತೊಂದರೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಬಸ್ಸಿನವರು ಕೂಡ ಮದುವೆ ಸಮಾರಂಭಗಳ ಬಾಡಿಗೆ ಮಾಡುತ್ತಿದ್ದು ಇದರಿದ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ಈ ಎಲ್ಲಾ ಅನ್ಯಾಯಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಾರ್ಕಳ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರ ಮತ್ತು ಮಾಲಕರ ಸಂಘ ನಗರ ಠಾಣೆಗೆ ಮನವಿ ಸಲ್ಲಿಸಿದ್ದಾರೆ.