ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶದ ಬಡಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮನೆ ಬಾಗಿಲಿಗೆ ಆರೋಗ್ಯ ಸೇವೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಗ್ರಾಮೀಣ ಜನರ ಬಳಿಗೆ ಆರೋಗ್ಯ ಸೌಲಭ್ಯವನ್ನು ತಲುಪಿಸುವ ಸಲುವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ವೋಲೋ ಗ್ರೂಪ್ ಮತ್ತು ನಾರಾಯಣ ಹೆಲ್ತ್ ಸಹಯೋಗದಲ್ಲಿ ಸಂಚಾರಿ ಸಮುದಾಯ ಆರೋಗ್ಯ ಕೇಂದ್ರ (Wellness on Wheels)ಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಬೆಂಗಳೂರಿನಲ್ಲಿ ಚಾಲನೆ ನೀಡಿದರು.
ಈ ಕುರಿತು ಮಾಹಿತಿ ನೀಡಿದ ಅವರು, ಸಂಚಾರಿ ಸಮುದಾಯ ಆರೋಗ್ಯ ಕೇಂದ್ರವು ರಾಜ್ಯದಾದ್ಯಂತ ನಿಗದಿತ ದಿನಾಂಕಗಳಂದು ಸಂಚರಿಸಲಿದೆ. ಸಂಚಾರಿ ಕೇಂದ್ರವು ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಆರೋಗ್ಯ ತಪಾಸಣೆಗೆ ಅಗತ್ಯ ಇಂಟರ್‌ನೆಟ್ ಸೌಲಭ್ಯ ರಕ್ತ ಪರೀಕ್ಷೆ ಲ್ಯಾಬ್, ಡಯಾಗ್ನಸ್ಟಿಕ್ ಲ್ಯಾಬ್, ಒಂದು ಕೆಮಿಕಲ್ ಶೌಚಾಲಯವನ್ನು ಹೊಂದಿದೆ, ಮತ್ತು ಆನ್-ಬೋರ್ಡ್ ವಿದ್ಯುತ್ ಮೂಲಗಳಿಂದ ಸ್ವತಂತ್ರವಾಗಿ ಚಾಲಿತವಾಗಿದೆ ಎಂದರು.
ಸಂಚಾರಿ ಸಮುದಾಯ ಆರೋಗ್ಯ ಕೇಂದ್ರವು ಗ್ರಾಮೀಣ ಪ್ರದೇಶಗಳಿಗೆ ನಗರದ ಕೊಳಚೆ ಪ್ರದೇಶಗಳಿಗೆ ತೆರಳಿ, ಹೃದಯ ಖಾಯಿಲೆ ತಪಾಸಣೆ (ECO),ಎಕ್ಸ್ ರೇ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಮಮ್ಮೊಗ್ರಾಮ್,ಡಯಾಗ್ನಾಸ್ಟಿಕ್ ಸೇವೆಗಳು ಹಾಗೂ ವೈದ್ಯಕೀಯ ಸಮಾಲೋಚನೆ , ಕ್ಯಾನ್ಸರ್ ಸ್ಕ್ರೀನಿಂಗ್ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳನ್ನು ಪತ್ತೆಹಚ್ಚಲು ಸುಧಾರಿತ ಟ್ರೈನಿಂಗ್ ಉಪಕರಣಗಳನ್ನು ಸೌಲಭ್ಯವನ್ನು ಹೊಂದಿರುತ್ತದೆ. ಹೆಚ್ಚಿನ ವೈದ್ಯಕೀಯ ಸಮಾಲೋಚನೆಯನ್ನು ನಾರಾಯಣ ಹೆಲ್ತ್ ತಜ್ಞ ವೈದ್ಯರೊಂದಿಗೆ ಟೆಲಿ ಸಮಾಲೋಚನೆ ಮೂಲಕ ಸ್ಥಳದಲ್ಲಿಯೇ ಚಿಕಿತ್ಸಾ ಸಲಹೆಗಳನ್ನು ನೀಡಲಿದ್ದಾರೆ ಎಂದು ಸಚಿವ ಗುಂಡೂರಾವ್ ಹೇಳಿದರು.
ಜನರಿಗೆ ಆರೋಗ್ಯ ಸೌಲಭ್ಯವನ್ನು ತ್ವರಿತವಾಗಿ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಸಂಚಾರಿ ಸಮುದಾಯ ಆರೋಗ್ಯ ಕೇಂದ್ರ ಸಿದ್ಧತೆಗಾಗಿ ಸುಮಾರು 2 ಕೋಟಿ ಗಳಾಗಿದ್ದು ಇದರವಾರ್ಷಿಕ ನಿರ್ವಹಣೆಗೆ ಕನಿಷ್ಠ 60 do 70 ಲಕ್ಷ ವೆಚ್ಚವಾಗುವುದಾಗಿ ಅಂದಾಜಿಸಲಾಗಿದೆ. ಈ ವೆಚ್ಚವನ್ನು ಸಂಪೂರ್ಣವಾಗಿ ವೋಲ್ಲೋ ಕಂಪನಿಯು ಸಾಮಾಜಿಕ ಹೊಣೆಗಾರಿಕೆ ನಿಧಿಯಲ್ಲಿ ಭರಿಸಿದ್ದು ಇದಕ್ಕಾಗಿ ವೋಲ್ಲೋ ಕಂಪನಿಗೆ, ಹಾಗೆಯೇ ಸಂಚಾರಿ ಸಮುದಾಯ ಆರೋಗ್ಯ ಕೇಂದ್ರ ಮೂಲಕ ಆರೋಗ್ಯ ಸೌಲಭ್ಯಗಳಿಂದ ವಂಚಿತ ಜನರಿಗೆ ಉಚಿತ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತಿರುವ ನಾರಾಯಣ ಹೆಲ್ತ್ ಸಂಸ್ಥೆಗೆ ಧನ್ಯವಾದ ಸಲ್ಲಿಸಿದರು.
ಆರೋಗ್ಯ ಇಲಾಖೆಯಡಿ ಪುಸ್ತುತ ಖಾಸಗಿ ಸಹಭಾಗಿತ್ವದಲ್ಲಿ ಒಂದು ಸಂಚಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಾಲನೆ ನೀಡುತ್ತಿದ್ದು, ನಮ್ಮ ಸರ್ಕಾರವು ಸಂಚಾರಿ ಸಮುದಾಯ ಆರೋಗ್ಯ ಕೇಂದ್ರ ಮೂಲಕ ಸುಸಜ್ಜಿತ ಆರೋಗ್ಯ ತಪಾಸಣೆ ಸೌಲಭ್ಯಗಳನ್ನು ಕಟ್ಟಕಡೆಯ ಜನರಿಗೂ ತಲುಪಿಸಲು ಬದ್ಧವಾಗಿದೆ. ಜನರ ಆರೋಗ್ಯ ಸುಧಾರಣೆಯೇ ನಮ್ಮ ಧೈಯವಾಗಿದ್ದು, ಖಾಸಗಿ ಕಂಪೆನಿಗಳ ಸಹಯೋಗದಲ್ಲಿ ಮುಂದಿನ ದಿನಗಳಲ್ಲಿ ಇದನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.