ಬೆಂಗಳೂರು: ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ಬೆನ್ನಲ್ಲೇ ಪ್ರಗ್ಯಾನ್ ರೋವರ್ ತನ್ನ ಅಧ್ಯಯನ ಕಾರ್ಯಾರಂಭಿಸಿದೆ. ಈಗಾಗಲೇ ಚಂದ್ರನ ಮೇಲೆ ಫೋಟೋಗಳನ್ನು, ವಿಡಿಯೋಗಳನ್ನು ಇಸ್ರೋಗೆ ರವಾನಿಸಿದ್ದು, ಇದೀಗ ಪ್ರಗ್ಯಾನ್ ರೋವರ್ ಇದೇ ಮೊದಲ ಬಾರಿಗೆ ಚಂದ್ರಲ್ಲಿರುವ ಹಗಲಿನ ತಾಪಮಾನ ಮಾಹಿತಿಯನ್ನು ಇಸ್ರೋಗೆ ಕಳುಹಿಸಿದೆ.
ಈ ಮೂಲಕ ಇದೇ ಮೊದಲ ಬಾರಿಗೆ ಚಂದ್ರನ ಮೇಲಿರುವ ತಾಪಮಾನದ ಮಾಹಿತಿ ಬಹಿರಂಗಗೊಂಡಿದೆ. ವಿಕ್ರಮ್ ಲ್ಯಾಂಡರ್ ಸಹಾಯದಿಂದ ಚಂದ್ರನ ಮೇಲ್ಮಣ್ಣಿನ ತಾಪಮಾನ ಮಾಹಿತಿ ನೀಡಿದ್ದು, ಈ ಕುರಿತು ಇಸ್ರೋ ಗ್ರಾಫ್ ಬಿಡುಗಡೆ ಮಾಡಿದೆ.
ಮೈನಸ್ 10 ಡಿಗ್ರಿ ಸೆಲ್ಸಿಯಸ್ನಿಂದ 60 ಡಿಗ್ರಿವರೆಗೆ ತಾಪಮಾನ ಇದೆ ಎಂದು ರೋವರ್ ಮಾಹಿತಿ ನೀಡಿದ್ದು, ಅದನ್ನು ಇಸ್ರೋ ಗ್ರಾಫ್ ಸಮೇತ ವಿವರಿಸಿದೆ. ಈ ಬಗ್ಗೆ ಟ್ವೀಟ್ ಮೂಲಕ ಹಂಚಿಕೊಂಡಿರುವ ಇಸ್ರೋ, ಚಂದ್ರನ ದಕ್ಷಿಣ ಧೃವದಲ್ಲಿ ಪ್ರಗ್ಯಾನ್ ರೋವರ್ ಸಂಚರಿಸುತ್ತಿದ್ದು, ಇದೀಗ ಸೆನ್ಸಾರ್ಗಳ ಮೂಲಕ ಚಂದ್ರನ ತಾಪಮಾನ ಪರೀಕ್ಷೆ ಮಾಡಿದೆ. 10 ಸೆನ್ಸಾರ್ಸ್ಗಳು ಚಂದ್ರನ 10 ಸೆ.ಮೀ ಆಳಕ್ಕೆ ಇಳಿದಿವೆ ಎಂದು ತಿಳಿಸಿದೆ.
ಇಸ್ರೋ ಚಂದ್ರನ ಮೇಲಿರುವ ChaSTE ಪ್ಲೇಲೋಡ್ ವಿಕ್ರಮ್ ಲ್ಯಾಂಡರ್ ಸಹಾಯದಿಂದ ಚಂದ್ರನ ಮೇಲಿನ ತಾಪಮಾನ ಎಷ್ಟಿದೆ? ಇದು ಯಾವ ರೀತಿ ಬದಲಾಗುತ್ತಿದೆ ಎಂಬುದರ ಮಾಹಿತಿಯನ್ನು ಇಸ್ರೋ ಗ್ರಾಫ್ ಮೂಲಕ ವಿವರಿಸಿದೆ. ಅಲದೇ ಅಹಮದಾಬಾದ್ನ ಭೌತಿಕ ಅನುಸಂಧಾನ ಪ್ರಯೋಗಾಲಯದ ಸಹಯೋಗದೊಂದಿಗೆ ಬಾಹ್ಯಾಕಾಶ ಭೌತಶಾಸ್ತ್ರ ಪ್ರಯೋಗಾಲಯ, ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ಅಧ್ಯಯನ ನಡೆಸಲಾಗುತ್ತಿದೆ ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ.