ಕಾರ್ಕಳ: ಚುನಾವಣೆಯ ಸಂದರ್ಭದಲ್ಲಿ ಟೀಕೆಗಳು,ಆರೋಪ ಪ್ರತ್ಯಾರೋಪಗಳು ಸಹಜ, ಆದರೆ ಕಾಂಗ್ರೆಸ್ ಕೇವಲ ಚುನಾವಣೆಗಾಗಿ ಕಾರ್ಕಳದಲ್ಲಿ ಅತ್ಯಂತ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಆರೋಪಿಸಿದರು.
ಅವರು ಗುರುವಾರ ಕಾರ್ಕಳ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಮುತಾಲಿಕ್ ಅವರು ಕೆಲವು ಹಿಂದೂ ಕಾರ್ಯಕರ್ತರನ್ನು ಬಳಸಿಕೊಂಡು ಬಿಜೆಪಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಕಾರ್ಯಕರ್ತರನ್ನು ಅತಂತ್ರರನ್ನಾಗಿಸಿದ್ದಾರೆ. ಚುನಾವಣೆಯಲ್ಲಿ ಮುತಾಲಿಕ್ ಅವರಿಗೆ ಸೋಲು ಖಚಿತ, ಈ ಹಿನ್ನಲೆಯಲ್ಲಿ ಅವರ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು ಪ್ರಚಾರ ಮಾಡುತ್ತಿದ್ದು,ಮುತಾಲಿಕ್ ಬಣ ಕಾಂಗ್ರೆಸ್ ಪಕ್ಷದ ಬಿ ಟೀಮ್ ಆಗಿ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಕಾರ್ಕಳ ಅತ್ಯಂತ ಸುಸಂಸ್ಕೃತ ಕ್ಷೇತ್ರವಾಗಿದ್ದು ಕಾಂಗ್ರೆಸ್ ದ್ವೇಷದ,ತೇಜೋವಧೆ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಬೆಂಬಲಿಗರು ಬಿಜೆಪಿ ಕಾರ್ಯಕರ್ತ ಕುರಿತು ಓರ್ವ ಮಹಿಳೆಯ ಜತೆ ಥಳುಕು ಹಾಕಿ ಅತ್ಯಂತ ಅಸಹ್ಯವಾಗಿ ಬಿಂಬಿಸುವ ಮೂಲಕ ಮಹಿಳೆಯರಿಗೆ ಅಗೌರವ ತೋರುತ್ತಿದೆ ಇದೇನಾ ಕಾಂಗ್ರೆಸ್ ಸಂಸ್ಕೃತಿ ಎಂದು ಪ್ರಶ್ನಿಸಿದರು.ಅಂದು ದಿ.ಗೋಪಾಲ ಭಂಡಾರಿಯವರು ಜೀವಂತವಾಗಿರುವಾಗಲೇ ಕೇವಲ ಟಿಕೆಟ್ ಸಿಗಲಿಲ್ಲ ಎನ್ನುವ ಸಿಟ್ಟಿಗೆ ಭಂಡಾರಿ ಹಾಗೂ ಮೊಯ್ಲಿಯವರ ಶವಯಾತ್ರೆ ಮಾಡುವ ಮೂಲಕ ಭಂಡಾರಿ ಕುಟುಂಬಕ್ಕೆ ಹಾಗೂ ಕಾರ್ಕಳದ ಜನತೆಗೆ ಅವಮಾನಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯ ಕುರಿತು ಕಾಂಗ್ರೆಸ್ ಬೆಂಬಲಿಗರು ಅತ್ಯಂತ ಕೆಟ್ಟದಾಗಿ ಪೋಸ್ಟ್ ಹಾಕುತ್ತಿದ್ದಾರೆ ಎನ್ನುವ ಆರೋಪಕ್ಕೆ ಬಿಜೆಪಿ ಕಾರ್ಯಕರ್ತರೂ ಕೂಡ ಭಂಡಾರಿಯವರನ್ನು ಕೂಡ ಅವಮಾನಿಸುವಾಗ ಬಿಜೆಪಿ ಯಾಕೆ ಖಂಡಿಸಿಲ್ಲ ಎನ್ನುವ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಸಿದ ಮಹಾವೀರ್ ಹೆಗ್ಡೆ ನಮ್ಮ ಕಾರ್ಯಕರ್ತರು ಅಂತಹ ತಪ್ಪುಗಳನ್ನು ಮಾಡಿದಾಗ ಅವರನ್ನು ಕರೆಯಿಸಿ ಎಚ್ಚರಿಕೆ ನೀಡಿದ್ದೇವೆ ಎಂದರು.

ಒಬ್ಬ ಮಹಿಳೆ ಸಾರ್ವಜನಿಕ ಜೀವನಕ್ಕೆ ಬರಬಾರದು ಎನ್ನುವ ಮಟ್ಟಕ್ಕೆ ಕೆಟ್ಟದ್ದಾಗಿ ಕಾಂಗ್ರೆಸ್ ಬಿಂಬಿಸುತ್ತಿದೆ ಇದು ಸರಿಯೇ ಎನ್ನುವುದನ್ನು ಕಾಂಗ್ರೆಸ್ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದರು. ಮುತಾಲಿಕ್ ಸ್ಪರ್ಧೆಯಿಂದ ಬಿಜೆಪಿಗೆ ಚುನಾವಣೆಯಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ಮುಖಂಡ ಮಣಿರಾಜ ಶೆಟ್ಟಿ, ಮುತಾಲಿಕ್ ಸ್ಪರ್ಧೆಯಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ, ಕಾಂಗ್ರೆಸ್ ಬೆಂಬಲದಿAದ ಮುತಾಲಿಕ್ ಸ್ಪರ್ಧಿಸುತ್ತಿದ್ದಾರೆ, ಕಾಂಗ್ರೆಸ್ ಕಾರ್ಯಕರ್ತರೇ ಅವರ ಬಣದಲ್ಲಿದ್ದು, ಮುತಾಲಿಕ್ ಅವರದ್ದು ಕಾಂಗ್ರೆಸ್ ಕೃಪಾಪೋಷಿತ ಬಿಜೆಪಿ ವಿರೋಧಿ ಧೋರಣೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಮಹೇಶ್ ಶೆಟ್ಟಿ, ಸಾಣೂರು ನರಸಿಂಹ ನಾಯಕ್, ಚುನಾವಣಾ ಪ್ರಭಾರಿ ಬಾಹುಬಲಿ ಪ್ರಸಾದ್ ಉಪಸ್ಥಿತರಿದ್ದರು

