Share this news

ನವದೆಹಲಿ: ಚುನಾವಣೆಯಲ್ಲಿ ಗೆಲ್ಲಬೇಕೆಂದರೆ ಮೊದಲು ಜನರ ಹೃದಯಗಳನ್ನು ಗೆಲ್ಲಬೇಕು. ದೀರ್ಘಕಾಲ ಈಡೇರಿಸಲಾಗದ ತಾತ್ಕಾಲಿಕ ಸುಳ್ಳು ಭರವಸೆಗಳನ್ನು ನೀಡಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇತ್ತೀಚಿನ ವಿಧಾನಸಭೆ ಚುನಾವಣೆ ಫಲಿತಾಂಶಗಳು ಮೋದಿಯ ಗ್ಯಾರಂಟಿ ಜನರ ನಡುವೆ ಪ್ರತಿಧ್ವನಿಸುತ್ತಿದೆ ಎಂಬುದರ ದ್ಯೋತಕ ಎಂದು ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳಿಗೆ ಟಾಂಗ್‌ ನೀಡಿದ್ದಾರೆ.

ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳ ಜತೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, ಜನರ ಬುದ್ಧಿವಂತಿಕೆಯನ್ನು ಯಾರೂ ಕೀಳು ಅಂದಾಜು ಮಾಡಬಾರದು.ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲೇಬೇಕೆಂಬ ನಿಟ್ಟಿನಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರ ಗಿಟ್ಟಿಸಿದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬುದು ಕೆಲ ರಾಜಕೀಯ ಪಕ್ಷಗಳಿಗೆ ಅರ್ಥವೇ ಆಗುವುದಿಲ್ಲ. ಚುನಾವಣೆಗಳನ್ನು ಜನರ ಜೊತೆಗೆ ಹೋಗಿ ಗೆಲ್ಲಬೇಕೇ ಹೊರತು ಸೋಷಿಯಲ್‌ ಮೀಡಿಯಾಗಳಲ್ಲಿ ಅಲ್ಲ. ಚುನಾವಣೆ ಗೆಲ್ಲುವುದಕ್ಕೂ ಮೊದಲು ಮನಃಪೂರ್ವಕವಾಗಿ ಜನರ ಹೃದಯಗಳನ್ನು ಗೆಲ್ಲಬೇಕು ಎಂದು ಹೇಳಿದರು.
ನಮ್ಮ ಸರ್ಕಾರ ‘ಮಾಯಿ-ಬಾಪ್‌’ ಸರ್ಕಾರ ಅಲ್ಲ. ನಮ್ಮದು ತಾಯಿ ತಂದೆಯರಿಗೆ ಸೇವೆ ಮಾಡುವ ಸರ್ಕಾರ. ಹೇಗೆ ಮಕ್ಕಳು ತಮ್ಮ ಅಪ್ಪ ಅಮ್ಮನ ಸೇವೆ ಮಾಡುತ್ತಾರೋ ಹಾಗೆ ಈ ಮೋದಿ ನಿಮ್ಮ ಸೇವೆ ಮಾಡುತ್ತಿದ್ದಾನೆ. ಮೋದಿ ಬಡವರಿಗಾಗಿ, ಅವಕಾಶ ವಂಚಿತರಿಗಾಗಿ ಕೆಲಸ ಮಾಡುತ್ತಾನೆ. ಬರೀ ಸೇವೆಯಲ್ಲ, ಅವರ ಪೂಜೆ ಮಾಡುತ್ತಾನೆ. ನನಗೆ ಎಲ್ಲಾ ಬಡವರೂ ವಿಐಪಿಗಳು, ಎಲ್ಲಾ ತಾಯಂದಿರು, ಎಲ್ಲಾ ಹೆಣ್ಣುಮಕ್ಕಳು, ಎಲ್ಲಾ ರೈತರು, ಎಲ್ಲಾ ಯುವಕರೂ ವಿಐಪಿಗಳು ಎಂದು ಮೋದಿ ಬಣ್ಣಿಸಿದರು.

ಗ್ಯಾರಂಟಿಗಳ ಬಗ್ಗೆ ಮತ್ತೆ ಕಿಡಿ: ‘ಕೆಲ ವಿಪಕ್ಷಗಳು ತಮ್ಮ ಸ್ವಾರ್ಥ ರಾಜಕೀಯ ಅಜೆಂಡಾಗಳನ್ನು ಬಿಟ್ಟು ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದ್ದರೆ ಇಂದು ದೇಶದಲ್ಲಿ ಇಷ್ಟೊಂದು ಜನರು ಅವಕಾಶ ವಂಚಿತರಾಗಿ ಬಾಳುವ ಅಗತ್ಯವಿರಲಿಲ್ಲ. ದಶಕಗಳ ಕಾಲ ದೇಶ ಆಳಿದವರು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದರೆ ಇಂದು ಈ ಮೋದಿ ಗ್ಯಾರಂಟಿಗಳನ್ನು ನೀಡುವ ಅಗತ್ಯವೇ ಇರಲಿಲ್ಲ. ಇವೆಲ್ಲವೂ 50 ವರ್ಷಗಳ ಹಿಂದೆಯೇ ಈಡೇರಿರುತ್ತಿದ್ದವು ಎಂದು ಕಾಂಗ್ರೆಸ್‌ ಪಕ್ಷದ ವಿರುದ್ಧ ಗುಡುಗಿದರು. ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು ಜನರಿಗೆ ತಲುಪಿವೆಯೇ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಹಾಗೂ ಯೋಜನೆಯ ಲಾಭ ಸಿಗದವರಿಗೆ ಅದನ್ನು ದೊರಕಿಸಿಕೊಡಲು ವಿಕಸಿತ ಭಾರತ ಸಂಕಲ್ಪ ಯಾತ್ರೆ ಹೆಸರಿನಲ್ಲಿ ದೇಶದ ಬೇರೆ ಬೇರೆ ಕಡೆ ‘ರಥಗಳು’ ಸಂಚರಿಸುತ್ತಿವೆ. ಈ ಯಾತ್ರೆ ಆರಂಭಗೊಂಡ ಬಳಿಕ 1 ಲಕ್ಷ ಹೊಸ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ ಎಂದು ಪ್ರಧಾನಿ ಹೇಳಿದರು

 

Leave a Reply

Your email address will not be published. Required fields are marked *