ನವದೆಹಲಿ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿಲುವು ಸರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಕುರಿತು ಜಾಗತಿಕ ಮುಸ್ಲಿಂ ರಾಷ್ಟ್ರಗಳ ಸಂಘಟನೆ ತೀವೃ ಕಳವಳ ವ್ಯಕ್ತಪಡಿಸಿದೆ,ಈ ಬೆನ್ನಲ್ಲೇ ಮುಸ್ಲಿಂ ರಾಷ್ಟ್ರಗಳ ಸಂಘಟನೆಯನ್ನು ಭಾರತ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಸುಪ್ರೀಂ ಕೋರ್ಟ್ ನಿರ್ಧಾರದ ಬಗ್ಗೆ ಒಐಸಿ ಕಳವಳ ವ್ಯಕ್ತಪಡಿಸಿದ ಒಐಸಿ ಸೆಕ್ರೆಟರಿಯೇಟ್ ಬಿಡುಗಡೆ ಮಾಡಿದ ಹೇಳಿಕೆಗೆ ಸಂಬಂಧಿಸಿದಂತೆ,ಭಾರತದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ, ಭಾರತೀಯ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಇಸ್ಲಾಮಿಕ್ ಸಹಕಾರ ಸಂಘಟನೆಯ (OIC) ಜನರಲ್ ಸೆಕ್ರೆಟರಿಯೇಟ್ ಹೊರಡಿಸಿದ ಹೇಳಿಕೆಯನ್ನು ಭಾರತ ತಿರಸ್ಕರಿಸುತ್ತದೆ ಎಂದು ಹೇಳಿದರು.
ಇದು ಭಾರತದ ಆಂತರಿಕ ವಿಚಾರವಾಗಿದೆ, ಮುಸ್ಲಿಂ ರಾಷ್ಟ್ರಗಳ ಸಂಘಟನೆಯ ಹೇಳಿಕೆ ತಪ್ಪು ಮಾಹಿತಿ ಮತ್ತು ದುರುದ್ದೇಶದಿಂದ ಕೂಡಿದೆ ಎಂದು ಅರಿಂದಮ್ ಬಾಗ್ಚಿ ಹೇಳಿದರು. ಸರಣಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಗಡಿಯಾಚೆಗಿನ ಭಯೋತ್ಪಾದನಾ ಸಂಘಟನೆಗಳ ಆಜ್ಞೆಯ ಮೇರೆಗೆ ಒಐಸಿ ಇಂತಹ ಅಸಂಬದ್ಧ ಹೇಳಿಕೆ ನೀಡಿದೆ. ಇಂತಹ ಹೇಳಿಕೆಗಳು ಒಐಸಿಯ ವಿಶ್ವಾಸಾರ್ಹತೆಯನ್ನು ದುರ್ಬಲಗೊಳಿಸುತ್ತವೆ ಎಂದು ಅವರು ಹೇಳಿದರು.ಜಮ್ಮು ಮತ್ತು ಕಾಶ್ಮೀರ ರಾಜ್ಯದಿಂದ 370ನೇ ವಿಧಿಯನ್ನ ತೆಗೆದುಹಾಕುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದೆ. ಕೇಂದ್ರ ಸರ್ಕಾರವು ಆಗಸ್ಟ್ 5, 2019 ರಂದು ಸಂವಿಧಾನದ ಈ ನಿಬಂಧನೆಯನ್ನು ರದ್ದುಗೊಳಿಸಿತು. ಈ ನಿಬಂಧನೆಯು ಭಾರತದ ಇತರ ರಾಜ್ಯಗಳಿಗಿಂತ ಭಿನ್ನವಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನ ನೀಡಿತು. ಇದರ ನಂತರ, ಭಾರತ ಸರ್ಕಾರದ ಈ ಕ್ರಮವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಾಯಿತು, ಇದನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿತು ಮತ್ತು 370ನೇ ವಿಧಿಯನ್ನ ತೆಗೆದುಹಾಕುವ ನಿರ್ಧಾರವು ಮಾನ್ಯವಾಗಿದೆ ಎಂದಿದೆ. ಇದರೊಂದಿಗೆ, ಲಡಾಖ್ ಪ್ರದೇಶವನ್ನು ಜಮ್ಮು ಮತ್ತು ಕಾಶ್ಮೀರದಿಂದ ಪ್ರತ್ಯೇಕವಾದ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ನಿರ್ಧಾರವೂ ಸಮರ್ಥನೀಯವಾಗಿದೆ ಎಂದಿದೆ.








